Advertisement

ಕತ್ತಲ ಸ್ವಪ್ನಕ್ಕೆ ಸೂರ್ಯನ ಬೆಳಕು!

12:05 PM Jun 30, 2018 | Sharanya Alva |

ಪ್ರೀತಿ ಮಾಡೋರಿಗೆ ಕವಿತೆ ನೆನಪಾಗುತ್ತೆ. ಆದರೆ, ಅವನಿಗೆ ಅವಳು ನೆನಪಾದ್ರೆ ಕೋಪ ಬರುತ್ತೆ…ಇಷ್ಟು ಹೇಳಿದ ಮೇಲೆ ಸುಲಭವಾಗಿ ಇದೊಂದು ಲವ್‌ಸ್ಟೋರಿ ಚಿತ್ರ ಅಂತ ನಿರ್ಧರಿಸಬಹುದು. ಇಲ್ಲೊಂದು ಕಾಲೇಜ್‌ ಲವ್‌ಸ್ಟೋರಿ ಇದೆ. ಹಾಗಂತ ಆ ಲವ್‌ಸ್ಟೋರಿ “ಹೈಪ್‌’ ಅಂದುಕೊಳ್ಳುವಂತಿಲ್ಲ. ಜಗತ್ತಿನಲ್ಲಿ ಪ್ರತಿಯೊಂದು ನಡೆಯೋದು ನಂಬಿಕೆ, ಪ್ರೀತಿ ಮತ್ತು ವಿಶ್ವಾಸದ ಮೇಲೆ. ಅಂಥದ್ದೊಂದು ಸಂದೇಶ ಸಾರಿರುವುದು ಚಿತ್ರದ ಸಣ್ಣದ್ದೊಂದು ಸಾರ್ಥಕತೆ. ಕಥೆ ಸರಳ. ಈಗಿನ ಟ್ರೆಂಡ್‌ಗೆ ತಕ್ಕಂತಹ ಕಥೆ ಇಲ್ಲಿದ್ದರೂ, ಇನ್ನಷ್ಟು ಬಿಗಿ ನಿರೂಪಣೆಯ ಅಗತ್ಯವಿತ್ತು. ವಾಸ್ತವ ಅಂಶಗಳೊಂದಿಗೆ ಸಾಗುವ ಚಿತ್ರದಲ್ಲಿ ಎಲ್ಲವೂ ಇದೆ. ಆದರೆ, ಎಲ್ಲವನ್ನೂ ಒಪ್ಪಿಕೊಳ್ಳಲು ಸಾಧ್ಯವೂ ಇಲ್ಲ. ಹಾಗಂತ, ಕೆಲವನ್ನು ಬದಿಗಿರಿಸಲೂ ಸಾಧ್ಯವಿಲ್ಲ. ಒಂದು ಪ್ರೀತಿ, ನಂಬಿಕೆ ಮತ್ತು ಸಂಬಂಧಗಳ ಮೌಲ್ಯ ಚಿತ್ರದ “ಹೈಪ್‌’ ಎನ್ನಬಹುದು. ಅದು ಬಿಟ್ಟರೆ, ಹೇಳಿಕೊಳ್ಳುವಂತಹ ಪವಾಡಗಳೇನೂ ನಡೆಯೋದಿಲ್ಲ.

Advertisement

ಒಂದು ಪ್ರೇಮಕಥೆಯ ಜೊತೆ ಜೊತೆಗೆ ಅತ್ಯಾಚಾರ, ಕೊಲೆ, ಸುಲಿಗೆ ವಿಷಯವನ್ನು ಅಳವಡಿಸಿ, ಸಿನಿಮಾದುದ್ದಕ್ಕೂ ಸಣ್ಣ ಕುತೂಹಲ ಇಟ್ಟುಕೊಂಡು ಹೋಗಿರುವುದು ನಿರ್ದೇಶಕರ ಜಾಣತನ. ಕೆಲವೆಡೆ ಅವರ ದಡ್ಡತನವೂ ಎದ್ದು ಕಾಣುತ್ತದೆ. ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದರೆ, ಒಂದು ನೀಟ್‌ ಸಿನಿಮಾ ಆಗುವ ಲಕ್ಷಣವಿತ್ತು. ಆ ಅವಕಾಶ ಸ್ವಲ್ಪದರಲ್ಲೇ ಕೈತಪ್ಪಿದೆ ಎನ್ನಬಹುದು. ಚಿತ್ರ ಶುರುವಾಗೋದೇ ಒಂದು ಅತ್ಯಾಚಾರ, ಕೊಲೆ ಮೂಲಕ.

ಮೊದಲರ್ಧ ನಿಧಾನಗತಿಯಲ್ಲಿ ಸಾಗುವ ಚಿತ್ರ, ದ್ವಿತಿಯಾರ್ಧದಲ್ಲಿ ಒಂದಷ್ಟು ಹೊಸ ವಿಷಯಗಳೊಂದಿಗೆ ಚುರುಕುಗೊಳ್ಳುತ್ತೆ. ಮಧ್ಯೆ ಎಲ್ಲೋ ಹಳಿತಪ್ಪಿತು ಅನ್ನುವಷ್ಟರಲ್ಲಿ ಹಾಡೊಂದು ಕಾಣಿಸಿಕೊಂಡು ಪುನಃ ಅದೇ ಹಳಿಗೆ ಬಂದು ನಿಲ್ಲುತ್ತೆ. ಎಲ್ಲಾ ಕಾಲೇಜ್‌ ಲವ್‌ಸ್ಟೋರಿಗಳ ಸಾಲಿಗೆ ಇದೂ ಸೇರಿದೆಯಾದರೂ, ವಾಸ್ತವತೆಯ ಹೂರಣ ತಕ್ಕಮಟ್ಟಿಗೆ ಇಷ್ಟವಾಗುತ್ತೆ. ಅದು ಹೊರತುಪಡಿಸಿದರೆ, “ಹೈಪ್‌’ ಆಗುವ ಅಂಶಗಳ ಬಗ್ಗೆ ಹೇಳುವುದು ಕಷ್ಟ.

ಗಂಭೀರವಾಗಿ ಸಾಗುವ ಚಿತ್ರಕ್ಕೆ ಹಾಸ್ಯ ಬೇಕೋ ಬೇಡವೋ ಎಂಬ ದ್ವಂದ್ವ ನಿರ್ದೇಶಕರನ್ನು ಕಾಡಿದೆ. ಹಾಗಾಗಿಯೇ ಇಲ್ಲಿ ಹಾಸ್ಯ ಅಪಹಾಸ್ಯವಾಗಿಬಿಟ್ಟಿದೆ. ವಿನಾಕರಣ ಹಾಸ್ಯ ತೋರಿಸಿ ನಗೆಪಾಟಿಲಾಗಿದ್ದಾರೆ. ಆ ಮೂಲಕ ನೋಡುಗರ ತಾಳ್ಮೆ ಪರೀಕ್ಷಿಸಿರುವುದೂ ಹೌದು. ಹಾಸ್ಯಕ್ಕೆ ಕೊಡುವ ಗಮನ ಇನ್ನಷ್ಟು ಚಿತ್ರಕಥೆಗೆ ಕೊಟ್ಟಿದ್ದರೆ, ಒಂದು ವರ್ಗಕ್ಕಂತೂ ಇಷ್ಟವಾಗಿರುತ್ತಿತ್ತು. ಆದರೂ, ದ್ವಿತಿಯಾರ್ಧದಲ್ಲಿರುವ ಸಣ್ಣ ಅಂಶ ನೋಡುಗರಲ್ಲಿ ಸಮಾಧಾನಪಡಿಸುತ್ತೆ. ಎರಡು ಗಂಟೆ ಕುಳಿತರೂ ಕೊನೆಯಲ್ಲಿ ಒಂದು ಸಣ್ಣ ಸಂದೇಶ ಸಿಕ್ಕ ನೆಮ್ಮದಿಗೇನೂ ಭಂಗವಿಲ್ಲ. ಅಂಥದ್ದೊಂದು ಸಣ್ಣ ಸಂದೇಶ ತಿಳಿಯುವ ಕುತೂಹಲವೇನಾದರೂ ಇದ್ದರೆ, “ಹೈಪರ್‌’ ನೋಡಬಹುದು.

ಹೆಸರು ಸೂರ್ಯ. ಅನಾಥನಾಗಿರುವ ಅವನಿಗೆ ಅತ್ತೆ-ಮಾವನೇ ಎಲ್ಲ. ಕಾಲೇಜು ಓದುವ ಕ್ಯಾಂಪಸಲ್ಲಿ ಸ್ವಪ್ನ ಎಂಬ ಚೆಲುವೆಯ ಹಿಂದಿಂದೆ ಬೀಳುವ ಸೂರ್ಯನನ್ನು ಆಕೆ ಪೊರ್ಕಿ ಅಂತಾನೇ ಭಾವಿಸಿರುತ್ತಾಳೆ. ಸೂರ್ಯ ನೋಡೋಕೆ ಒರಟಾಗಿದ್ದರೂ, ಮನಸ್ಸು ಮಾತ್ರ ಮೃದು. ಮೆಲ್ಲನೆ ಇಬ್ಬರ ಲವ್‌ಸ್ಟೋರಿ ಶುರುವಾಗುತ್ತೆ. ಅವರ ಲವ್‌ಸ್ಟೋರಿ ಮಧ್ಯೆ ಕಡ್ಡಿ ಅಲ್ಲಾಡಿಸೋನ ಎಂಟ್ರಿ. ಅಲ್ಲಿಂದ ಅವರ ಲವ್‌ಗೊಂದು ಬ್ರೇಕಪ್‌. ಆಮೇಲೆ ಏನಾಗುತ್ತೆ, ಆರಂಭದಲ್ಲಿ ನಡೆಯೋ, ಅತ್ಯಾಚಾರ, ಕೊಲೆಯ ಹಿಂದೆ ಯಾರ್ಯಾರಿದ್ದಾರೆ. ಅವರನ್ನು ಹೀರೋ ಪತ್ತೆ ಹಚ್ಚಿ ಬಗ್ಗು ಬಡಿಯುತ್ತಾನಾ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ, ಸಿನಿಮಾ ನೋಡಲ್ಲಡ್ಡಿಯಿಲ್ಲ.

Advertisement

ಅರ್ಜುನ್‌ ಆರ್ಯ ಅವರ ಡ್ಯಾನ್ಸ್‌ ಮತ್ತು ಫೈಟ್‌ನಲ್ಲಿ ಜೋಶ್‌ ಇದೆ. ನಟನೆಗಿನ್ನಷ್ಟು ತಯಾರಿ ಬೇಕು. ಬಾಡಿಲಾಂಗ್ವೇಜ್‌ ಕಡೆಗೂ ಗಮನಿಸಬೇಕು. ಶೀಲಾಗೆ ಒಳ್ಳೇ ಪಾತ್ರ ಸಿಕ್ಕಿದೆ. ಆವರಿನ್ನಷ್ಟು ಎಫ‌ರ್ಟ್‌ ಹಾಕಬಹುದಿತ್ತು. ಅಚ್ಯುತ್‌ ಕುಮಾರ್‌ ಒಳ್ಳೆಯ ತಂದೆಯಾಗಿ ಇಷ್ಟವಾಗುತ್ತಾರೆ. ರಂಗಾಯಣ ರಘು, ಬುಲೆಟ್‌ ಪ್ರಕಾಶ್‌ ಕಾಮಿಡಿ ಅವರಿಗೇ ಪ್ರೀತಿ. ಉಳಿದಂತೆ ಕಾಣುವರ್ಯಾರೂ ಗಮನಸೆಳೆಯಲ್ಲ ಡಿ. ಇಮಾನ್‌ ಸಂಗೀತದಲ್ಲಿ ಒಂದು ಹಾಡು ಪರವಾಗಿಲ್ಲ. 

ಚಿತ್ರ : ಹೈಪರ್‌
ನಿರ್ಮಾಣ : ಎಂ.ಕಾರ್ತಿಕ್‌
ನಿರ್ದೇಶನ : ಗಣೇಶ್‌ ವಿನಾಯಕ್‌
ತಾರಾಗಣ : ಅರ್ಜುನ್‌ ಆರ್ಯ, ಶೀಲಾ, ರಂಗಾಯಣ ರಘು, ಅಚ್ಯುತ್‌ಕುಮಾರ್‌, ಶೋಭರಾಜ್‌, ಬುಲೆಟ್‌ ಪ್ರಕಾಶ್‌, ಶ್ರೀನಿವಾಸ್‌ ಪ್ರಭು, ವೀಣಾ ಸುಂದರ್‌ ಮುಂತಾದವರು.

– ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next