Advertisement

ಹೈಕ ವಿಮೋಚನೆಗೆ ಹೋರಾಡಿದ ನಿತ್ಯಸ್ಮರಣೀಯರು

11:26 AM Sep 17, 2018 | |

ಯಾದಗಿರಿ: ಹೈದ್ರಾಬಾದ ಕರ್ನಾಟಕದ ವಿಮೋಚನೆಗಾಗಿ ರಜಾಕರ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡಿದ ನಗರದ ಗಾಂಧಿ  ವೃತ್ತದಲ್ಲಿ ರಕ್ತ ಸುರಿಸಿದ ಸ್ವಾತಂತ್ರ್ಯಾ ಸೇನಾನಿ ಹಾಗೂ ದಯಾನಂದ ಶಿಕ್ಷಣ ಸಂಸ್ಥೆ ಸಂಸ್ಥಾಪಕ, ಆರ್ಯ ಸಮಾಜದ ಪ್ರಮುಖ ಲಿಂ. ಈಶ್ವರ ಲಾಲ್‌ ಭಟ್ಟಡ ಅವರೊಂದಿಗೆ ಹೈ.ಕ ವಿಮೋಚನೆಗಾಗಿ ಹೋರಾಡಿದ ಮಹನಿಯರು ನಿತ್ಯ ಸ್ಮರಣಿಯರು.

Advertisement

71ನೇ ಹೈ.ಕ. ವಿಮೋಚನಾ ಚಳವಳಿ ಸಂದರ್ಭದಲ್ಲಿ ಪಟ್ಟಣದಲ್ಲಿ ನಡೆದ ಹೋರಾಟದ ಘಟನೆಯನ್ನು ಮೆಲುಕು ಹಾಕುತ್ತ, ಈ ಭಾಗವನ್ನು ರಜಾಕಾರರ ಕಪಿಮುಷ್ಠಿಯಿಂದ ಸ್ವಾತಂತ್ರ್ಯಾವಾಗಲು ಹೋರಾಡಿದವರನ್ನು “ಉದಯವಾಣಿ’ ಸ್ಮರಿಸಿದೆ. 1947ರ ವಿಜಯ ದಶಮಿ ದಿನ ಯಾದಗಿರಿಯಲ್ಲಿ ಸೀಮೋಲ್ಲಂಘನದ ಮೆರವಣಿಗೆ ಹೊರಟಿತ್ತು. ಈ ನಡುವೆ ರಜಾಕಾರರು ಮೆರವಣಿಗೆ ಮೇಲೆ ದಾಳಿ ನಡೆಸಿದ್ದರು. ಮುಖ್ಯವಾಗಿ ಅವರ ದಾಳಿ ಉದ್ದೇಶ ಸ್ವಾತಂತ್ರ್ಯಾ ಹೋರಾಟಗಾರ, ನಿಜಾಮನಿಗೆ ಸಿಂಹಸ್ವಪ್ನವಾಗಿದ್ದ ತರುಣ ಹೋರಾಟಗಾರ ಈಶ್ವರಲಾಲ್‌ ಭಟ್ಟಡ ಅವರ ಮೇಲೆ ಹಲ್ಲೆ ನಡೆಸುವುದಾಗಿತ್ತು. 

ದಾಳಿ ಸಂದರ್ಭದಲ್ಲಿ ಭಟ್ಟಡ ಅವರ ಮೇಲೆ ಹಲ್ಲೆ ನಡೆಸಿದ ದುಷ್ಟ ರಜಾಕಾರರ ಪೈಕಿ ಒಬ್ಬ ಚೂರಿಯಿಂದ ಈಶ್ವರ ಲಾಲ್‌ ಹೊಟ್ಟೆಗೆ ತಿವಿದ. ರಕ್ತ ಒಸರುತ್ತಿದ್ದ ಭಟ್ಟಡ ಗಾಂಧಿ ವೃತ್ತದಲ್ಲಿ ನೆರಕ್ಕುರುಳಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಇಷ್ಟೆಲ್ಲ ಘಟನೆಗಳು ನಡೆದರೂ ಹಲ್ಲೆ ಮಾಡಿದ ರಜಾಕಾರರು ಪೊಲೀಸ್‌ ಠಾಣೆಗೆ ಹೋಗಿ ತಾವು ತಮ್ಮ ಪಾಡಿಗೆ ಹೋಗುತ್ತಿರುವಾಗ ಮೆರವಣಿಗೆಯಲ್ಲಿ ಬರುತ್ತಿದ್ದ ಕೊಯಿಲೂರು
ಮಲ್ಲಪ್ಪ, ಜ್ಞಾನೇಂದ್ರ ಶರ್ಮಾ, ಈಶ್ವರಲಾಲ್‌ ಭಟ್ಟಡ, ಜಗನ್ನಾಥರಾವ್‌ ಚಂಡ್ರಕಿ, ಹರಿದಾಸಬಾಯಿ ಮುಂತಾದವರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಅವರೊಂದಿಗೆ ಹೋರಾಡಿ ಆತ್ಮರಕ್ಷಣೆ ಮಾಡಿಕೊಂಡು ಓಡಿ ಬಂದಿದ್ದೇವೆ ಎಂದು ಸುಳ್ಳು ದೂರು ಸಲ್ಲಿಸಿದ್ದರು.

ಅಂದೇರಿ ನಗರಿಯ ಆಡಳಿತದಲ್ಲಿ ಈ ಐವರ ಮೇಲೆ ದೂರು ದಾಖಲಾಯಿತು. ಬಸವಕಲ್ಯಾಣದ ಖ್ಯಾತ ವಕೀಲ ಗಣಪತಿ ಶಾಸ್ತ್ರೀ ಎಷ್ಟೇ ವಾದ ಮಾಡಿದರೂ ಎಲ್ಲರಿಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಭಟ್ಟಡ ಅವರ ಈ ರೋಮಾಂಚನಕಾರಿ ಘಟನೆಯನ್ನು ಯಾದಗಿರಿ ಜನತೆ ಸ್ಮರಿಸಲೇಬೇಕಾಗುತ್ತದೆ.

ಭಟ್ಟಡರಂತೆ ಲಿಂ| ವಿಶ್ವನಾಥರೆಡ್ಡಿ ಮುದ್ನಾಳ, ಗುರುಮಠಕಲ್‌ನ ವಿದ್ಯಾಧರ ಗುರೂಜಿ, ಸರ್ದಾರ ಶರಣಗೌಡ ಇನಾಂದಾರ, ಸ್ವಾಮಿ ರಮಾನಂದ ತೀರ್ಥರು, ವಿಪಿ ದೇವಳಗಾಂವಕರ್‌, ಚೆನ್ನಬಸವ ಕುಳಗೇರಿ, ಅಣ್ಣಾರಾವ್‌ ವೀರಭದ್ರಪ್ಪ ಪಾಟೀಲ, ಅನ್ನಪೂರ್ಣಸ್ವಾಮಿ ಎಲ್ಲೆರಿ, ಶಿವಮೂರ್ತಿಸ್ವಾಮಿ ಅಳವಂಡಿ, ವೀರಭದ್ರಪ್ಪ ಶಿರೂರ, ತೀರ್ಥನಕೇಸರಿ ಜಯರಾಮಾಚಾರ್ಯ ಕೊಪ್ಪಳ, ಮಲ್ಲಣ್ಣ ಅಂಬಿಗೇರ, ಹುಮನಾಬಾದ ಪಂ. ಶಿವಚಂದ್ರ, ರಾಮಚಂದ್ರ ವೀರಪ್ಪ, ವಿರೂಪಾಕ್ಷಗೌಡ ರಾಜನಕೊಳ್ಳೂರು, ಬ್ಯಾರಿಸ್ಟರ್‌ ರಾಜಾ ವೆಂಕಟಪ್ಪ ನಾಯಕ, ಅಚ್ಚಪ್ಪಗೌಡ ಸುಬೇದಾರ ಸಗರ ಹಾಗೂ ಮುಂತಾದ ಹೋರಾಟಗಾರರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. 

Advertisement

ಹೈ.ಕ ವಿಮೋಚನೆಗೆ ಹೋರಾಟ ಮಾಡಿದ ಸರ್ವರನ್ನು ಸ್ಮರಿಸುತ್ತ ಗೌರವ ಸಲ್ಲಿಸುವದರೊಂದಿಗೆ ಸೆ. 17ರಂದು ಧೀಮಂತ ಹೋರಾಟಗಾರರಿಗೆ ಒಂದು ಸೆಲ್ಯೂಟ್‌ ನೀಡಬೇಕಾದುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಭಾಗದ ನಾಗರಿಕರು ಅಂದಿನ ಧ್ವಜಾರೋಹಣದಲ್ಲಿ ಪಾಲ್ಗೊಂಡು ಅವರ ತ್ಯಾಗವನ್ನು ಗೌರವಿಸೋಣ.
ಅಯ್ಯಣ್ಣ ಹುಂಡೇಕಾರ್‌, ಸಾಹಿತಿ

„ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next