ಇಂಡಿ: ನಮ್ಮ ಪಕ್ಷದ ಮುಖಂಡರು ಯಾವುದೇ ಸದಸ್ಯರನ್ನು ಅಪಹರಣ ಮಾಡಿಲ್ಲ. ಸ್ಥಳೀಯ ಶಾಸಕರೇ ನಮ್ಮ ಸದಸ್ಯರನ್ನು ಒಂದು ತಿಂಗಳಿನಿಂದ ನಮ್ಮ ಸಂಪರ್ಕಕ್ಕೆ ಬರದಂತೆ ನೋಡಿಕೊಂಡು, ಕೊನೆಗೆ ತಮ್ಮ ಕೆಲಸ ಆಗಲ್ಲ ಎಂದು ಗೊತ್ತಾದ ತಕ್ಷಣ ಮಿನಿ ವಿಧಾನಸೌದ ಮುಂದೆ ಪ್ರತಿಭಟನೆಯ ಹೈಡ್ರಾಮಾ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.
ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ನಾವು ನಮ್ಮ ಪಕ್ಷದ ಸದಸ್ಯ ಭೀಮನಗೌಡ ಪಾಟೀಲರ ಮನವೊಲಿಸಿ ಪಕ್ಷ ನಿಷ್ಠರಾಗಿರಿ, ನಿಮಗೆ ಕಾಂಗ್ರೆಸ್ ಪಕ್ಷದವರು ಟಿಕೆಟ್ ನೀಡದಿದ್ದಾಗ ನಾವು ಕರೆದು ಟಿಕೆಟ್ ನೀಡಿ ನಿಮ್ಮ ಮನೆತನಕ್ಕೆ ಗೌರವ ನೀಡಿದ್ದೇವೆ ಎಂದು ಅವರಿಗೆ ತಿಳುವಳಿಕೆ ಹೇಳಿ ಕರೆದುಕೊಂಡು ಬಂದಿದ್ದೇವೆ ಎಂದರು.
ಶಾಸಕರು ದಾದಾಗೌಡರ ಮನೆತನದ ಮೇಲೆ ವಿಶೇಷ ಕಾಳಜಿ ಇದೆ ಎಂದು ಹೇಳಿದ್ದಾರೆ. ಆದರೆ ಪುರಸಭೆ ಚುನಾವಣೆಯಲ್ಲಿ ಭೀಮನಗೌಡರಿಗೆ ಏಕೆ ಟಿಕೆಟ್ ನೀಡಲಿಲ್ಲ? ಸೋಲನ್ನು ಒಪ್ಪಿಕೊಳ್ಳದ ಶಾಸಕರು ಯಾರನ್ನೋ ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಅದನ್ನು ಒಪ್ಪಿಕೊಳ್ಳಬೇಕು ಎಂದರು.
ನಮ್ಮ ಸದಸ್ಯರು ಹೆಚ್ಚಿಗೆ ಇದ್ದರೂ ಸಹಿತ ಶಾಸಕರು ಪಕ್ಷೇತರ, ಜೆಡಿಎಸ್ ಹಾಗೂ ನಮ್ಮ ಪಕ್ಷದ ಓರ್ವ ಸದಸ್ಯರಿಗೂ ಪ್ರೀತಿ ವಿಶ್ವಾಸದಿಂದಲೋ, ಹಣದ ಆಮಿಷ ತೋರಿಸಿ ಅಧಿಕಾರ ಹಿಡಿದರು. ಆದರೆ ನಾವು ಯಾವುದಕ್ಕೂ ಪ್ರತಿಭಟನೆ ಮಾಡಲಿಲ್ಲ. ಬಿಜೆಪಿಯವರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ. ಯಾರು ಗೂಂಡಾಗಿರಿ ಮಾಡುತ್ತಾರೆ, ಯಾರು ಹೆದರಿಸಿ ರಾಜಕಾರಣ ಮಾಡುತ್ತಾರೆ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಸಿದ್ದಲಿಂಗ ಹಂಜಗಿ, ರವಿಕಾಂತ ಬಗಲಿ, ಶಿವಯೋಗೆಪ್ಪ ನೇದಲಗಿ, ಹನುಮಂತ್ರಾಯಗೌಡ ಪಾಟೀಲ, ಅನಿಲ ಜಮಾದಾರ, ರವಿ ವಗ್ಗೆ, ಯಲ್ಲಪ್ಪ ಹದರಿ, ರಾಜಶೇಖರ ಯರಗಲ್ ಇದ್ದರು.