Advertisement
ಪ್ರಮುಖವಾಗಿ ಎರಡು ಬಣಗಳ ಬಡಿದಾಟ ಹೈಕಮಾಂಡ್ ಅಂಗಳವನ್ನು ತಲುಪಿದ್ದು ಸ್ಪಷ್ಟ ನಿರ್ಧಾರ ತಳೆಯಲು ಮೀನ ಮೇಷ ಎಣಿಸುತ್ತಿದ್ದ ವರಿಷ್ಠರು ರಾಜ್ಯ ಬಿಜೆಪಿಯ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದೇ ಸದ್ಯ ರಾಜಕೀಯ ವಲಯದ ಕುತೂಹಲ. ಲೋಕಸಭಾ ಚುನಾವಣೆಯಲ್ಲಿ ಒಂದು ಮಟ್ಟಕ್ಕೆ ಹೊಂದಾಣಿಕೆ ಮಾಡಿಕೊಂಡು, ಜೆಡಿಎಸ್ ನೊಂದಿಗೆ ಕೈಜೋಡಿಸಿ ಯಶಸ್ಸು ಕಾಣಲು ಯಶಸ್ವಿಯಾಗಿದ್ದ ಬಿಜೆಪಿ ಗೆ ಕೆಲ ಕ್ಷೇತ್ರಗಳ ಸೋಲು ಆಂತರಿಕ ಕಚ್ಚಾಟದಿಂದಲೇ ಆಗಿದೆ ಎನ್ನುವುದು ಸ್ಪಷ್ಟವಾಗಿ ಅರಿವಿಗೆ ಬಂದಿತ್ತು. ಅನೇಕರು ಈ ಕುರಿತು ಬಹಿರಂಗ ಅಸಮಾಧಾನವನ್ನೂ ಹೊರ ಹಾಕಿದ್ದರು.
ಬಿಜೆಪಿ ರಾಜ್ಯ ಬಿಜೆಪಿ ಸಂಘಟನೆಯ ವಿಚಾರದಲ್ಲಿ ಹೊಸ ಲೆಕ್ಕಾಚಾರಗಳನ್ನು ಮಾಡಿ, ವರಿಷ್ಠ ನಾಯಕ ಮಾಜಿ ಸಿಎಂ ಯಡಿಯೂರಪ್ಪ ಅವರ ಮತಬ್ಯಾಂಕ್ ಮರಳಿ ಪಡೆಯಲು ಮತ್ತು ಉಳಿಸಿಕೊಳ್ಳಲು ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿತ್ತು. ಅನೇಕರಿಗೆ ಈ ವಿಚಾರದಲ್ಲಿ ಅಸಮಾಧಾನ ಇದ್ದರೂ ಬಹಿರಂಗ ಅಸಮಾಧಾನ ಹೊರ ಹಾಕುತ್ತಲೇ ನಿರಂತರ ವಾಗ್ದಾಳಿ ಮಾಡುತ್ತಲೇ ಇದ್ದವರು ವಿಜಾಪುರದ ಶಾಸಕ,ಮಾಜಿ ಕೇಂದ್ರ ಸಚಿವ, ಬಸನಗೌಡ ಪಾಟೀಲ್ ಯತ್ನಾಳ್.
Related Articles
Advertisement
ಯತ್ನಾಳ್ ಅವರು ಏಕಾಂಗಿಯಾಗಿ ಟೀಕಾ ಪ್ರಹಾರ ಮಾಡಿದರೆ ಅದು ಗಂಭೀರ ಪ್ರಮಾಣದಲ್ಲಿ ತಲೆ ನೋವಿನ ವಿಚಾರ ಎನಿಸಿಕೊಳ್ಳುತ್ತಿರಲಿಲ್ಲ. ಒಂದೆಡೆ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ, ಇನ್ನೊಂದೆಡೆ ಹಿಂದುತ್ವದ ವಿಚಾರದಲ್ಲಿ ಮುಂದಿರುವ ಯತ್ನಾಳ್ ಇತರ ಪ್ರಮುಖ ನಾಯಕರನ್ನೂ ಸಂಘಟಿಸಿ ಪಕ್ಷದ ರಾಜ್ಯ ನಾಯಕತ್ವದ ವಿರುದ್ದ ಹೋರಾಟಕ್ಕಿಳಿದಿರುವುದು ವರಿಷ್ಠರು ಯಾವುದಾದರೊಂದು ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಗೆ ದೂಡಿದೆ.
2028 ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ನೊಂದಿಗೆ ಮೈತ್ರಿ ಮುಂದುವರಿಯಲಿದೆಯೋ ಎನ್ನುವುದು ದೂರದ ವಿಚಾರ ಆದರೆ ಬಿಜೆಪಿಯಲ್ಲಿನ ನಾಯಕತ್ವ ಮತ್ತು ಒಗ್ಗಟ್ಟು ಅತ್ಯಂತ ನಿರ್ಣಾಯಕ ಅಂಶವಾಗಲಿದೆ.ಹಾಗಾಗಿ ಪಕ್ಷದ ನಾಯಕರು ಕಾದು ನೋಡುವ ತಂತ್ರ ಬಿಟ್ಟು ಪರಿಹಾರ ಕಂಡುಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ರಾಜಿ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವುದು ಸದ್ಯಕ್ಕೆ ದೂರದ ಮಾತು ಎಂದು ಅಂದಾಜಿಸಲಾಗಿದೆ. ಲೋಕಸಭಾ ಚುನಾವಣೆ ವೇಳೆಯೇ ಅದು ಸಾಧ್ಯವಾಗದೆ ಬಿಜೆಪಿ ಕೆಲ ಸ್ಥಾನಗಳನ್ನು ಕಳೆದುಕೊಳ್ಳಬೇಕಾಗಿತ್ತು. 2019 ರಲ್ಲಿ 25 ಸ್ಥಾನ ಹೊಂದಿದ್ದ ಬಿಜೆಪಿ ಯು ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡರೂ 17 ಸ್ಥಾನಗಳನ್ನು ಗೆದ್ದಿತ್ತು. ಪ್ರಮುಖವಾಗಿ ಬೀದರ್, ದಾವಣಗೆರೆ ಯಲ್ಲಿ ಆಂತರಿಕ ಭಿನ್ನಮತದಿಂದಲಾಗಿಯೇ ಬಿಜೆಪಿ ಸೋಲು ಅನುಭವಿಸಿತ್ತು ಎಂಬುದು ಬಹಿರಂಗವಾಗಿತ್ತು.
ಬಿಜೆಪಿಯಿಂದ ಸಂಪೂರ್ಣವಾಗಿ ದೂರವಾಗಿರುವ ಯಶವಂತಪುರದ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರು ಲೋಕಸಭಾ ಚುನಾವಣೆಯಿಂದಲೂ ಪಕ್ಷದಿಂದ ದೂರವಾಗಿದ್ದಾರೆ. ಅವರ ವಿರುದ್ಧ ಬಿಜೆಪಿ ಯಾವುದೇ ಕಠಿನ ಕ್ರಮಕ್ಕೆ ಮುಂದಾಗಿಲ್ಲ. ಸಂದರ್ಭ ಈ ರೀತಿಯಲ್ಲಿ ಇರುವ ವೇಳೆ ಯತ್ನಾಳ್ ಮತ್ತು ಬೆಂಬಲಿಗರನ್ನು ಏಕಾಏಕಿ ಪಕ್ಷದಿಂದ ಹೊರ ಹಾಕುವುದಕ್ಕೆ ಬಿಜೆಪಿ ಮುಂದಾಗಲಿದೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಒಂದು ವೇಳೆ ಯತ್ನಾಳ್ ವಿರುದ್ಧ ಕ್ರಮ ಕೈಗೊಂಡಿದ್ದೇ ಆದರೆ, ಬೆಂಬಲಿಗರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ, ಅದು ಪಕ್ಷಕ್ಕೆ ಯಾವ ಮಟ್ಟಿಗಿನ ಪರಿಣಾಮ ಬೀರಲಿದೆ ಎನ್ನುವುದು ಸವಾಲಿನ ವಿಚಾರವೇ ಆಗಿದೆ. ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಯಲ್ಲಿ ಮಗ್ನರಾಗಿದ್ದ ಬಿಜೆಪಿ ವರಿಷ್ಠರು ಈಗ ರಾಜ್ಯ ಬಿಜೆಪಿ ಕುರಿತು ಗಟ್ಟಿ ನಿರ್ಧಾರ ಕೈಗೊಳ್ಳಲೇಬೇಕಾದ ಸಮಯ ಬಂದಿದೆ. ಆರೋಪ-ಪ್ರತ್ಯಾರೋಪಗಳ ಪಟ್ಟಿಯೊಂದಿಗೆ ದೆಹಲಿಗೆ ಹಾರಲು ರಾಜ್ಯ ಬಿಜೆಪಿ ಬಣಗಳು ಸಿದ್ಧವಾಗಿದ್ದು, ವರಿಷ್ಠರ ಮನೆಗಳ ಬಾಗಿಲು ಬಡಿದಾಗ ಸಮಾಧಾನ ಯಾವ ರೀತಿಯಲ್ಲಿ ಮಾಡುತ್ತಾರೆ, ಪರಿಹಾರ ಹೇಗೆ ಕಂಡುಕೊಳ್ಳಲಿದ್ದಾರೆ ಎನ್ನುವುದೂ ರಾಜಕೀಯ ವಲಯದ ಕುತೂಹಲ. ಆರ್ ಎಸ್ ಎಸ್ ಪ್ರವೇಶ?
ಸದ್ಯದ ಪರಿಸ್ಥಿತಿಯಲ್ಲಿ ಬಿಕ್ಕಟ್ಟು ಶಮನಕ್ಕೆ ಆರ್ ಎಸ್ ಎಸ್ ನಾಯಕರು ಮಧ್ಯ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬದಲಾವಣೆ ಮೂಲಕ ಸಂಘ ನಿಷ್ಠೆಯ, ಬಣಗಳಿಗೆ ಸಂಬಂಧವೇ ಇಲ್ಲದ ನಾಯಕತ್ವಕ್ಕೆ ಮಣೆ ಹಾಕಿ ಎರಡೂ ಬಣಗಳನ್ನು ತಣ್ಣಗಾಗಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.ಮಹಾರಾಷ್ಟ್ರ ಚುನಾವಣೆಯಲ್ಲಿ ಆರ್ ಎಸ್ ಎಸ್ ನೆಲ ಮಟ್ಟದಲ್ಲಿ ಕೆಲಸ ನಿರ್ವಹಿಸಿ ದೊಡ್ಡ ಯಶಸ್ಸು ಕಂಡುಕೊಂಡಿತ್ತು. ರಾಜ್ಯ ಬಿಜೆಪಿಯ ವಿಚಾರದಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡಲಿದೆ ಎನ್ನುವುದೂ ಕುತೂಹಲ.