ದುಬೈ: ಮನೀಶ್ ಪಾಂಡೆ ಆಕರ್ಷಕ ಅರ್ಧಶತಕ ಹಾಗೂ ನಾಯಕ ಡೇವಿಡ್ ವಾರ್ನರ್ ಅವರ ಸಮಯೋಚಿತ ಆಟದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 158 ರನ್ ಗಳಿಸಿದೆ. ಆ ಮೂಲಕ ರಾಜಸ್ಥಾನ್ ರಾಯಲ್ಸ್ ಗೆ 159 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಸನ್ ರೈಸರ್ಸ್ ಉತ್ತಮ ಆರಂಭ ಪಡೆದುಕೊಂಡಿತ್ತು. ನಾಯಕ ವಾರ್ನರ್ ಮತ್ತು ಜಾನಿ ಬೈರ್ ಸ್ಟೋವ್ ಮೊದಲ ವಿಕೆಟ್ ಗೆ 21 ರನ್ ಗಳ ಜೊತೆಯಾಟ ನಡೆಸಿದರು. ಈ ವೇಳೆ 1 ಸಿಕ್ಸ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಬೈರ್ ಸ್ಟೋವ್ ಸಲ್ಲದ ಹೊಡೆತಕ್ಕೆ ಮುಂದಾಗಿ ಕಾರ್ತಿಕ್ ತ್ಯಾಗಿ ಬೌಲಿಂಗ್ ನಲ್ಲಿ ಸ್ಯಾಮ್ಸನ್ ಗೆ ಕ್ಯಾಚಿತ್ತರು.
ಒನ್ ಡೌನ್ ನಲ್ಲಿ ಕಣಕ್ಕಿಳಿದ ಮನೀಶ್ ಪಾಂಡೆ ನಾಯಕ ವಾರ್ನರ್ ಗೆ ಉತ್ತಮ ಸಾಥ್ ನೀಡಿದರು. ಈ ವೇಳೆ ರಾಜಸ್ಥಾನ್ ಬೌಲರ್ ಗಳನ್ನು ದಂಡಿಸುತ್ತಿದ್ದ ವಾರ್ನರ್ ಅರ್ಧಶತಕದ ಅಂಚಿನಲ್ಲಿ ಎಡವಿದರು. 36 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್, 3 ಬೌಂಡರಿಗಳ ನೆರವಿನಿಂದ 48 ರನ್ ಗಳಿಸಿ ಜೋಫ್ರಾ ಆರ್ಚರ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು.
ಮತ್ತೊಂದೆಡೆ ಮನೀಶ್ ಪಾಂಡೆ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿ ಆಕರ್ಷಕ ಅರ್ಧಶತಕ ಸಿಡಿಸಿದರು. ಮಾತ್ರವಲ್ಲದೆ ಐಪಿಎಲ್ ನಲ್ಲಿ 3000 ರನ್ ಪೂರೈಸಿದ ಸಾಧನೆಗೈದರು. 44 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2 ಪೋರ್ ಗಳ ಸಹಾಯದಿಂದ 54 ರನ್ ಗಳಿಸಿದ್ದ ವೇಳೆ ಜಯದೇವ್ ಉನಾದ್ಕಟ್ ಬೌಲಿಂಗ್ ನಲ್ಲಿ ರಾಹುಲ್ ತೇವಾಟಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ನಂತರ ಬಂದ ಕೇನ್ ವಿಲಿಯಮ್ಸನ್ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. 12 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 22 ರನ್ ಗಳಿಸಿ ಔಟಾಗದೆ ಉಳಿದರು. ವಿಲಿಯಮ್ಸನ್ ಗೆ ಉತ್ತಮ ಸಾಥ್ ನೀಡಿದ ಪ್ರಿಯಂ ಗರ್ಗ್ 1 ಫೋರ್, 1ಸಿಕ್ಸ್ ನೆರವಿನಿಂದ 15 ರನ್ ಗಳಿಸಿ ರನ್ ಔಟ್ ಆಗಿ ನಿರ್ಗಮಿಸಿದರು. ಅಂತಿಮವಾಗಿ ಹೈದರಾಬಾದ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.
ರಾಜಸ್ಥಾನ್ ಪರ ಆರ್ಚರ್, ತ್ಯಾಗಿ, ಉನಾದ್ಕಟ್ ತಲಾ ಒಂದು ವಿಕೆಟ್ ಪಡೆದರು.