ಹೈದರಾಬಾದ್ : ಕರ್ನಾಟಕ ಸರಕಾರ ಸ್ವಾಮ್ಯದ ಕೆಎಸ್‌ಡಿಎಲ್‌ನ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸಿ ಮಾರಾಟ ಮಾಡುತ್ತಿದ್ದ ನಕಲಿ ಘಟಕವನ್ನು ಹೈದರಾಬಾದ್‌ನಲ್ಲಿ ಶನಿವಾರ (ಜ13) ಭೇದಿಸಲಾಗಿದೆ.
ಕಾರ್ಯಾಚರಣೆ ವೇಳೆ ನಕಲಿ ಉತ್ಪನ್ನಗಳು, ಪ್ಯಾಕಿಂಗ್‌ಗೆ ಬಳಸುವ ರಟ್ಟಿನ ಪೆಟ್ಟಿಗೆ ಸೇರಿದಂತೆ ಸುಮಾರು 2 ಕೋಟಿ ರೂ. ಮೌಲ್ಯದ ವಸ್ತುಗಳು ಪತ್ತೆಯಾಗಿವೆ. 150 ಗ್ರಾಂ ಸಾಬೂನು ಪ್ಯಾಕ್‌ಗಳ 1,800 ಪೀಸ್ ಹೊಂದಿರುವ 20 ಪೆಟ್ಟಿಗೆಗಳು, 75 ಗ್ರಾಂ ಸಾಬೂನಿನ 9,400 ತುಂಡುಗಳ 47 ರಟ್ಟಿನ ಪೆಟ್ಟಿಗೆಗಳು ಮತ್ತು 150 ಗ್ರಾಂ ಮತ್ತು 75 ಗ್ರಾಂ ಸಾಬೂನುಗಳ 400 ಖಾಲಿ ಪ್ಯಾಕೇಜಿಂಗ್ ಬಾಕ್ಸ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳಾದ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ವಿರುದ್ಧ ಹೈದರಾಬಾದ್‌ನ ಮಲಕ್‌ಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆಎಸ್‌ಡಿಎಲ್ ಅಧ್ಯಕ್ಷರೂ ಆಗಿರುವ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಹೈದರಾಬಾದ್‌ನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸಾಬೂನುಗಳು ಚಲಾವಣೆಯಾಗುತ್ತಿರುವ ಅನಾಮಧೇಯ ಸುಳಿವು ದೊರೆತ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್ ಅವರಿಗೆ ಸೂಚಿಸಿದ್ದರು.
ಕೆಎಸ್‌ಡಿಎಲ್ ತಂಡವು ಮಾರುಕಟ್ಟೆಯಲ್ಲಿ ನಕಲಿ ಸಾಬೂನು ಇರುವುದನ್ನು ದೃಢಪಡಿಸಿದ ನಂತರ, ಅದರ ಮೂಲವನ್ನು ಪತ್ತೆಹಚ್ಚಲು ಕಾರ್ಯಾಚರಣೆಗಿಳಿದಿದ್ದು ಮೊದಲು ಒಂದು ಲಕ್ಷ ರೂ.ಮೌಲ್ಯದ ನಕಲಿ ಉತ್ಪನ್ನವನ್ನು ಖರೀದಿಸಿ ಬಳಿಕ ಘಟಕವನ್ನು ಭೇದಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.