ಹೈದರಾಬಾದ್: 2017ರ ಏಪ್ರಿಲ್ ನಿಂದ ತೆಲಂಗಾಣದ ಯುವಕ ದಿಢೀರನೆ ನಾಪತ್ತೆಯಾಗಿದ್ದರು. ನಂತರ ಈತ ಸ್ವಿಟ್ಜರ್ ಲೆಂಡ್ ಗೆ ತೆರಳುವ ಸಂದರ್ಭದಲ್ಲಿ ಅಕ್ರಮವಾಗಿ ಗಡಿ ದಾಟಿದ್ದ ಪರಿಣಾಮ ಪಾಕಿಸ್ತಾನ ಪೊಲೀಸರು ಬಂಧಿಸಿರುವ ಘಟನೆ ತಿಳಿದು ಬಂದಿತ್ತು. ಇದೀಗ ನಾಲ್ಕು ವರ್ಷಗಳ ಜೈಲುವಾಸದ ನಂತರ ಪಾಕ್ ನಿಂದ ಯುವಕ ಹೈದರಾಬಾದ್ ನಲ್ಲಿರುವ ಮನೆಗೆ ವಾಪಸ್ ಮರಳಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಲಾಕ್ ಡೌನ್ ವಿಸ್ತರಣೆ ಬಗ್ಗೆ ಜೂ. 5 ರಂದು ನಿರ್ಧಾರ : ಗೃಹ ಸಚಿವ ಬಸವರಾಜ ಬೊಮ್ಮಾಯಿ
ಐಟಿ ಉದ್ಯೋಗಿ ಪ್ರಶಾಂತ್ ಅವರನ್ನು ಪಾಕಿಸ್ತಾನ ಅಧಿಕಾರಿಗಳು ಸೋಮವಾರ ಪಂಜಾಬ್ ನ ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದಾಗಿ ವರದಿ ವಿವರಿಸಿದೆ. ನಂತರ ಪ್ರಶಾಂತ್ ಅವರನ್ನು ಸೈಬರಾಬಾದ್ ಕಮಿಷನರೇಟ್ ಪೊಲೀಸ್ ತಂಡಕ್ಕೆ ಹಸ್ತಾಂತರಿಸಿದ್ದು, ಅವರು ತೆಲಂಗಾಣದ ಮಾಧಾಪುರ್ ಗೆ ಕರೆತಂದಿದ್ದರು. ಪ್ರಶಾಂತ್ ಕುಟುಂಬ ಇಲ್ಲಿ 2017ರ ಏಪ್ರಿಲ್ 29ರಂದು ಮಗ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು.
ಪ್ರಶಾಂತ್ ಬಿಡುಗಡೆಗಾಗಿ ತೆಲಂಗಾಣ ಸರ್ಕಾರ ನಿರಂತರವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಗೃಹ ಸಚಿವಾಲಯದ ಮೇಲೆ ಒತ್ತಡ ಹೇರಿದ ಪರಿಣಾಮ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಪಾಕ್ ಅಧಿಕಾರಿಗಳು ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದಾಗಿ ಮಾಧಾಪುರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿ.ರವೀಂದ್ರ ಪ್ರಸಾದ್ ತಿಳಿಸಿದ್ದಾರೆ.
ವೈಯಕ್ತಿಕ ಕಾರಣಗಳಿಗಾಗಿ ಪ್ರಶಾಂತ್ ಸ್ವಿಟ್ಜರ್ ಲೆಂಡ್ ಗೆ ತೆರಳಬೇಕಿತ್ತು. ಆದರೆ ಹಣಕಾಸಿನ ಕೊರತೆಯ ಕಾರಣ, ಕಾಲ್ನಡಿಗೆಯಲ್ಲಿ ಯುರೋಪ್ ತಲುಪಲು ನಿರ್ಧರಿಸಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದೆ ಪ್ರಶಾಂತ್ ಮನೆಯಿಂದ ಹೊರಟಿದ್ದರು. ರಾಜಸ್ಥಾನದ ಬಿಕಾನೇರ್ ರೈಲಿನಲ್ಲಿ ಪ್ರಶಾಂತ್ ಹೊರಟಿದ್ದರು. ರಾಜಸ್ಥಾನದಲ್ಲಿನ ಭಾರತ-ಪಾಕಿಸ್ತಾನ ಗಡಿಯಲ್ಲಿದ್ದ ತಂತಿಯನ್ನು ಹಾರಿ ಪಾಕ್ ಗಡಿಯೊಳಕ್ಕೆ ಇಳಿದಿರುವುದಾಗಿ ವರದಿ ತಿಳಿಸಿದೆ.
ಈ ಸಂದರ್ಭದಲ್ಲಿ ಪ್ರಶಾಂತ್ ಪಾಕಿಸ್ತಾನದ ಗಡಿಭದ್ರತಾ ಪಡೆಗೆ ಸಿಕ್ಕಿಬಿದ್ದಿದ್ದರು. ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ ಆರೋಪದ ಮೇಲೆ ಪ್ರಶಾಂತ್ ಅವರನ್ನು ಜೈಲಿಗೆ ತಳ್ಳಿದ್ದರು. ಹೀಗೆ ಏಕಾಏಕಿ ಪ್ರಶಾಂತ್ ನಾಪತ್ತೆಯಾದ ನಂತರ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪಾಕಿಸ್ತಾನ ಪೊಲೀಸರು ಪ್ರಶಾಂತ್ ಅವರನ್ನು ಬಂಧಿಸಿರುವ ವಿಚಾರ ತಿಳಿದು ಬಂದಿತ್ತು ಎಂದು ವರದಿ ವಿವರಿಸಿದೆ.