ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ, ಇನ್ನು ಕೆಲವೇ ವರ್ಷಗಳಲ್ಲಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸಬಹುದು!
ಹೌದು. ಬೆಂಗಳೂರು-ಹೈದರಾಬಾದ್ ಸೇರಿದಂತೆ 9 ನಗರಗಳನ್ನು ಸಂಪರ್ಕಿಸುವ ನಾಲ್ಕು ಹೊಸ ಬುಲೆಟ್ ರೈಲು ಕಾರಿಡಾರ್ ಕೈಗೆತ್ತಿಕೊಳ್ಳಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ.
“ರಾಷ್ಟ್ರೀಯ ರೈಲು ಯೋಜನೆ’ಯಲ್ಲಿ ಈ ಪ್ರಸ್ತಾಪವಿದ್ದು, ಹೈದರಾಬಾದ್ ಮತ್ತು ಬೆಂಗಳೂರು ನಡುವೆ 618 ಕಿ.ಮೀ.ನ ಕಾರಿಡಾರ್, ನಾಗ್ಪುರ ಮತ್ತು ವಾರಾಣಸಿಯ ನಡುವೆ 855 ಕಿ.ಮೀ., ಪಾಟ್ನಾ ಮತ್ತು ಗುವಾಹಟಿ ನಡುವೆ 850 ಕಿ.ಮೀ. ಮತ್ತು ಅಮೃತಸರ, ಪಠಾಣ್‌ಕೋಟ್ ಮತ್ತು ಜಮ್ಮುವನ್ನು ಸಂಪರ್ಕಿಸುವ 190 ಕಿ.ಮೀ. ಉದ್ದದ ಕಾರಿಡಾರ್ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ.
ಇದನ್ನೂ ಓದಿ:ಬಂಡೆಗಳನ್ನೇ ನುಂಗಿ ಜೀರ್ಣಿಸಿಕೊಂಡವರಿಗೆ ಟೀಕೆಗಳು ಯಾವ ಲೆಕ್ಕ : ಡಿಕೆಶಿಗೆ ಹೆಚ್ಡಿಕೆ ಟಾಂಗ್
ಈಗಾಗಲೇ 8 ಕಾರಿಡಾರ್‌ಗಳ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದ್ದು, ಈಗ ಇದಕ್ಕೆ ಹೊಸದಾಗಿ ನಾಲ್ಕನ್ನು ಸೇರಿಸಲಾಗಿದೆ. ದೇಶದ ಎಲ್ಲ ಪ್ರಮುಖ ನಗರಗಳಿಗೆ ಹೈಸ್ಪೀಡ್ ರೈಲು ಜಾಲವನ್ನು ಸಂಪರ್ಕಿಸುವುದು ಕೂಡ ನಮ್ಮ ಉದ್ದೇಶವಾಗಿದೆ ಎಂದು ರೈಲ್ವೆಯ ಮೂಲಗಳು ತಿಳಿಸಿವೆ.
ಈಗಾಗಲೇ ಅನುಮತಿ ಪಡೆದಿರುವ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗಳ ಪೈಕಿ ಚೆನ್ನೈ-ಮೈಸೂರು ನಡುವಿನ 435 ಕಿ.ಮೀ. ಉದ್ದದ ಕಾರಿಡಾರ್ ಕೂಡ ಸೇರಿದೆ.