Advertisement

ಹೈದರಾಬಾದಿನ ಇಬ್ರಾಹಿಂ ಖಲೀಲ್‌ ಯುಎಸ್‌ಎ ಕ್ರಿಕೆಟ್‌ ತಂಡದ ನಾಯಕ!

07:55 AM Sep 13, 2017 | |

ಹೈದರಾಬಾದ್‌: ಹೈದರಾಬಾದ್‌ ತಂಡದ ಪರ ರಣಜಿ ಪಂದ್ಯವನ್ನಾಡಿದ ಭಾರತದ ಕ್ರಿಕೆಟಿಗ ಇಬ್ರಾಹಿಂ ಖಲೀಲ್‌ ಅವರೀಗ ಯುಎಸ್‌ಎ ಕ್ರಿಕೆಟ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರದಿಂದ ಟೊರಂಟೊದಲ್ಲಿ ಮೊದಲ್ಗೊಂಡ “ಆಟಿ ಕಪ್‌’ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

Advertisement

34ರ ಹರೆಯದ ಇಬ್ರಾಹಿಂ ಖಲೀಲ್‌ ಕೆಲವೇ ತಿಂಗಳ ಹಿಂದೆ ಉಗಾಂಡದಲ್ಲಿ ನಡೆದ “ಐಸಿಸಿ ಡಬ್ಲ್ಯುಸಿಎಲ್‌ ಡಿವಿಷನ್‌ ತ್ರೀ’ ಪಂದ್ಯಾವಳಿ ವೇಳೆ ಮೊದಲ ಬಾರಿಗೆ ಅಮೆರಿಕ ತಂಡವನ್ನು ಪ್ರತಿನಿಧಿಸಿದ್ದರು. ಇತ್ತೀಚೆಗಷ್ಟೇ ಅಮೆರಿಕ ತಂಡದ ನಾಯಕ ಸ್ಟೀವನ್‌ ಟಯ್ಲರ್‌ ಜಮೈಕಾ ಪರ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯವನ್ನು ಆಡಲು ನಿರ್ಧರಿಸಿದ್ದರಿಂದ ಖಲೀಲ್‌ಗೆ ನಾಯಕತ್ವದ ಅವಕಾಶ ಒಲಿದು ಬಂದಿದೆ.

“ನಮ್ಮ ಪಾಲಿಗೆ ಇದೊಂದು ಮಹಾ ಸಂಭ್ರನದ ಕ್ಷಣ. ರಾಷ್ಟ್ರೀಯ ತಂಡದ ಪರ ಆಡುವುದು, ತಂಡವನ್ನು ಮುನ್ನಡೆಸುವ ಅವಕಾಶ ಲಭಿಸುವುದು ಕ್ರಿಕೆಟಿಗನೊಬ್ಬನ ಪಾಲಿನ ಮಹಾನ್‌ ಕ್ಷಣ. ಇಬ್ರಾಹಿಂಗೆ ಈ ಅದೃಷ್ಟ ಒಲಿದು ಬಂದಿದೆ. ಅವನಿಗೆ ಯಶಸ್ಸು ಕೈಹಿಡಿಯಲಿ…’ ಎಂಬುದಾಗಿ ಹೈದರಾಬಾದ್‌ನಲ್ಲಿರುವ ಅವರ ತಮ್ಮ ಇಸ್ಮಾಯಿಲ್‌ ಖಲೀಲ್‌ ಪ್ರತಿಕ್ರಿಯಿಸಿದ್ದಾರೆ.

2002-2015ರ ಅವಧಿಯಲ್ಲಿ ಹೈದರಾಬಾದ್‌ ಪರ 57 ರಣಜಿ ಪಂದ್ಯಗಳನ್ನಾಡಿರುವ ಇಬ್ರಾಹಿಂ ಖಲೀಲ್‌, ಭಾರತದ ಮಾಜಿ ಸ್ಪಿನ್ನರ ಅರ್ಷದ್‌ ಅಯೂಬ್‌ ಅವರಿಂದ ತರಬೇತಿ ಪಡೆದಿದ್ದರು. ಸ್ಥಿರ ಪ್ರದರ್ಶನದ ಹೊರತಾಗಿಯೂ ಭಾರತದ ಪರ ಆಡುವ ಅವಕಾಶ ಲಭಿಸಲಿಲ್ಲ. ಹೀಗಾಗಿ ಐಸಿಎಲ್‌ ಸೇರಿಕೊಂಡರು. ಬಳಿಕ ಐಪಿಎಲ್‌ಗೆ ಕಾಲಿಟ್ಟು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಆಯ್ಕೆಯಾದರು. ಆದರೆ ಇಲ್ಲಿಯೂ ಆಡುವ ಅವಕಾಶ ಮರೀಚಿಕೆಯಾಗಿಯೇ ಉಳಿಯಿತು.2 ವರ್ಷಗಳ ಹಿಂದೆ ಅಮೆರಿಕಕ್ಕೆ ವಾಸ್ತವ್ಯ ಬದಲಿಸಿದ ಬಳಿಕ ಖಲೀಲ್‌ ಅವರ ಕ್ರಿಕೆಟ್‌ ಗತಿಯೂ ಬದಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next