ಗಂಗಾವತಿ: ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಪಕ್ಕದಲ್ಲಿ 1200 ಕೋಟಿ ರೂ.ಗಳ ವೆಚ್ಚದಲ್ಲಿ 215 ಮೀಟರ್ ಉದ್ದದ ವಿಶ್ವದಲ್ಲಿಯೇ ಬೃಹತ್ ಆಂಜನೇಯನ ಮೂರ್ತಿ ಸ್ಥಾಪನೆ ಮಾಡಲು ಶ್ರೀ ಹನುಮದ್ ಜನ್ಮಭೂಮಿತೀರ್ಥ ಕ್ಷೇತ್ರ ಟ್ರಸ್ಟ್ ಈಗಾಗಲೇ ದೇಶದಾದ್ಯಂತ ರಥಯಾತ್ರೆಯ ಮೂಲಕ ಭಕ್ತರಿಂದ ಹಣ ಸಂಗ್ರಹಿಸುವುದನ್ನು ಮೋದಿ ಬ್ರಿಗೇಡ್ ಉತ್ತರ ಕರ್ನಾಟಕ ಸಂಚಾಲಕ ಮದನಕುಮಾರ ವಿರೋಧ ವ್ಯಕ್ತಪಡಿಸಿದ್ದಾರೆ.
ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಕಿಷ್ಕಿಂದಾ ಅಂಜನಾದ್ರಿ ಪರ್ವತ ದೇಶ ವಿದೇಶದ ಗಮನ ಸೆಳೆದಿದೆ. ರಾಜ್ಯ ಮತ್ತು ಕೇಂದ್ರ ಸರಕಾರ ಅಂಜನಾದ್ರಿ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿದ್ದು ಈಗಾಗಲೇ ಹಲವು ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲಾಗಿದ್ದು ವಸತಿ ಸಾರಿಗೆ ಸೇರಿ ಇನ್ನಷ್ಟು ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ಮಧ್ಯೆ ಕಿಷ್ಕಿಂದಾ ಮೂಲನೈಸರ್ಗಿಕ ಸ್ವರೂಪಕ್ಕೆ ಧಕ್ಕೆಯಾಗದಂತೆ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯ ನಡೆಸುವಂತೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಅವಕಾಶ ಕಲ್ಪಿಸಿದೆ.
ಸ್ಥಳೀಯರ ಅಭಿಪ್ರಾಯವನ್ನು ಕೇಳದೇ ಸರಕಾರದಿಂದ ಭೂಮಿಯನ್ನು ನಿಗದಿ ಮಾಡದೇ ಶ್ರೀ ಹನುಮದ್ ಜನ್ಮಭೂಮಿತೀರ್ಥ ಕ್ಷೇತ್ರ ಟ್ರಸ್ಟ್ ಹೆಸರಿನಲ್ಲಿ ಅಂಜನಾದ್ರಿ ಪಕ್ಕದಲ್ಲಿ 1200 ಕೋಟಿ ರೂ.ಗಳ ವೆಚ್ಚದಲ್ಲಿ 215 ಮೀಟರ್ ಉದ್ದದ ವಿಶ್ವದಲ್ಲಿಯೇ ಬೃಹತ್ ಆಂಜನೇಯನ ಮೂರ್ತಿ ಸ್ಥಾಪನೆ ಮಾಡಲು ರಥಯಾತ್ರೆಯನ್ನು ಆರಂಭ ಮಾಡಿ ಭಕ್ತರಿಂದ ಹಣ ಎತ್ತುವ ಕಾರ್ಯ ಮಾಡಲಾಗುತ್ತಿದೆ. ಸ್ಥಳೀಯರು ಮತ್ತು ಜಿಲ್ಲಾಡಳಿತದ ಅಭಿಪ್ರಾಯವನ್ನು ಪಡೆಯದೇ ಬೃಹತ್ ಮೂರ್ತಿ ಸ್ಥಾಪನೆ ಮಾಡುವ ಕಾರ್ಯದಿಂದ ಇಡೀ ಅಂಜನಾದ್ರಿ ಪರಿಸರಕ್ಕೆ ಧಕ್ಕೆಯಾಗುತ್ತದೆ. ಇಲ್ಲಿಯ ಪರಿಸರ ಪ್ರಾಣಿ ಸಂಕುಲಕ್ಕೆ ಅಪಾಯವಾಗುತ್ತದೆ. ಕೂಡಲೇ ಜಿಲ್ಲಾಡಳಿತ ಗಮನ ಹರಿಸಿ ಅಂಜನಾದ್ರಿಯ ಪಕ್ಕದಲ್ಲಿ ಖಾಸಗಿ ಜಮೀನಿನಲ್ಲಿ ಬೃಹತ್ ಮೂರ್ತಿ ಸ್ಥಾಪನೆಗೆ ಸಂಗ್ರಹ ಮಾಡಿರುವ ಕಲ್ಲುಗಳನ್ನು ವಶಕ್ಕೆ ಪಡೆದು ಅಕ್ರಮವಾಗಿ ಹಣ ಸಂಗ್ರಹವನ್ನು ತಡೆಯಬೇಕು.
ಇದನ್ನೂ ಓದಿ : ಇಂದು 47,754 ಕೋವಿಡ್ ಕೇಸ್ ,29 ಸಾವು : ನೈಟ್,ವೀಕೆಂಡ್ ಕರ್ಫ್ಯೂ ಮುಂದುವರಿಕೆ?
ಈಗಾಗಲೇ ದೇಶ ವಿದೇಶದಲ್ಲಿ ಅಂಜನಾದ್ರಿಯ ಮಹತ್ವ ತಿಳಿದು ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಈ ಮಧ್ಯೆ ಅಂಜನಾದ್ರಿಯ ಪಕ್ಕದಲ್ಲಿಯೇ ಬೃಹತ್ ಆಂಜನೆಯನ ಮೂರ್ತಿ ಸ್ಥಾಪನೆಯಿಂದ ಕಿಷ್ಕಿಂದಾ ಅಂಜನಾದ್ರಿಯ ಮಹತ್ವ ಹೋಗುತ್ತದೆ. ಪರಿಸರಕ್ಕೆ ಧಕ್ಕೆಯಾಗುವ ನೆಪದಲ್ಲಿ ಯುನೆಸ್ಕೋ ಹಂಪಿ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪವೆತ್ತುವ ಸಾಧ್ಯತೆ ಇದೆ. ಆದ್ದರಿಂದ ಖಾಸಗಿ ವ್ಯಕ್ತಿಗಳ ಟ್ರಸ್ಟ್ ಮೂರ್ತಿ ಸ್ಥಾಪನೆ ಮತ್ತು ಹಣ ಸಂಗ್ರಹಕ್ಕೆ ಅವಕಾಶ ನೀಡಬಾರದೆಂದು ಮದನಕುಮಾರ ಒತ್ತಾಯಿಸಿದ್ದಾರೆ