ಹೂವಿನಹಿಪ್ಪರಗಿ: ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತ ಕಾಯುವಲ್ಲಿ ಸರಕಾರ ಹಲವು ಆರೋಗ್ಯಕರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಉಪಯೋಗ ಪಡೆದು ರೋಗ ಮುಕ್ತರಾಗಲು ಸಹಕರಿಸಿ ಎಂದು ಹೂವಿನಹಿಪ್ಪರಗಿ ವಲಯ ಆರೋಗ್ಯ ಶಿಕ್ಷಣಾ ಧಿಕಾರಿ ಡಾ| ಬಿ.ಎಸ್. ಪಾಟೀಲ ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದ ಸರಕಾರಿ ಉರ್ದು ಶಾಲೆ ಆವರಣದ ಎರಡನೇ ಅಂಗನವಾಡಿ ಕೇಂದ್ರದಲ್ಲಿ ನಡೆದ ಕ್ಷಯ ರೋಗ ದಿನಾಚಾರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷಯ ರೋಗ (ಟಿಬಿ) ಸೋಲುತ್ತದೆ. ದೇಶ ಗೆಲ್ಲುತ್ತದೆ. ಈ ವರ್ಷದ ಘೋಷವಾಕ್ಯ ಮೂಲಕ ಕಾರ್ಯಕ್ರಮ ಆರಂಭಿಸಿದ್ದೇವೆ. ಈ ರೋಗಕ್ಕೆ ಸಬಂಧಿಸಿದ ಕಾಯಿಲೆಗಳಿಗೆ ಉಚಿತವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ತಾಲೂಕು ಕ್ಷಯ ರೋಗ ತಜ್ಞ ಬಸವರಾಜ ಗೌಡರ ಮಾತನಾಡಿ, ಗರ್ಭಿಣಿಯರು ತಮ್ಮ ಮಕ್ಕಳ ಭವಿಷ್ಯದ ಸಲುವಾಗಿ ಉತ್ತಮ ಆಹಾರ ಸೇವನೆ ಮಾಡುವುದು ಮುಖ್ಯ. ಕ್ಷಯ ರೋಗ, ರಕ್ತ ಹೀನತೆ ಸೇರಿದಂತೆ ಪ್ರಸ್ತುತವಾಗಿ ಬಂದಿರುವ ಕೊರೊನಾ ವೈರಸ್ ನಿಂದ ದೇಶವೇ ಬೆಚ್ಚಿ ಬೀಳುವ ಸ್ಥಿತಿಯಲ್ಲಿದೆ. ಅದಕ್ಕಾಗಿ ತಕ್ಕ ಪರಿಹಾರ ಪಡೆಯಬೇಕು ಹಾಗೂ ಚಿಕ್ಕ ಮಕ್ಕಳ ಆರೋಗ್ಯದ ಕಡೆಗೆ ಗಮನ ಹಿರಿಸುವಂತೆ ಎಚ್ಚರ ವಹಿಸಬೇಕು ಎಂದರು.
ತಾಪಂ ಸದಸ್ಯ ಜಾಕೀರ್‌ಹುಸೇನ್ ಶಿವಣಗಿ, ಅಂಗನವಾಡಿ ಮೇಲ್ವಿಚಾರಕಿ ಕೆ.ಜಿ. ಭೋಸಲೆ, ಸಮಾಲೋಚಕ ಪಿ.ಸಿ. ಸೌದಿ, ಹಿರಿಯ ಆರೋಗ್ಯ ನಿರೀಕ್ಷಕ ಆನಂದ ಯಂಕಂಚಿ ಮಾತನಾಡಿದರು. ಎಂ.ಎಸ್. ಬಾಗೇವಾಡಿ, ಡಿ.ಎಂ. ಹಿರೇರೊಳ್ಳಿ, ಎನ್. ಎಚ್.ನಿವಾಳಕೋಡಿ, ಡಿ.ಎಸ್. ಸಜ್ಜನ, ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಮಹಿಳೆಯರು ಹಾಜರಿದ್ದರು.