Advertisement

ಕಾಲುವೆ ಬಸಿ ನೀರಿಗೆ ಬಸವಳಿದ ಜನ!

12:50 PM Nov 13, 2019 | |

„ವಿಶ್ವನಾಥ ಹಳ್ಳಿಗುಡಿ
ಹೂವಿನಹಡಗಲಿ:
ಯಾವುದೇ ಒಂದು ನೀರಾವರಿ ಯೋಜನೆ ರೈತರಿಗೆ ಉಪಯೋಗವಾಗಬೇಕು. ಅಂದಾಗ ಮಾತ್ರ ಆ ಯೋಜನೆ ಸಾರ್ಥಕವಾಗುತ್ತದೆ. ಆದರೆ, ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆ ತಾಲೂಕಿನ ರೈತರಿಗೆ ಆನುಕೂಲವಾಗುವುದರೊಂದಿಗೆ ಕೆಲ ಗ್ರಾಮಗಳಿಗೆ ಕಂಟಕವಾಗಿ ಪರಿಣಮಿಸಿದೆ.

Advertisement

ಮೀರಾಕೊರ್ನಹಳ್ಳಿ ಗ್ರಾಮದ ಮೇಲ್ಭಾಗದಲ್ಲಿ ಯೋಜನೆಯ ಪ್ರಮುಖ ಕಾಲುವೆ ಹಾಯ್ದು ಹೋಗಿದೆ. ಆದರೆ ಆ ಕಾಲುವೆ ಮೂಲಕವಾಗಿ ಕೆಳಗೆ ಬಸಿ ನೀರು ಬರುತ್ತಿರುವುದರಿಂದಾಗಿ ಕಾಲುವೆ ಕೆಳಗೆ ಇರುವ ಮೀರಾಕೊರ್ನಹಳ್ಳಿ ಗ್ರಾಮ ಕಳೆದ 6-7 ವರ್ಷದಿಂದಲೂ ಗ್ರಾಮದ ತುಂಬೆಲ್ಲಾ ಬಸಿ ನೀರು ಉಂಟಾಗಿ ಜನತೆಗೆ ತೊಂದರೆಯಾಗಿದೆ. ಅಷ್ಟೇಯಲ್ಲದೆ ಯಾವುದಾದರೂ ಕೆಲಸಕ್ಕೆಂದು ಭೂಮಿ ಅಗೆದರೆ ಸಾಕು ನೀರು ಚಿಮ್ಮುತ್ತದೆ. ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದಲೂ ತಾಲೂಕಿನ ಮಿರಾಕೊರನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಬುನಾದಿಯ ಕೆಳಗೆ ನೀರು ಹರಿಯುತ್ತಿದ್ದರಿಂದ ಕಟ್ಟಡಕ್ಕೆ ತೊಂದರೆಯಾಗುತ್ತಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಇದರಿಂದಾಗಿ ಕಟ್ಟಡ ಶಿಥಿಲಗೊಂಡು ಮಕ್ಕಳಿಗೆ ಅಪಾಯ ತಂದೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಯೋಜನೆಯಿಂದಾಗಿ ಪ್ರಮುಖ ಕಾಲುವೆಗೆ ನೀರು ಹರಿಸಿದಾಗಲೊಮ್ಮೆ ಈ ಸಮಸ್ಯೆ ಹೆಚ್ಚಾಗುತ್ತಿದ್ದು, ಜನತೆ ಅತಂಕದಲ್ಲಿದ್ದಾರೆ. ಕಾಲುವೆಗೆ ನೀರು ಬಿಟ್ಟ ಸಮಯದಲ್ಲಿ ನೀರು ಬಸಿಯುತ್ತಿತ್ತು.

ಯಾವ ಸಮಯದಲ್ಲಾದರೂ ಅನಾಹುತವಾಗುದ ಸಾಧ್ಯತೆ ಹೆಚ್ಚಾಗಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಬುನಾ ದಿಯಿಂದ ನೀರು ಹೊರ ಬರುತ್ತಿದ್ದು, ಮಕ್ಕಳ ಪಾಲಕರು ಆತಂಕಗೊಂಡಿದ್ದಾರೆ. ಒಂದನೇ ತರಗತಿಯಿಂದ 7ನೇ ತರಗತಿವರೆಗೆ ತರಗತಿಗಳು ನಡೆಯುತ್ತಿವೆ. ಶಾಲೆಯ ಕಟ್ಟಡ ಈಗಾಗಲೇ ಶಿಥಿಲಗೊಂಡಿವೆ. ಮೂರು ಕೋಣೆಗಳ ಮೇಲ್ಛಾವಣಿಯ ಸಿಮೆಂಟ್‌ ಕೀಳುತ್ತಿದೆ. ಮಳೆ ಬಂದರೆ ಶಾಲೆಯ ಆವರಣವೂ ಜಲಾವೃತವಾಗುತ್ತದೆ.

ಮಕ್ಕಳಿಗೆ ಆಟವಾಡಲೂ ಜಾಗ ಇಲ್ಲದಂತಾಗಿದೆ. ಈಗಿರುವ ಶಾಲಾ ಕಟ್ಟಡ ಮೇಲೆ ಎರಡು ಕೋಣೆ ನಿರ್ಮಿಸಲಾಗಿದೆ. ಕೆಳ ಭಾಗದಲ್ಲಿ ನೀರು ಹೋಗುತ್ತಿರುವುದರಿಂದ ಅನಾಹುತವಾಗುವ ಹಂತಕ್ಕೆ ಬಂದಿದೆ.

Advertisement

ಶಾಲೆಯ ಮೂರು ಕೋಣೆಯಲ್ಲಿ ಮಳೆ ಬಂದರೆ ಸೋರುತ್ತಿವೆ. ಇನ್ನು ಕೆಲವು ಕೋಣೆಗಳಲ್ಲಿ ಮೇಲ್ಛಾವಣಿ ಕಿತ್ತು ಹೋಗಿವೆ. ಹಲವಾರು ಬಾರಿ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಶಿಕ್ಷಣ ಇಲಾಖೆ, ಜನಪ್ರತಿನಿ ಧಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next