ಬೆಂಗಳೂರು: ಭೂಮಾಲಿಕರೊಬ್ಬರಿಗೆ ಜಮೀನು ಪೋಡಿ ಮಾಡಿಕೊಡಲು ವಿನಾಕಾರಣ ವಿಳಂಬ ಮಾಡಿದ ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ಎಚ್.ಟಿ. ಮಂಜಪ್ಪ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎನ್. ಸತ್ಯನಾರಾಯಣ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡರು.
ಕೆ.ಎಸ್.ಶರ್ಮಿಳಾ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಎನ್. ಸತ್ಯನಾರಾಯಣ ಅವರು ನಾಚಿಕೆ ಆಗೋದಿಲ್ವಾ ನಿಮಗೆ 2010ರಲ್ಲಿ ಸಲ್ಲಿಸಿದ ಅರ್ಜಿ ಈ ತನಕ ವಿಲೇವಾರಿ ಮಾಡಿಲ್ಲ. ನಿಮ್ಮಂಥವರಿಂದ ಸಾಮಾನ್ಯ ಜನ ಬದುಕೋದೇ ಕಷ್ಟವಾಗಿದೆ. ಏನು ತಮಾಷೆ ಮಾಡ್ತೀರಾ ಇಲ್ಲಿಂದಲೇ ಸೀದಾ ಒಳಗೆ ಕಳಿಸಿ ಬಿಡ್ತೇನೆ ಹುಷಾರ್ ಎಂದು ಗದರಿದರು.
ಬೆಂಗಳೂರು ಸುತ್ತಮುತ್ತ ಇವತ್ತು ಪೋಡಿ ಮಾಡಬೇಕೆಂದರೆ ನಿಮಗೆ (ತಸೀಲ್ದಾರ್) 1ರಿಂದ 2 ಲಕ್ಷ ರೂ. ಕೊಡಬೇಕು. ಖಾತೆ ಬದಲಾಯಿಸಲು ಬಿಬಿಎಂಪಿನವರಿಗೆ 30ರಿಂದ 40 ಸಾವಿರ ಕೊಡಬೇಕು. ಏನು ಈ ಅಕ್ರಮಗಳನ್ನೆಲ್ಲಾ ಕಾನೂನು ಬದ್ಧ ಮಾಡಿಬಿಟ್ಟಿದ್ದೀರಾ ಎಂದು ಸಿಟ್ಟಿನಿಂದ ಪ್ರಶ್ನಿಸಿದ ನ್ಯಾಯಮೂರ್ತಿಗಳು, ನಾಚಿಕೆ ಆಗೋಲ್ವಾ ನಿಮಗೆ.
ಸರ್ಕಾರ ತಿಂಗಳಿಗೆ ಸರಿಯಾಗಿ ಸಂಬಳ ಕೊಡೋದಿಲ್ವೇನ್ರೀ, ಭತ್ಯೆಗಳನ್ನೆಲ್ಲಾ ಸರಿಯಾಗಿ ತಗೋಳ್ತೀರಿ ತಾನೆ. ಏನ್ರೀ ದಾಡಿ ನಿಮಗೆ ಸರಿಯಾಗಿ ಕೆಲಸ ಮಾಡಲಿಕ್ಕೆ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೂ ಮೊದಲು ಅರ್ಜಿ ವಿಚಾರಣೆಯ ಸರದಿ ಬರುತ್ತಿದ್ದಂತೆ ಸರ್ಕಾರಿ ವಕೀಲರು ವಿವರಣೆ ಕೊಡಲು ಮುಂದಾದರು. ಈ ವೇಳೆ ಮುಂದೆ ಬಂದು ನಿಲ್ಲುವಂತೆ ತಹಶೀಲ್ದಾರ್ ಮಂಜಪ್ಪನವರಿಗೆ ಸೂಚಿಸಿದ ನ್ಯಾಯಮೂರ್ತಿಗಳು,
ಏನ್ರಿ ಇದೆಲ್ಲ, ನೀವು ಹೀಗೆ ಮಾಡಿದರೆ, ನಾಳೆ ನೀವು ಸತ್ತಾಗ ನಿಮ್ಮ ಹೆಣ ಹೂಳಲು ಬಿಬಿಎಂಪಿ ಹಣ ಕೇಳುತ್ತದೆ ಎಂದು ಸಿಟ್ಟಿನಿಂದ ಹೇಳಿದರು. ಆಗ “ಸ್ವಾಮಿ ನಾನು ಹೊಸದಾಗಿ ಬಂದಿದ್ದೇನೆ ಎಂದು’ ತಹಶೀಲ್ದಾರ್ ಹೇಳಿದರು. ಆಗ ಮತ್ತಷ್ಟು ಸಿಟ್ಟಾದ ನ್ಯಾಯಮೂರ್ತಿಗಳು, ನಿಮ್ಮ ಹಿಂದೆ ಇದ್ದವರು ಯಾರು ಅವರನ್ನೂ ಬರಲು ಹೇಳಿ ಎಂದು ಹೇಳಿದರು.
2010ರಿಂದ ಅರ್ಜಿ ವಿಲೇವಾರಿ ಆಗೇಯಿಲ್ಲ: ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಬಿ.ಎಂ.ಕಾವಲ್‌ನ ಸರ್ವೇ ನಂ.60/2ರಲ್ಲಿ 17 ಗುಂಟೆ ಜಮೀನನ್ನು 2004ರಲ್ಲಿ ಕೆ.ಎಸ್. ಶರ್ಮಿಳಾ ಖರೀದಿಸಿದ್ದರು. ಬಳಿಕ ದಾಖಲೆಗಳು ಇವರ ಹೆಸರಲ್ಲಿ ವರ್ಗಾವಣೆಗೊಂಡಿದ್ದವು.
ಕಾನೂನು ರೀತಿ ಜಮೀನು ಸ್ವಾಧೀನ ಪಡೆದುಕೊಂಡಿದ್ದ ಶರ್ಮಿಳಾ ಪೋಡಿ ಮಾಡಿಕೊಡುವಂತೆ ಬೆಂಗಳೂರು ದಕ್ಷಿಣ ತಹಸೀಲ್ದಾರರಿಗೆ 2010ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅದು ವಿಲೇವಾರಿ ಆಗಿರಲಿಲ್ಲ. ಇದನ್ನು ಪ್ರಶ್ನಿಸಿ ಶರ್ಮಿಳಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.