ಕೊಚ್ಚಿ: ಪತ್ನಿಯನ್ನು ಇತರ ಮಹಿಳೆಯರೊಂದಿಗೆ ಹೋಲಿಸುವುದು ಮತ್ತು ತನ್ನ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಪದೇ ಪದೇ ನಿಂದಿಸುವುದು ಮಾನಸಿಕ ಕ್ರೌರ್ಯ. ಇಂತಹ ನಡವಳಿಕೆಯನ್ನು ಸಹಿಸಿಕೊಳ್ಳಬೇಕಾಗಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಸಿ. ಎಸ್ ಸುಧಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ವ್ಯಕ್ತಿಯೊಬ್ಬ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿರುದ್ದ ಆತನ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಕೋರ್ಟ್ ಈ ತೀರ್ಪು ನೀಡಿದೆ.
ತಾನು ಸುಂದರವಾಗಿಲ್ಲ, ದೈಹಿಕವಾಗಿ ಆಕರ್ಷಣೀಯವಾಗಿಲ್ಲ, ಆತನ ನಿರೀಕ್ಷೆಗಳನ್ನು ಪೂರೈಸಲಿಲ್ಲ. ತನ್ನ ಸಹೋದರನ ಹೆಂಡತಿ ಹಾಗೂ ಇತರ ಮಹಿಳೆಯರೊಂದಿಗೆ ಹೋಲಿಕೆ ಮಾಡಿ ತನ್ನ ನಿರೀಕ್ಷೆಗಳನ್ನು ಪೂರೈಸಿಲ್ಲ ಎಂದು ಪದೇ ಪದೇ ಗಂಡ ನಿಂದಿಸುತ್ತಿದ್ದ ಎಂದು ಮಹಿಳೆ ತನ್ನ ಪತಿ ವಿರುದ್ದ ಆರೋಪಿಸಿದ್ದಳು.
ಇದನ್ನೂ ಓದಿ:ಎನ್ ಕೌಂಟರ್ ವೇಳೆ ಉಗ್ರರು ಪರಾರಿ: ಜಮ್ಮುವಿನಲ್ಲಿ ಕಟ್ಟೆಚ್ಚರ
ಈ ವಿಚ್ಛೇದನದ ಕಾರಣಗಳು ಸಮಂಜಸವಲ್ಲದಿದ್ದರೂ, ಕಕ್ಷಿದಾರ ಹಾಗೂ ಸಮಾಜದ ಹಿತದೃಷ್ಟಿಯಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸಾರ್ವಜನಿಕ ಹಿತಾಸಕ್ತಿಯು ವೈವಾಹಿಕ ಜೀವನವನ್ನು ಸಾಧ್ಯವಾದಷ್ಟು ಕಾಪಾಡಿಕೊಳ್ಳಬೇಕು. ಭರವಸೆಗಳು, ಪರಿಸ್ಥಿತಿಗಳು ಕೈಮೀರಿಹೋದಾಗ ಕಕ್ಷಿದಾರರ ಪರವಾಗಿ ತೀರ್ಪು ನೀಡಲಾಗುತ್ತದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.