ಹೊಸದಿಲ್ಲಿ : “ಅನೈತಿಕ ಸಂಬಂಧಗಳ ಮೂಲಕ ವಂಚಿಸುವ ಪತ್ನಿಗೆ ಬುದ್ಧಿಕಲಿಸಲು ಮುಸ್ಲಿಂ ಪುರುಷನಿಗೆ ಇರುವುದು ಎರಡೇ ಆಯ್ಕೆ. ಒಂದೋ ಆತ ಆಕೆಯನ್ನು ಕೊಲ್ಲಬೇಕು ಇಲ್ಲವೇ ಆಕೆಗೆ ತ್ರಿವಳಿ ತಲಾಕ್ ನೀಡಬೇಕು” ಎಂಬ ವಿವಾದಾತ್ಮಕ ಹೇಳಿಕೆಯನ್ನು ಎಸ್ ಪಿ ನಾಯಕ ರಿಯಾಜ್ ಅಹ್ಮದ್ ನೀಡಿರುವುದು ಭಾರೀ ಟೀಕೆಗೆ ಕಾರಣವಾಗಿದೆ.
‘ಮುಸ್ಲಿಂ ಪುರಷನ ಪಾಲಿಗೆ ತ್ರಿವಳಿ ತಲಾಕ್ ಎನ್ನುವುದು ಪತ್ನಿಯನ್ನು ಕೊಲ್ಲದೇ ಉಳಿಸುವ ಉಪಾಯವಾಗಿದೆ’ ಎಂದು ಹೇಳುವ ಮೂಲಕ ರಿಯಾಜ್ ಅಹ್ಮದ್ ಈ ಪದ್ಧತಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಬರೇಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ರಿಯಾಜ್ ಅವರು, ಇಂದು ಸಮಾಜದಲ್ಲಿ ಮುಸ್ಲಿಮರಿಗಿಂತಲೂ ಹಿಂದುಗಳಿಂದ ಅತೀ ಹೆಚ್ಚು ವಿಚ್ಛೇದನಗಳು ನಡೆಯುತ್ತಿವೆ ಎಂದು ಹೇಳಿದರು.
ಮುಸ್ಲಿಮ್ ಮಹಿಳೆಯರಿಗೆ ಪ್ರತ್ಯೇಕ ಶೇ.8ರ ಮೀಸಲಾತಿಯನ್ನು ಒದಗಿಸಬೇಕು ಎಂದು ಆಗ್ರಹಿಸಿದ ರಿಯಾಜ್, ಒಂದೊಮ್ಮೆ ಭಾರತೀಯ ಜನತಾ ಪಕ್ಷ ಸರಕಾರ ನಿಜಕ್ಕೂ ಮುಸ್ಲಿಂ ಮಹಿಳೆಯರ ಹಿತೈಷಿ ಆಗಿರುವುದೇ ಆದಲ್ಲಿ ಅದು ಮುಸ್ಲಿಂ ಮಹಿಳೆಯರಿಗೆ ಶೇ.8ರ ಪ್ರತ್ಯೇಕ ಮೀಸಲಾಯಿತಿಯನ್ನು ಕಲ್ಪಿಸಬೇಕು ಎಂದು ಹೇಳಿದರು.
ವಿವಾದಾತ್ಮಕ ಹೇಳಿಕೆಗೆ ಕುಪ್ರಸಿದ್ದರಾಗಿರುವ ರಿಯಾಜ್ ಅಹ್ಮದ್ ಅವರು ಈ ಹಿಂದೆ 2014ರಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ, ‘ಬಿಜೆಪಿಯ ವರುಣ್ ಗಾಂಧಿ ಮತ್ತು ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಪಿಲಿಭೀತ್ ಕ್ಷೇತ್ರದ ಮತದಾರರನ್ನು ಕಾಂಡಂ ಗಳಂತೆ ಬಳಸಿ ಎಸೆಯುತ್ತಿದ್ದಾರೆ’ ಎಂಬ ಹೇಳಿಕೆ ನೀಡಿದ್ದರು.
ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆಯ 2017ರ ಮಸೂದೆಯು ಲೋಕಸಭೆಯಲ್ಲಿ ಪಾಸಾಗಿದ್ದು ರಾಜ್ಯಸಭೆಯಲ್ಲಿ ಅನುಮೋದನೆಗೆ ಬಾಕಿ ಇದೆ.