Advertisement
ಕಥೆ, ಕಾದಂಬರಿ, ಜೀವನ ಚರಿತ್ರೆ, ಭಾಷಾಂತರ, ಸಂಶೋಧನೆ, ಪಠ್ಯರಚನೆ, ಶಿಕ್ಷಕ, ಲೇಖನ, ಪತ್ರಿಕಾರಂಗ, ನ್ಯಾಯಾಂಗ, ಕಾರ್ಯಾಂಗವೇ ಮೊದಲಾದ ಕ್ಷೇತ್ರಗಳಲ್ಲಿ ಕೈಯಾಡಿಸಿದ ಎಂ.ಎಸ್. ಪುಟ್ಟಣ್ಣ (21.11.1854- 11.4.1930), ಹೊಸಗನ್ನಡ ಗದ್ಯವನ್ನು ಮುನ್ನೆಲೆಗೆ ತಂದವರಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ಅಧಿಕಾರಿ ಯಾಗಿಯೂ ಪ್ರಸಿದ್ಧರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾಗಿ ಕೆಲವು ಕಾಲ ಕಾರ್ಯದರ್ಶಿಯೂ ಆಗಿದ್ದರು. ಇವರ ಪೂರ್ವಜರು ಚನ್ನಪಟ್ಟಣದ ನಾಗವಾರ ಗ್ರಾಮದವರು, ಇವರು ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ.
Related Articles
ಅಮಲ್ದಾರರಾಗಿದ್ದಾಗ ಸಂಚಾರದಲ್ಲಿ ಅವರು ಗ್ರಾಮಸ್ಥರಿಂದ ಹಾಲು, ಹಣ್ಣುಗಳನ್ನೂ ಅದರ ಬೆಲೆ ಕೊಡದೆ ಪಡೆಯುತ್ತಿರಲಿಲ್ಲ. ಕೆಲಸಕ್ಕೆ ತಪ್ಪಿಸಿಕೊಳ್ಳುತ್ತಿದ್ದ ಸಂಬಂಧಿಯೊಬ್ಬನನ್ನು ವಜಾ ಮಾಡಿದ ಪುಟ್ಟಣ್ಣ, ಕೆಲಸವಿಲ್ಲದೆ ಕಳ್ಳತನಕ್ಕೆ ಇಳಿದೆ ಎಂದ ಕಳ್ಳನೊಬ್ಬನಿಗೆ ಮನೆಯಲ್ಲೇ ಕೆಲಸ ಕೊಡುವ ಧೈರ್ಯ ಮಾಡಿದವರು. ಕಳ್ಳನ ಪರಿವರ್ತನೆಗೆ ಪುಟ್ಟಣ್ಣ ತನ್ನ ಮನೆಯನ್ನೇ ಪ್ರಯೋಗಕ್ಕೆ ಒಡ್ಡಿದ್ದು ವಿಶೇಷ. ಈಗಲೂ ಜೈಲುವಾಸದ ಗುರಿಗಳಲ್ಲಿ ಅಪರಾಧಿಗಳ ವರ್ತನೆ ತಿದ್ದುವುದು ಒಂದಾಗಿದೆ. ಮೇಲಾಧಿಕಾರಿಗಳಿಗೆ ವಸ್ತುಗಳನ್ನು ಸರಬರಾಜು ಮಾಡಬೇಕಾಗಿ ಬಂದರೆ ಅವರಿಗೆ ಬಿಲ್ಲು ಕಳುಹಿಸಿ ಹಣ ವಸೂಲಿ ಮಾಡಿದವರು. ಇಂತಹ ಕಟ್ಟುನಿಟ್ಟಿನ ಅಧಿಕಾರಿಗಳಿಗೆ ನ್ಯಾಯವಾದ ಅವಕಾಶಗಳು ತಪ್ಪಿ ಹೋದರೆ ಅಚ್ಚರಿ ಇಲ್ಲ. ಹೀಗೆಯೇ ಪುಟ್ಟಣ್ಣನವರಿಗೂ ಆಯಿತು.
***
ಪುರಾಣ, ಉಪನಿಷತ್ತುಗಳಲ್ಲಿರುವ ಇಂತಹ ಉದಾಹರಣೆಗಳನ್ನು ಹೇಳಿದರೆ “ಇವೆಲ್ಲ ಪುರಾಣದ ವಿಷಯ. ನಮಗೆಲ್ಲ ಹೇಗೆ ಸಾಧ್ಯ?’ ಎಂದು ನಾವು ಪ್ರಶ್ನಿಸುತ್ತೇವೆ, ಆ ಮೂಲಕ ನುಣುಚಿಕೊಳ್ಳುತ್ತೇವೆ. ಪುಟ್ಟಣ್ಣನಂತಹ ಹಳೆಯ ಕಾಲದ ಉದಾಹರಣೆ ಹೇಳಿದರೆ “ಅವರೆಲ್ಲ ಬ್ರಿಟಿಷರ ಕಾಲದವರು. ಕಾಲ ಬದಲಾಗಿದೆ. ಈಗ ಹೀಗೆ ಮಾಡಿದರೆ ನಾಳೆ ನಮ್ಮನ್ನು ಕೇಳುವವರಾರು? ಹೀಗೆಲ್ಲ ಮಾಡಿದರೆ ಬದುಕಲು ಸಾಧ್ಯವೆ?’ ಎಂಬ ಉದ್ಗಾರ ತೆಗೆದು ಬದುಕುತ್ತೇವೆ. ಇಂತಹವರಿಗೆ ಈಗಲೂ ಹೀಗೆ ಇರುವವರನ್ನು ಉದಾಹರಿಸಬೇಕಾಗುತ್ತದೆ.
***
ತಂದೆಗೆ ದಂಡ ವಿಧಿಸಿದ ಮಗ!
ಮಹೇಶ್ ಪ್ರಸಾದ್ 2007ರಲ್ಲಿ ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದರು. ಇವರು ಖಡಕ್ ಅಧಿಕಾರಿ. ಪೊಲೀಸರೂ ಎಚ್ಚರಿಕೆಯಲ್ಲಿರುತ್ತಿದ್ದರು. ಒಮ್ಮೆ ವಾಹನ ತಪಾಸಣೆ ಮಾಡುತ್ತಿದ್ದಾಗ ತಂದೆ, ನಿವೃತ್ತ ಸಹಾಯಕ ಸಬ್ ಇನ್‌ಸ್ಪೆಕ್ಟರ್ ರಘು ನಾಯ್ಕ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಅವರ ಸ್ಕೂಟರ್‌ನಲ್ಲಿಯೂ ಸೈಡ್ ಮಿರರ್‌ನಂತಹ ದೋಷಗಳಿದ್ದವು. ಮಹೇಶ್ ಪ್ರಸಾದ್ ತಂದೆಯನ್ನೂ ಬಿಡದೆ ಎಲ್ಲರಂತೆ ಇವರಿಗೂ ದಂಡವನ್ನು ವಿಧಿಸಿದರು. ಇದರಿಂದ “ಈತ ಅಪ್ಪನನ್ನೂ ಬಿಟ್ಟವನಲ್ಲ’ ಎಂದು ಎಲ್ಲ ಕಡೆ ಸುದ್ದಿಯೋ ಸುದ್ದಿ. ಕೋಟದ ಡಬಲ್ ಮರ್ಡರ್, ಆತ್ರಾಡಿಯ ವಾರಿಜಾ ಶೆಡ್ತಿಯ ಕೊಲೆ, ವಾಸುದೇವ ಅಡಿಗರ ಕೊಲೆ, ಬಂಟ್ವಾಳದ ಲೀಲಾವತಿ ಪ್ರಕರಣ ಹೀಗೆ ಅನೇಕ ಪ್ರಮುಖ ಕೇಸ್‌ಗಳ ತನಿಖಾಧಿಕಾರಿಯಾಗಿ ಆರೋಪ ಪಟ್ಟಿ ಸಲ್ಲಿಸಿದ ಕೀರ್ತಿ ಇವರಿಗೆ ಇದೆ. ಪ್ರಸ್ತುತ ಮಂಗಳೂರು ನಗರ ಅಪರಾಧ ವಿಭಾಗದ (ಸಿಸಿಬಿ) ಇನ್‌ಸ್ಪೆಕ್ಟರ್ ಆಗಿದ್ದಾರೆ. ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿ ಎಂದು ಹೆಸರು ಗಳಿಸಿದ ಇವರು ಇತ್ತೀಚಿಗಷ್ಟೆ ಕೇಂದ್ರ ಸರಕಾರದ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ.
***
ಸಿಎಂ ಕಾರಿಗೆ ಇನ್‌ಸ್ಪೆಕ್ಟರ್ ನೋಟಿಸ್
1965ರಲ್ಲಿ ಬೆಂಗಳೂರಿನಲ್ಲಿ ನಾನಾ ರಾವ್ ಸಿಬಿಐ ಅಧಿಕಾರಿಗಳಾಗಿದ್ದರು. ಒಮ್ಮೆ ಊಟಕ್ಕೆ ಮನೆಯಲ್ಲಿ ಅವರೆ ಕಾಳಿನ ಸಾಂಬಾರು ಮಾಡಿದ್ದರು. “ಅವರೆ ಕಾಳು ಎಲ್ಲಿಂದ ಬಂತು?’ ಎಂದು ನಾನಾ ರಾವ್ ಕೇಳಿದರು. “ಪಕ್ಕದ ಮನೆಯವರು ಕೊಟ್ಟದ್ದು’ ಹೇಳಿದಾಗ “ನಾಳೆಯಿಂದ ಒಂದು ವಾರ ಪಕ್ಕದ ಮನೆಯವರ ಹೊಲದಲ್ಲಿ ನೀರು ಬಿಡಬೇಕು’ ಎಂದು ಕೂಡಲೇ ಹೆಂಡತಿ ಮತ್ತು ಮಕ್ಕಳಿಗೆ ನಾನಾ ರಾವ್ ಕಟ್ಟಪ್ಪಣೆ ಮಾಡಿದ್ದರು ಎಂಬುದು ಆಗಿನ ಕಾಲದಲ್ಲಿ ಬಹಳ ದೊಡ್ಡ ಸುದ್ದಿ. ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಅವರ ಕಾರಿನ ಚಾಲಕ ಮಾಡಿದ ನಿಯಮ ಉಲ್ಲಂಘನೆಗಾಗಿ ಇನ್‌ಸ್ಪೆಕ್ಟರ್ ಹನುಮೇಗೌಡ ನೋಟಿಸ್ ಕೊಟ್ಟಿದ್ದರು ಎಂದು ಆಗ ಸಿಬಿಐನಲ್ಲಿ ಜೂನಿಯರ್ ಅಧಿಕಾರಿಯಾಗಿದ್ದ, ದಕ್ಷ ಅಧಿಕಾರಿ ಎಂದು ಹೆಸರಾದ ನಿವೃತ್ತ ಎಸ್‌ಐ ಬಿ.ಕೆ.ಬಿಜೂರು ನೆನಪಿಸಿಕೊಳ್ಳುತ್ತಾರೆ.
Advertisement
-ಮಟಪಾಡಿ ಕುಮಾರಸ್ವಾಮಿ