Advertisement

Arrested: ಪತ್ನಿಯ ಕೊಂದ ಪತಿ 31 ವರ್ಷ ಬಳಿಕ ಬಂಧನ!

12:44 PM Feb 14, 2024 | Team Udayavani |

ಬೆಂಗಳೂರು: ಪತ್ನಿಯನ್ನು ಕೊಲೆಗೈದು, ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 31 ವರ್ಷಗಳ ಬಳಿಕ ಹೆಬ್ಟಾಳ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಹೆಬ್ಬಾಳ ನಿವಾಸಿ ಸುಬ್ರಮಣಿ ಅಲಿಯಾಸ್‌ ಹುಸೇನ್‌ ಸಿಕ್ಕಂದರ್‌(56) ಬಂಧಿತ. ಆರೋಪಿ 1993ರಲ್ಲಿ ಪತ್ನಿ ಸುಧಾ ಎಂಬಾಕೆಯನ್ನು ಕೊಲೆಗೈದು ಪರಾರಿಯಾಗಿದ್ದ. ಇತ್ತೀಚೆಗೆ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಹಳೇ ಪ್ರಕರಣಗಳ ಇತ್ಯರ್ಥಕ್ಕೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಲಾಗಿದೆ.

1993ರಲ್ಲಿ ಪತ್ನಿಯ ಶೀಲ ಶಂಕಿಸಿ ಕೊಲೆಗೈದಿದ್ದ ಸುಬ್ರಮಣಿಯನ್ನು ಪೊಲೀಸರು ಅಂದೇ ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದ ಆರೋಪಿ, ಕೋರ್ಟ್‌ನ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇತ್ತ ಪೊಲೀಸರು ಆತನ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಈ ಮಧ್ಯೆ ಕೆಲ ವರ್ಷಗಳ ಹಿಂದೆ ಕೋರ್ಟ್‌ ಆರೋಪಿಯ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಿತ್ತು. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿರಲಿಲ್ಲ. ಈ ಸಂಬಂಧ ನಗರ ಪೊಲೀಸ್‌ ಆಯುಕ್ತರು ಎಲ್‌ಪಿಆರ್‌ ಪ್ರಕರಣಗಳ ಇತ್ಯರ್ಥಕ್ಕೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬಾತ್ಮೀದಾರರು ಹಾಗೂ ತಾಂತ್ರಿಕ ತನಿಖೆ ನಡೆಸಿದಾಗ ಆರೋಪಿ ಜಾಮೀನು ಪಡೆದು ಮೊದಲಿಗೆ ಕೇರಳಕ್ಕೆ ಹೋಗಿದ್ದ ಎಂಬುದು ಗೊತ್ತಾಗಿದೆ.

ಆದರೆ, ಸುಬ್ರಮಣಿ, ಪೊಲೀಸರು ತನ್ನನ್ನು ಹುಡುಕಾಡುತ್ತಿದ್ದಾರೆ. ಮತ್ತೆ ಬಂಧಿಸುತ್ತಾರೆ ಎಂಬ ಭಯದಲ್ಲಿ ಮುಸ್ಲಿಂ ಸಮುದಾಯದ ಆಚರಣೆಗಳು, ಪದ್ಧತಿಗಳನ್ನು ತಿಳಿದುಕೊಂಡು ಸುಬ್ರಮಣಿ ಎಂಬ ತನ್ನ ಹೆಸರಿನ್ನು ಹುಸೇನ್‌ ಸಿಕಿಂದರ್‌ ಎಂದು ಬದಲಾಯಿಸಿ ಕೊಂಡಿದ್ದ. ತಾನೂ ಮುಸ್ಲಿಂ ಎಂದು ಸ್ಥಳೀಯರನ್ನು ನಂಬಿಸಿ, ಅವರ ಜತೆ ಒಡನಾಟ ಇಟ್ಟುಕೊಂಡಿದ್ದ.  ಕೆಲ ವರ್ಷಗಳ ಹಿಂದೆ ಚಿಕ್ಕಮಗಳೂರಿಗೆ ಸ್ಥಳಾಂತರ ಗೊಂಡು ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಎಂದು ಹೇಳಲಾಗಿದೆ.

ಇತ್ತ ಹೆಬ್ಟಾಳ ಪೊಲೀಸರು ಆರೋಪಿಯ ಹಿನ್ನೆಲೆ ಹಾಗೂ ಆತ ಇಲ್ಲಿಂದ ಎಲ್ಲಿಗೆ ಹೋಗಿದ್ದಾನೆ ಎಂಬ ಬಗ್ಗೆ ಸ್ಥಳೀಯರು ಹಾಗೂ ತಾಂತ್ರಿಕ ತನಿಖೆ ನಡೆಸಿದಾಗ ಚಿಕ್ಕಮಗಳೂರಿನ ಮಸೀದಿಯಲ್ಲಿ ಮೌಲ್ವಿಯಾಗಿರುವುದು ಪತ್ತೆಯಾಗಿತ್ತು. ಈ ಮಾಹಿತಿ ಮೇರೆಗೆ ಸುಮಾರು ದಿನಗಳ ಕಾಲ ಪೊಲೀಸರು ಮಸೀದಿ ಬಳಿಯೇ ಆತನ ಮೇಲೆ ನಿಗಾವಹಿಸಿದಾಗ ಈತನೇ ಸುಬ್ರಮಣಿ ಎಂಬುದು ಗೊತ್ತಾಗಿ, ಬಂಧಿಸಿ ನಗರಕ್ಕೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next