Advertisement

ವಾರ್ಡ್‌ ಸಮಿತಿಯಲ್ಲಿ ಪತಿ-ಪತ್ನಿಯರು!

11:21 AM Jul 14, 2017 | Team Udayavani |

ಬೆಂಗಳೂರು: ಸ್ಥಳೀಯ ಮಟ್ಟದ ಆಡಳಿತದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹಾಗೂ ಪಾರದರ್ಶಕತೆ ತರುವ ಉದ್ದೇಶದಿಂದ ರಚಿಸಲಾಗುತ್ತಿರುವ ಬಿಬಿಎಂಪಿ ವಾರ್ಡ್‌ ಸಮಿತಿಗಳು ರಾಜಕೀಯ ಸಮಿತಿಗಳಾಗುತ್ತಿರುವ ಬಗ್ಗೆ ನಾಗರಿಕ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. 

Advertisement

ಪಾಲಿಕೆಗೆ ಇತ್ತೀಚೆಗೆ ನಗರದ ಎಲ್ಲ ವಾರ್ಡ್‌ಗಳಿಂದ ಸಲ್ಲಿಕೆಯಾಗಿರುವ ವಾರ್ಡ್‌ ಸಮಿತಿ ಸದಸ್ಯರ ಪಟ್ಟಿಯಲ್ಲಿ ವಾರ್ಡ್‌ನ ಕಾರ್ಪೊರೇಟರ್‌ಗಳ ಪತಿ-ಪತ್ನಿ, ಸಂಬಂಧಿಕರು ಹಾಗೂ ಪಕ್ಷ ಕಾರ್ಯಕರ್ತರಿಗೆ ಸ್ಥಾನ ನೀಡಿದ್ದು, ಸದಸ್ಯ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದವರನ್ನು ಕಡೆಗಣಿಸಲಾಗಿದೆ ಎಂದು ಆರೋಪ ಕೇಳಿಬಂದಿದೆ. 

ಕೂಡಲೇ ವಾರ್ಡ್‌ ಸಮಿತಿ ರಚಿಸುವಂತೆ ಹೈಕೋರ್ಟ್‌ ಬಿಬಿಎಂಪಿಗೆ ಆದೇಶ ನೀಡಿದ ಹಿನ್ನಲೆಯಲ್ಲಿ ವಾರ್ಡ್‌ ಸಮಿತಿಗಳಿಗೆ ಸದಸ್ಯರ ನೇಮಕಕ್ಕೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ, ಸದಸ್ಯರ ಪಟ್ಟಿಯಲ್ಲಿ ಕಾರ್ಪೊರೇಟರ್‌ಗಳ ಪತಿ-ಪತ್ನಿಯರ ಹೆಸರು ಸೇರಿರುವದರಿಂದ ಆಯ್ಕೆ ಪ್ರಕ್ರಿಯೆಯನ್ನು ಮತ್ತೆ ನಡೆಸಬೇಕು ಎಂದು ನಾಗರಿಕ ಸಂಸ್ಥೆಗಳು ಆಯುಕ್ತರನ್ನು ಒತ್ತಾಯಿಸಿವೆ. 

ವಾರ್ಡ್‌ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಿ ಪಟ್ಟಿಯನ್ನು ಜುಲೈ17ರೊಳಗೆ ಸಲ್ಲಿಕೆ ಮಾಡುವಂತೆ ಹೈಕೋರ್ಟ್‌ ಆದೇಶಿಸಿದೆ. ಅದರ ಹಿನ್ನೆಲೆಯಲ್ಲಿ 198 ವಾರ್ಡ್‌ಗಳಿಂದ ಪಾಲಿಕೆಯ ಕಾರ್ಯದರ್ಶಿಗಳಿಂದ ವಾರ್ಡ್‌ ಸಮಿತಿಗಳಿಗೆ ಆಯ್ಕೆ ಮಾಡಲಾಗಿರುವ ಸದಸ್ಯರ ಪಟ್ಟಿಯನ್ನು ತರಿಸಿಕೊಳ್ಳಲಾಗಿದೆ. ಜುಲೈ 19ರಂದು ನ್ಯಾಯಾಲಯದಲ್ಲಿ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಅಂದು ಪಟ್ಟಿಯನ್ನು ಸಲ್ಲಿಕೆ ಮಾಡಲಾಗುತ್ತದೆ. 

ಪಾಲಿಕೆಯ ವಿವಿಧ ವಾರ್ಡ್‌ಗಳಿಂದ ತರಿಸಿಕೊಂಡಿರುವ 128 ವಾರ್ಡ್‌ಗಳ ವಾರ್ಡ್‌ ಸಮಿತಿ ಸದಸ್ಯರ ಪಟ್ಟಿಯನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಉಳಿದ 70 ವಾರ್ಡ್‌ಗಳ ಮಾಹಿತಿ ಕೌನ್ಸಿಲ್‌ ಕಾರ್ಯಾಲಯಕ್ಕೆ ಸಲ್ಲಿಕೆಯಾಗಿದ್ದು, ಶನಿವಾರ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Advertisement

ಆರ್‌ಟಿಐನಲ್ಲಿ ಮಾಹಿತಿ ಕೋರಿದ ನಾಗರಿಕ ಸಂಸ್ಥೆಗಳು
ವಾರ್ಡ್‌ ಸಮಿತಿ ಸದಸ್ಯರ ಆಯ್ಕೆಯ ಮಾನದಂಡಗಳೇನು? ವಾರ್ಡ್‌ ಸಮಿತಿ ಸದಸ್ಯರಾಗಲು ಅರ್ಜಿ ಸಲ್ಲಿಸಿದವರನ್ನು ಪರಿಗಣಿಸದಿರಲು ಹಾಗೂ ಇತರರನ್ನು ಸದಸ್ಯರಾಗಿ ಆಯ್ಕೆ ಮಾಡಲು ಕಾರಣವೇನು? ಎಂಬುದನ್ನು ತಿಳಿಸುವಂತೆ ವಿವಿಧ ನಾಗರಿಕ ಸಂಸ್ಥೆಗಳು ಬಿಬಿಎಂಪಿ ಆಯುಕ್ತರಿಗೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. 

ಆಯುಕ್ತರಿಗೆ ಅರ್ಜಿ ನೀಡಿದರೂ ಪ್ರಯೋಜನವಿಲ್ಲ
ವಾರ್ಡ್‌ ಮಟ್ಟದಲ್ಲಿ ಕಾರ್ಪೊರೇಟರ್‌ಗಳಿಗೆ ಅರ್ಜಿಗಳನ್ನು ನೀಡಿದರೆ ಕಡೆಗಣಿಸುತ್ತಾರೆ ಎಂಬ ಕಾರಣದಿಂದ ನೇರವಾಗಿ ಆಯುಕ್ತರಿಗೆ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿತ್ತು. ಆಯುಕ್ತರು ಅರ್ಜಿಗಳನ್ನು ಆಯಾ ವಾರ್ಡ್‌ ನೋಡಲ್‌ ಅಧಿಕಾರಿಗಳಿಗೆ ರವಾನಿಸಿದ್ದು, ಅಧಿಕಾರಿಗಳು ಕಾರ್ಪೊರೇಟರ್‌ಗಳ ಸಮ್ಮುಖದಲ್ಲಿ ಸದಸ್ಯರನ್ನು ಆಯ್ಕೆ ಮಾಡಿರುವುದು ಎಷ್ಟು ಸರಿ ಎಂದು ಸಿವಿಕ್‌ ಸಂಸ್ಥೆಯ ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಜಕೀಯೇತರಿಗೆ ಮಾತ್ರ ಸ್ಥಾನ
ನಗರಾಭಿವೃದ್ಧಿ ಇಲಾಖೆಯ ಆದೇಶದಂತೆ 2002ರಲ್ಲಿ ಪಾಲಿಕೆಯ ಆಯುಕ್ತರು ವಾರ್ಡ್‌ ಸಮಿತಿಗಳಿಗೆ ರಾಜಕೀಯೇತರರನ್ನು ಮಾತ್ರ ಪರಿಗಣಿಸಬೇಕು ಎಂಬ ಆದೇಶವನ್ನು ಹೊರಿಡಿದ್ದಾರೆ. ಜತೆಗೆ ವಾರ್ಡ್‌ನ ಎಲ್ಲ ಭಾಗಗಳ ಪ್ರತಿನಿಧಿಗಳಿಗೆ ಅವಕಾಶ ನೀಡುವುದು ಮತ್ತು ಆಥಿರ್ಕವಾಗಿ ಹಿಂದುಳಿದವರಿಗೆ ಅವಕಾಶ ನೀಡುವ ಕುರಿತಂತೆ ಉಲ್ಲೇಖೀಸಲಾಗಿದೆ. ಆದರೆ, ಸಮಿತಿಗೆ ಸದಸ್ಯರ ಆಯ್ಕೆ ವೇಳೆ ಇದ್ಯಾವುದನ್ನೂ ಪಾಲನೆ ಮಾಡಿಲ್ಲ ಎಂಬ ದೂರಿದೆ. 

ವಿವಿಧ ವಾರ್ಡ್‌ಗಳಿಂದ ಪಾಲಿಕೆಗೆ ಸಲ್ಲಿಕೆಯಾಗಿರುವ ವಾರ್ಡ್‌ ಸಮಿತಿ ಸದಸ್ಯರ ಪಟ್ಟಿಯಲ್ಲಿ ಆಯಾ ವಾರ್ಡ್‌ಗಳ ಕಾರ್ಪೊರೇಟರ್‌ಗಳ ಪತಿ-ಪತ್ನಿ, ಸಂಬಂಧಿಗಳು, ಪಕ್ಷದ ಬ್ಲಾಕ್‌ ಮಟ್ಟದ ಅಧ್ಯಕ್ಷರು ಹಾಗೂ ಪಕ್ಷ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ವಾರ್ಡ್‌ನ ಎಲ್ಲ ಭಾಗಗಳ ಪ್ರತಿನಿಧಿಗಳಿಗೆ ಅವಕಾಶ ನೀಡಿಲ್ಲ. ಇದರಿಂದಾಗಿ ಅದು ವಾರ್ಡ್‌ ಕಮಿಟಿಯ ಬದಲಾಗಿ, ರಾಜಕೀಯ ಕಮಿಟಿಯಾಗಿದೆ.
-ಕಾತ್ಯಾಯಿನಿ ಚಾಮರಾಜ್‌, ಸಿವಿಕ್‌ ಸಂಸ್ಥೆಯ ಕಾರ್ಯಕಾರಿಣಿ ಟ್ರಸ್ಟಿ

Advertisement

Udayavani is now on Telegram. Click here to join our channel and stay updated with the latest news.

Next