ಭಟ್ಕಳ: ತೌಕ್ತೆ ಚಂಡಮಾರುತದ ಪರಿಣಾಮ ಶನಿವಾರ ಮಧ್ಯಾಹ್ನ ತಾಲೂಕಿನ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಕಡಲ್ಕೊರೆತ ಉಂಟಾಗಿ ಅಪಾರ ಹಾನಿಯಾಗಿದೆ. ಮಾವಿನಕುರ್ವೆ ಬಂದರು, ಮುಡೇìಶ್ವರದಲ್ಲಿ ಲಂಗರು ಹಾಕಿದ್ದ ಬೋಟು, ದೋಣಿಳು ಒಂದೊಕ್ಕೊಂದು ಬಡಿದುಕೊಂಡು ಹಾನಿ ಸಂಭವಿಸಿದೆ.
ಶನಿವಾರ ಬೆಳಗ್ಗೆಯಿಂದಲೇ ಗಾಳಿ ಮಳೆಯ ಆರ್ಭಟ ಹೆಚ್ಚಿದ್ದರಿಂದ ಜಾಲಿಕೋಡಿಯಲ್ಲಿ ತಡೆಗೋಡೆ ದಾಟಿ ನೀರು ರಸ್ತೆಗೆ, ತೋಟಕ್ಕೆ ಹಾಗೂ ತೀರದ ಮನೆಗಳಿಗೆ ನುಗ್ಗಿದ್ದು, ತೀವ್ರ ಕಡಲ್ಕೊರೆತ ಉಂಟಾಗಿದೆ. ಮಾವಿನಕುರ್ವೆ ಬಂದರಿನಲ್ಲೂ ಸಮುದ್ರದ ಅಲೆಗಳು ಒಮ್ಮೆಲೆ ನುಗ್ಗಿದ್ದರಿಂದ ಲಂಗರು ಹಾಕಿದ್ದ ಬೋಟ್‌ಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿದ್ದು ಹಾನಿಯಾಗಿವೆ.
ಬಂದರಿನ ದಕ್ಕೆಯವರೆಗೂ ನೀರು ಏರಿದ್ದು, ಮೀನುಗಾರರು ಒಮ್ಮೆ ಭಯಗೊಂಡಿದ್ದರು. ತಲಗೋಡಿನಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಆಳೆತ್ತರದ ಅಲೆಗಳು ತಡೆಗೋಡೆ ದಾಟಿ ರಸ್ತೆಗೆ ಬಂದು ಅಪ್ಪಳಿಸಿವೆ. ಅಲೆಗಳ ಹೊಡೆತಕ್ಕೆ ತಡೆಗೋಡೆಯ ಕಲ್ಲುಗಳು ಸಮುದ್ರ ಪಾಲಾಗಿವೆ. ಹೆಬಳೆಯ ಹೊನ್ನೆಗದ್ದೆಯಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ.
ಮುರ್ಡೇಶ್ವರದಲ್ಲಿ ಭಾರೀ ಗಾತ್ರದ ಅಲೆಗಳು ದಡದಲ್ಲಿದ್ದ ದೋಣಿ, ಗೂಡಂಗಡಿಗಳಿಗೆ ಹಾನಿಯುಂಟು ಮಾಡಿದೆ. ದಡದಲ್ಲಿ ದೋಣಿ ಕಟ್ಟಿದ ಹಗ್ಗ ಅಲೆಗಳ ಹೊಡೆತಕ್ಕೆ ತುಂಡಾಗಿದ್ದರಿಂದ ಮೀನುಗಾರರು ದೋಣಿ ರಕ್ಷಣೆಗೆ ಹರಸಾಹಸಪಟ್ಟರು. ಜಾಲಿಯಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡ ಕುರಿತು ತಿಳಿದ ಪಪಂ ಮುಖ್ಯಾಧಿಕಾರಿ ಅಜಯ ಭಂಡಾರಕರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ತೀರವಾಸಿಗಳಿಗೆ ಜಾಗೃತರಾಗಿರುವಂತೆ ಸೂಚಿಸಿದರು.
ಜಾಲಿ ವ್ಯಾಪ್ತಿಯಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಪಪಂ ವತಿಯಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ರಾತ್ರಿ ವೇಳೆ ಅಲೆಗಳ ಅಬ್ಬರ ಹೆಚ್ಚಾಗಬಹುದೆಂಬ ಭಯ ಕೆಲವರಲ್ಲಿ ಆವರಿಸಿದೆ. ಜಾಲಿಕೋಡಿ ಕಡಲತೀರದಲ್ಲಿ ಅಪಾಯದಲ್ಲಿರುವ ಐದು ಮನೆಗಳ ಜನರನ್ನು ಬೇರೆಕಡೆಗೆ ಸ್ಥಳಾಂತರಿಸಲಾಗಿದೆ.
ಎರಡು ಕಡೆ ಗಂಜಿ ಕೇಂದ್ರ ಸ್ಥಾಪನೆ: ಜಾಲಿಯಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದರಿಂದ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಕಡಲತೀರಕ್ಕೆ ಯಾರೂ ಹೋಗಬಾರದು ಮತ್ತು ಜಾಗೃತೆಯಿಂದ ಇರುವಂತೆ ಮೈಕ್ ಮೂಲಕ ಜಾಗೃತಿ ಮೂಡಿಸಲಾಗಿದೆ. ಸಂಕಷ್ಟದಲ್ಲಿರುವ ತೀರದ ಕುಟುಂಬಗಳಿಗೆ ಅನುಕೂಲವಾಗಲು ಜಾಲಿಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ ಮತ್ತು ನಾಮಧಾರಿ ಸಭಾಭವನದಲ್ಲಿ ಗಂಜಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಅಜಯ ಭಂಡಾರಕರ ತಿಳಿಸಿದ್ದಾರೆ.