ಚೆನ್ನೈ: ಆರ್ ಎಸ್ ಎಸ್ ಕಾರ್ಯಕರ್ತ ಸೀತಾರಾಮನ್ ಅವರ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಶನಿವಾರ (ಸೆಪ್ಟೆಂಬರ್ 24) ತಮಿಳುನಾಡಿನ ತಾಂಬರಂನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಿಕ್ಸರ್ ಶರ್ಮಾ; ಭರ್ಜರಿ ಸಿಕ್ಸರ್ ಗಳ ಮೂಲಕ ಮಾರ್ಟಿನ್ ಗಪ್ಟಿಲ್ ದಾಖಲೆ ಮುರಿದ ರೋಹಿತ್
ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಘಟನೆ ಬಳಿಕ 24ಗಂಟೆಯ ಅವಧಿಯಲ್ಲಿ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ ಮೂರನೇ ಪ್ರಕರಣ ಇದಾಗಿದೆ ಎಂದು ವರದಿ ವಿವರಿಸಿದೆ.
ಇಂದು ಬೆಳಗ್ಗಿನ ಜಾವ 4ಗಂಟೆಗೆ ನಮಗೆ ಭಾರೀ ಶಬ್ದ ಕೇಳಿಸಿತ್ತು, ನಂತರ ಹೊರಭಾಗದಲ್ಲಿ ಬೆಂಕಿ ಉರಿಯುತ್ತಿರುವುದನ್ನು ಕಂಡೆವು. ಇದು ಶಾರ್ಟ್ ಸರ್ಕ್ಯೂಟ್ ನಿಂದ ಆದ ಘಟನೆ ಅಂತ ಭಾವಿಸಿದ್ದೇವು. ಆದರೆ ಪ್ರಕರಣ ಬೇರೆಯೇ ಆಗಿತ್ತು. ನಾವು ಬೆಂಕಿಯನ್ನು ನಂದಿಸಿ, ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದೇವು ಎಂದು ಸೀತಾರಾಮನ್ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ ಕೊಯಂಬತ್ತೂರ್ ನ ಕೋವೈಪುದುರ್ ಎಂಬಲ್ಲಿ ಅಪರಿಚಿತ ವ್ಯಕ್ತಿಗಳು ಆರ್ ಎಸ್ ಎಸ್ ಕಾರ್ಯಕರ್ತರೊಬ್ಬರ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದರು. ಈ ಘಟನೆ ನಂತರ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಕೇರಳದ ಕಣ್ಣೂರಿನಲ್ಲಿಯೂ ಶುಕ್ರವಾರ ಪಿಎಫ್ಐ ಬಂದ್ ಗೆ ಕರೆ ನೀಡಿದ್ದ ವೇಳೆಯಲ್ಲಿ ಆರ್ ಎಸ್ ಎಸ್ ಕಚೇರಿ ಮೇಲೆ ಅಪರಿಚಿತ ವ್ಯಕ್ತಿಗಳು ಬೈಕ್ ನಲ್ಲಿ ಆಗಮಿಸಿ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದ ಘಟನೆ ನಡೆದಿತ್ತು.
ಪಿಎಫ್ ಐ, ಎಸ್ ಡಿಪಿಐ ಕಚೇರಿ, ಮುಖಂಡರ ನಿವಾಸದ ಮೇಲೆ ಎನ್ ಐಎ, ಜಾರಿ ನಿರ್ದೇಶನಾಲಯ ದಾಳಿ ನಡೆಸಿರುವುದನ್ನು ವಿರೋಧಿಸಿ ಶುಕ್ರವಾರ (ಸೆ.23) ಕೇರಳ ಬಂದ್ ಗೆ ಕರೆ ನೀಡಿತ್ತು. ಈ ಸಂದರ್ಭದಲ್ಲಿ ಹರತಾಳ ಹಿಂಸಾಚಾರಕ್ಕೆ ತಿರುಗಿದ್ದು, ಬಸ್, ಕಾರುಗಳನ್ನು ಜಖಂಗೊಳಿಸಲಾಗಿತ್ತು ಎಂದು ವರದಿ ತಿಳಿಸಿದೆ.