ಹುಣಸೂರು: ನಿಶ್ಚಿತಾರ್ಥವಾಗಿದ್ದ ಮದುವೆ ನಿಂತು ಹೋದ ವಿಚಾರಕ್ಕೆ ಯುವಕನ ಕುಟುಂಬದವರು ಬೆದರಿಕೆ ಹಾಕುತ್ತಿದ್ದಾರೆಂದು ಯುವತಿ ಕಡೆಯವರು ಪೊಲೀಸರಿಗೆ ದೂರು ನೀಡಲು ಬಂದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಠಾಣೆ ಮುಂದೆಯೇ ಎರಡು ಕಡೆಯವರು ಬಡಿದಾಡಿಕೊಂಡು ಜೈಲು ಪಾಲಾಗಿರುವ ಘಟನೆ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಜಗಳ ಬಿಡಿಸಲು ಹೋದ ಠಾಣಾಧಿಕಾರಿ ಗಿರೀಶ್ ಮತ್ತು ಸ್ವಾಗತಕಾರಿಣಿ ಅನುಷಾರನ್ನು ತಳ್ಳಾಡಿದ್ದಲ್ಲದೆ, ಪೋಲಿಸರ ವಿರುದ್ದವೆ ತಿರುಗಿ ಬಿದ್ದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಅರೋಪದ ಮೇಲೆ ಮೂರು ಜನ ಅರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಪಿರಿಯಾಪಟ್ಟ ತಾಲೂಕಿನ ಕಾರೆಕೊಪ್ಪಲಿನ ನದೀಮ್, ಬೆಂಗಳೂರಿನ ಯಶವಂತಪುರದ ಇಮ್ರಾನ್ ಹಾಗೂ ನಗರದ ಮಾರಿಗುಡಿ ಬೀದಿಯ ಶಾಕೀಬ್‌ರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಬೆಂಗಳೂರಿನ ಯಶವಂತಪುರದ ಸಂಬಂಧಿಕರ ಹುಡುಗಿಯೊಂದಿಗೆ ನಗರದ ಮಾರಿಗುಡಿ ಬೀದಿಯ ವಾಸಿ ಮಹಮದ್ ಸಾದಿಕ್‌ರ ಪುತ್ರ ಮಹಮದ್ ಶಾಕಿಬ್ ಮದುವೆ ನಿಶ್ಚಿತಾರ್ಥವಾಗಿತ್ತು.ಈ ನಡುವೆ ಹುಡುಗ ಕುಡುಕ, ಆತನ ವರ್ತನೆ ಸರಿ ಇಲ್ಲ ಎಂದು ಬೆರೆಯವರಿಂದ ವಿಷಯ ತಿಳಿದ ಯುವತಿ ಮನೆಯವರು ನಿಶ್ಚಿತಾರ್ಥವಾದ ನಂತರದಲ್ಲಿ ಮದುವೆಯನ್ನು ನಿಲ್ಲಿಸಿದ್ದರು.
ಈ ವಿಚಾರ ತಿಳಿದ ಶಾಕಿಬ್, ಹುಡುಗಿ ಮನೆಯವರೊಂದಿಗೆ ಪೋನಿನಲ್ಲೆ ಗಲಾಟೆ ಮಾಡಿ ಕೆಟ್ಟದಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ಶುಕ್ರವಾರ ರಾತ್ರಿ ನಗರ ಠಾಣೆಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಠಾಣೆ ಬಳಿ ಜಮಾಯಿಸಿದ ಹುಡುಗ ಮತ್ತು ಅತನ ಕಡೆಯ ಕೆಲ ಯುವಕರು ಠಾಣೆ ಮುಂದೆಯೆ ಮಾತಿನ ಚಕಮಖಿ ನಡೆದು ಎರಡು ಕಡೆಯವರು ಜೋರು ಗಲಾಟೆ ಮಾಡುತ್ತಿದ್ದರು. ತಿಳಿ ಹೇಳಲು ಬಂದ ವೇಳೆ ಠಾಣಾಧಿಕಾರಿ ಗಿರೀಶ್ ಮತ್ತು ಸ್ವಾಗತಕಾರಿಣಿ ಅನುಷಾರನ್ನೇ ತಳ್ಳಾಡಿ, ಸೂಚನೆ ಪಾಲಿಸದೆ ಅವರ ವಿರುದ್ದವೆ ತಿರುಗಿ ಬಿದ್ದು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಗಲಾಟೆ ಮಾಡಿದ್ದಾರೆ. ಈ ವೇಳೆ ಎಸ್.ಐ.ಜಮೀರ್‌ಅಹಮದ್ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.