ಹುಣಸೂರು: ದನ ಮೇಯಿಸಲು ಹೋಗಿದ್ದ ವ್ಯಕ್ತಿಯ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಮುದ್ದನಹಳ್ಳಿ ಕೊಪ್ಪಲು ಗ್ರಾಮದ ರಮೇಶ್ (35) ಹುಲಿದಾಳಿಗೆ ಒಳಗಾಗಿರುವ ವ್ಯಕ್ತಿ. ನಾಗರಹೊಳೆ ಹುಲಿಸಂರಕ್ಷಿತ ಅರಣ್ಯ ಪ್ರದೇಶದಂಚಿನನಲ್ಲಿ ದನಗಳನ್ನು ಮೇಯಿಸುತ್ತಿದ್ದ ವೇಳೆ ಹುಲಿಯೊಂದು ದನಗಳ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಇದನ್ನು ತಪ್ಪಿಸಲು ಹೋದ ರಮೇಶ್ ಜೋರಾಗಿ ಕಿರುಚಿಕೊಂಡಿದ್ದು ವಿಚಲಿತವಾದ ಹುಲಿ ರಮೇಶನ ಮೇಲೆ ದಾಳಿ ನಡೆಸಿದೆ.
ಈ ದಾಳಿಯಲ್ಲಿ ರಮೇಶ್ ತೊಡೆ, ತಲೆಗೆ ಬಲವಾದ ಪೆಟ್ಟಾಗಿದ್ದು ಈತನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ತಲೆ ಸೇರಿದಂತೆ ಮತ್ತಿತರರ ಭಾಗಗಳಲ್ಲಿ ಗಾಯದ ಗುರುತುಗಳಿದ್ದ ಹುಲಿಯ ಹೆಜ್ಜೆ ಮತ್ತು ದಾಳಿ ನಡೆಸಿದ ನಂತರ ಅರಣ್ಯದೊಳಗೆ ರಕ್ತದ ಕಲೆಗಳು ಕಾಣಿಸಿಕೊಂಡಿದ್ದು, ಹುಲಿಯ ದಾಳಿಯಿಂದಲೆ ತೊಂದರೆ ಉಂಟಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲಾಗುತ್ತಿದೆ.
ಈತ ಅರಣ್ಯದ ಒಳಗೆ ದನ ಮೇಯಿಸುತ್ತಿದ್ದನೋ ಅಥವಾ ಜಮೀನಲ್ಲಿ ದನ ಮೇಯಿಸುತ್ತಿದ್ದನೋ ಎಂಬುದರ ಬಗ್ಗೆ ವಿಭಿನ್ನ ಹೇಳಿಕೆಗಳು ಗ್ರಾಮಸ್ಥರಿಂದ ಬಂದಿದ್ದು, ತನಿಖೆಯ ನಂತರ ಖಚಿತವಾಗಲಿದ್ದು ಈ ಬಗ್ಗೆ ಅರಣ್ಯ ಇಲಾಖೆ ವತಿಯಿಂದ ಚಿಕಿತ್ಸೆ ಕೊಡಿಸಲಾಗುತ್ತಿದ್ದು. ತಲೆಗೆ ಪೆಟ್ಟುಬಿದ್ದರಿರುವುದರಿಂದ ಸ್ಕ್ಯಾನಿಂಗ್ ಮುತ್ತಿತರ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ನಾಗರಹೊಳೆ ವೈಲ್ಡ್ ಲೈಫ್ ಆರ್‌ಎಫ್‌ಓ ಸುಬ್ರಹ್ಮಣ್ಯ ಪತ್ರಿಕೆಗೆ ತಿಳಿಸಿದ್ಧಾರೆ.
ಮುದ್ನಳ್ಳಿ ಅರಣ್ಯದಿಂದ ಹೊರಬರುವ ಹುಲಿಯು ಹುಣಸೂರು ತಾಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ ಜಾನುವಾರು ಸೇರಿದಂತೆ ಸಾಕು ಪ್ರಾಣಿಗಳನ್ನು ಕೊಂದು ಹಾಕಿದೆ.