ಹುಣಸೂರು: ಸಾವನ್ನಪ್ಪುವ ಮನುಷ್ಯರಿಗೆ ತಿಥಿ ಮಾಡುವುದು ಸಂಪ್ರದಾಯ. ಆದರೆ, ಇಲ್ಲೊಂದು ಕುಟುಂಬ ಮೃತಪಟ್ಟ ತಮ್ಮ ಪ್ರೀತಿಯ ಶ್ವಾನಕ್ಕೆ ತಿಥಿ ಕರ್ಮಾಂತರ ನೆರವೇರಿಸಿದ್ದಲ್ಲದೆ, ಗ್ರಾಮಸ್ಥರಿಗೆ ಊಟ ಬಡಿಸಿದ ಅಪರೂಪದ ಘಟನೆ ತಾಲೂಕಿನ ತೊಂಡಾಳು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬಿಳಿಕೆರೆ ಹೋಬಳಿಯ ತೊಂಡಾಳು ಗ್ರಾಮದ ಜವರಯ್ಯ-ಸಾಕಮ್ಮ ಅವರ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸುಬ್ಬ (ಮರಲಿಂಗಿ) ಎಂಬ ಹೆಸರಿನ ನಾಯಿ ಇತ್ತು. ಇದು ಇಡೀ ಆ ಬೀದಿಯ ಜನಕ್ಕೆ ಪ್ರೀತಿ ಪಾತ್ರವಾಗಿತ್ತು. ಯಾರಿಗೂ ತೊಂದರೆ ಕೊಡದೆ ಇದ್ದುದ್ದರಿಂದ ಪ್ರತಿಯೊಬ್ಬರಿಗೂ ಸುಬ್ಬ ಅಚ್ಚುಮೆಚ್ಚಿನ
ನಾಯಿಯಾಗಿತ್ತು.
ಬೀದಿಯಲ್ಲಿ ಯಾರೇ ಕರೆದರೂ ಅವರೊಂದಿಗೆ ಹೊಲ, ನದಿ ಕಡೆ ಹಗಲು-ರಾತ್ರಿ ವೇಳೆಯಲ್ಲಿ ಹೋಗಿ ಬರಲು ಸುಬ್ಬು ಜೊತೆಯಾಗಿರುತ್ತಿತ್ತು. ಈ ನಡುವೆ ಸುಬ್ಬು ಆರು ತಿಂಗಳ ಗರ್ಭಿಣಿಯಾಗಿತ್ತು.
ಮೇ 21ರಂದು ಯಾರೋ ಕಿಡಿಗೇಡಿಗಳು ಸುಬ್ಬನ ಹೊಟ್ಟೆಗೆ ಕಲ್ಲಿನಿಂದ ಬಲವಾಗಿ ಹೊಡೆದು ಬಾಯಿಯಿಂದ ರಕ್ತ ವಾಂತಿಮಾಡಿ ಸಾವನ್ನಪಿತ್ತು. ಇದರಿಂದ ನೊಂದ ಗ್ರಾಮದ ಜನರು ಬುಧವಾರ ಸುಬ್ಬ(ಮರಲಿಂಗಿ), ಹೂತ ಸ್ಥಳ(ಮಣ್ಣು ಮಾಡಿದ ಸ್ಥಳದಲ್ಲಿ) ಹೊಸ ಬಟ್ಟೆ ಹೊದೆಸಿ, ಹೂಮಾಲೆ ಹಾಕಿ, ಹಾಲು-ತುಪ್ಪ ಎರೆದು, ಪೂಜೆ ಸಲ್ಲಿಸಿ ಶ್ವಾನ ಪ್ರೀತಿ ಮೆರೆದಿದ್ದಾರೆ. ಈವೇಳೆ ಗ್ರಾಮಸ್ಥರು ಸುಬ್ಬನ ಸಮಾಗೆ ಪೂಜೆ ಸಲ್ಲಿಸಿ ತಿಥಿಯೂಟವನ್ನ ಕೂಡ ಮಾಡಿದ್ದು ವಿಶೇಷ.