ಹುಣಸೂರು: ಕಟ್ಟೆ ಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆ ಆರಂಭವಾಗುವ ಹಿನ್ನೆಲೆಯಲ್ಲಿ ಬೆಳೆಗಾರರ ಸಭೆಗೆ ತಂಬಾಕು ಮಂಡಳಿಯ ಹರಾಜು ನಿರ್ದೇಶಕರು ಸೇರಿದಂತೆ ಖರೀದಿ ಕಂಪನಿಗಳ ಮುಖ್ಯಸ್ಥರ ಗೈರನ್ನು ವಿರೋಧಿಸಿ ಹೊಗೆಸೊಪ್ಪು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿ ಸಭೆಯನ್ನು ಬಹಿಷ್ಕರಿಸಿದರು.
ಬುಧವಾರದಂದು ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯ ರೈತ ಭವನದಲ್ಲಿ ಮಂಡಳಿ ವತಿಯಿಂದ ಬೆಳೆಗಾರರು ಹಾಗೂ ತಂಬಾಕು ಖರೀದಿ ಕಂಪನಿಗಳ ಮುಖ್ಯಸ್ಥರ ಸಭೆ ಆಯೋಜಿಸಲಾಗಿತ್ತು. ಆದರೆ ಸಭೆಗೆ ಹರಾಜು ನಿರ್ದೇಶಕಿ, ಐಟಿಸಿ ಕಂಪನಿ ಸೇರಿದಂತೆ ಯಾವುದೇ ಕಂಪನಿಯ ಮುಖ್ಯಸ್ಥರು ಭಾಗವಹಿಸಿರಲಿಲ್ಲ. ಮಂಡಳಿಯ ಉಪಾಧ್ಯಕ್ಷ ಬಸವರಾಜು, ಸದಸ್ಯ ಹಬ್ಬನಕುಪ್ಪೆದಿನೇಶ್, ಪ್ರಾದೇಶಿಕ ವ್ಯವಸ್ಥಾಪಕ ಎಂ. ಲಕ್ಷ್ಮಣ ರಾವ್ ಹಾಗೂ ಸ್ಥಳೀಯ ಅಧೀಕ್ಷಕರುಗಳು ಮಾತ್ರ ಭಾಗವಹಿಸಿದ್ದರು.
ಸಭೆ ಆರಂಭವಾಗುತ್ತಿದ್ದಂತೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಶಿವಣ್ಣೇ ಗೌಡ,ಚಂದ್ರೇ ಗೌಡ, ರೈತ ಮುಖಂಡರಾದ ಅಶೋಕ್, ದೇವರಾಜ್, ಶ್ರೀಧರ, ಶ್ರೀನಿವಾಸ್, ಎ.ಪಿ.ಸ್ವಾಮಿ, ಮರೂರು ಚಂದ್ರಶೇಖರ್ ಮತ್ತಿತರ ಬೆಳೆಗಾರರು ಸಂಸದ, ಶಾಸಕರು ಬಂದಿಲ್ಲ, ಹರಾಜು ನಿರ್ದೇಶಕರಂತೂ ಯಾವ ಬೆಳೆಗಾರರ ಸಭೆಗೂ ಬರುತ್ತಿಲ್ಲಾ, ಇನ್ನು ಗುಂಟೂರಿನಲ್ಲಿರುವ ಕಾರ್ಯನಿರ್ವಾಹಕ ನಿರ್ದೇಶಕರೂ ಸಹ ಈವರೆವಿಗೂ ಕರ್ನಾಟಕ್ಕೆ ಬಂದಿಲ್ಲ. ಇಲ್ಲಿನ ಸಮಸ್ಯೆಗಳಿಗೆ ಜವಾಬ್ದಾರಿ ಹೊರುವವರು ಯಾರು, ಅವರು ಬರುವವರೆಗೂ ಸಭೆ ನಡೆಸುವುದೇ ಬೇಡವೆಂದು ಆಕ್ರೋಶ ವ್ಯಕ್ತಪಡಿಸಿ, ಸಭೆ ಬಹಿಷ್ಕರಿಸಿ ಮಂಡಳಿ ವಿರುದ್ದ ಪ್ರತಿಭಟಿಸಿದರು.
ಹಿರಿಯ ಅಧಿಕಾರಿಗಳು ಬರಲೇಬೇಕು: ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಅತಿಯಾದ ಮಳೆಯಿಂದ ತಂಬಾಕು ಇಳುವರಿ ಸಾಕಷ್ಟು ಕಡಿಮೆಯಾಗಿದೆ. ರಸಗೊಬ್ಬರವನ್ನು ಮೂರು-ನಾಲ್ಕು ಬಾರಿ ನೀಡಿದ್ದಾರೆ. ಇಂತಹ ಕಷ್ಟದ ಸಂದರ್ಭದಲ್ಲಿ ಬೆಳೆಗಾರರ ಸಂಕಷ್ಟಕ್ಕೆ ನಿಲ್ಲಬೇಕಾದ ತಂಬಾಕು ಮಂಡಳಿಯ ಹಿರಿಯ ಅಧಿಕಾರಿಗಳು ಕನಿಷ್ಟ ಹಾನಿ ಸ್ಥಳಕ್ಕೂ ಸೌಜನ್ಯದ ಭೇಟಿ ನೀಡಿಲ್ಲ. ಕನಿಷ್ಟ ಗೊಬ್ಬರ ಹಾಗೂ ಬೆಳೆ ಸಾಲ ಮನ್ನಾ ಮಾಡುವ ನಿಟ್ಟಿನಲ್ಲೂ ಪ್ರಯತ್ನ ನಡೆಸಿಲ್ಲ. ಹರಾಜು ನಿರ್ದೇಶಕರಂತೂ ರೈತ ವಿರೋಧಿಯಾಗಿದ್ದಾರೆ. ಹರಾಜಿಗೂ ಮುನ್ನ ಸಭೆಗೆ ಸಂಸದ, ಶಾಸಕರು, ಮಂಡಳಿಯ ಹಿರಿಯ ಅಧಿಕಾರಿಗಳು ಬರಲೇಬೇಕು. ಇಲ್ಲದಿದ್ದಲ್ಲಿ ಹರಾಜು ಮಾರುಕಟ್ಟೆ ಆರಂಭವಾಗಲು ಬಿಡಲ್ಲವೆಂದು ಎಚ್ಚರಿಸಿದರು.
ಕಟ್ಟೆಮಳಲವಾಡಿ ಶ್ರೀಧರ್ ಬೆಂಗಳೂರಿನ ಹರಾಜು ನಿರ್ದೇಶಕರ ಕಚೇರಿಯನ್ನು ಮೈಸೂರಿಗೂ, ಮೈಸೂರಿನ ಆರ್.ಎಂ.ಓ.ಕಚೇರಿಯನ್ನು ಹುಣಸೂರಿಗೂ ಸ್ಥಳಾಂತರಿಸಲು ಕ್ರಮ ವಹಿಸುವಂತೆ ಹಲವಾರು ವರ್ಷಗಳಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಿಮ್ಮ ಅವಧಿಯಲ್ಲಾದರೂ ಸ್ಥಳಾಂತರಕ್ಕೆ ಕ್ರಮ ವಹಿಸಿ. ಉತ್ತಮ ಬೆಲೆಕೊ ಡಿಸಲು ಮುಂದಾಗಿರೆಂದು ಮಂಡಳಿ ಉಪಾಧ್ಯಕ್ಷ ಬಸವರಾಜು ರಲ್ಲಿ ಮನವಿ ಮಾಡಿದರು. ಕಚೇರಿ ಸ್ಥಳಾಂತರ ಪ್ರಸ್ತಾವನೆ ಮಂಡಳಿ ಮುಂದಿದ್ದು, ಕ್ರಮವಹಿಸಲಾಗುವುದೆಂದು ಭರವಸೆ ಇತ್ತರು.
ಅ.10ಕ್ಕೆ ಮಾರುಕಟ್ಟೆ ಆರಂಭ: ಬೆಳೆಗಾರರ ಬೇಡಿಕೆಯಂತೆ ದಸರಾ ನಂತರ ಅ.10ಕ್ಕೆ ಮಾರುಕಟ್ಟೆ ಆರಂಭಿಸಲಾಗುತ್ತಿದೆ. ಈ ಬಾರಿ 62 ಮಿಲಿಯನ್ ತಂಬಾಕು ಉತ್ಪಾದನೆ ನಿರೀಕ್ಷಿಸಲಾಗಿದೆ. ರೈತ ಮುಖಂಡರ ಬೇಡಿಕೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಮಾರುಕಟ್ಟೆ ಆರಂಭಕ್ಕೆ ಬೆಳೆಗಾರರು ಸಹಕರಿಸುವಂತೆ ಕೋರಿದ್ದೇನೆ. –
ಎಂ.ಲಕ್ಷ್ಮಣ್ ರಾವ್. ಆರ್.ಎಂ.ಓ. ತಂಬಾಕು ಮಂಡಳಿ.