ಹುಣಸೂರು: ಕಳೆದ15 ದಿನಗಳ ಅಂತರದಲ್ಲಿ ಎರಡನೇ ಚಿರತೆ ಬೋನಿನಲ್ಲಿ ಬಂಧಿಯಾದ ಘಟನೆ ತಾಲೂಕಿನ ಹಬ್ಬನಕುಪ್ಪೆಯಲ್ಲಿ ನಡೆದಿದೆ.
ಇದೇ ಗ್ರಾಮದ ಲೋಕೇಶ್ ಎಂಬವರ ಜಮೀನಿನಲ್ಲಿ ಕಳೆದ 15 ದಿನಗಳ ಹಿಂದೆ ಸುಮಾರು ನಾಲ್ಕು ವರ್ಷದ ಹೆಣ್ಣು ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಮತ್ತೆ ಶುಕ್ರವಾರ ರಾತ್ರಿ ಸುಮಾರು 4 ವರ್ಷದ ಗಂಡು ಚಿರತೆಯನ್ನು ಬೋನಿನಲ್ಲಿ ಬಂಧಿಸಲಾಗಿದೆ.
ಫೆ.16ರ ಗುರುವಾರ ಹಬ್ಬನಕುಪ್ಪೆಯ ನಾಗರಾಜಗೌಡರ ಜಮೀನಿನ ಮನೆ ಬಳಿ ಕರುವೊಂದನ್ನು ತಿಂದು ಹಾಕಿತ್ತು. ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ಚಿರತೆ ಸೆರೆಗೆ ಬೋನ್ ಇಡಲಾಗಿತ್ತು. ಬೋನಿನಲ್ಲಿದ್ದ ಕರುವಿನ ಮಾಂಸವನ್ನು ತಿನ್ನಲು ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಇದೇ ಗ್ರಾಮದ ಲೋಕೇಶ್ ಅವರ ಜಮೀನಿನ ಬಳಿ ಪತ್ತೆಯಾಗಿದ್ದ ಚಿರತೆಯು ಜಾನುವಾರುಗಳ ಮೇಲೆ ದಾಳಿ ನಡೆಸಿದ್ದು, ನಾಲ್ಕು ವರ್ಷದ ಹೆಣ್ಣು ಚಿರತೆಯನ್ನು ಫೆ.2ರಂದು ಸೆರೆ ಹಿಡಿಯಲಾಗಿತ್ತು.
ಈ ಎರಡು ಚಿರತೆಗಳನ್ನು ಆರ್.ಎಫ್.ಓ. ನಂದ ಕುಮಾರ್ ನೇತೃತ್ವದ ತಂಡ ಬಂಡೀಪುರದ ಮೂಲೆ ಹೊಳೆ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಂಧಮುಕ್ತಗೊಳಿಸಿದ್ದಾರೆಂದು ಡಿಸಿಎಫ್ ಸೀಮಾ ಉದಯವಾಣಿಗೆ ತಿಳಿಸಿದ್ದಾರೆ.