ಹುಣಸೂರು: ಹನಗೋಡಿನ ಜಮೀನೊಂದರಲ್ಲಿ ಮತ್ತೆ ಹುಲಿ ಹೆಜ್ಜೆ ಕಾಣಿಸಿಕೊಂಡಿದ್ದು, ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡಲು ರೈತರು ಭಯ ಭೀತರಾಗಿದ್ದಾರೆ.
ಕಳೆದ ಒಂದು ವಾರದಿಂದ ಸಮೀಪದ ಶೆಟ್ಟಹಳ್ಳಿ, ಅಬ್ಬೂರು, ಸಿಂಡೇನಹಳ್ಳಿ ಗ್ರಾಮಗಳ ಜಮೀನಿನಲ್ಲಿ ಹುಲಿ ಓಡಾಟ ನಡೆಸಿರುವ ಜಾಡು ಪತ್ತೆಯಾಗಿತ್ತು. ಪ್ರಸ್ತುತ ಹನಗೋಡು ಗ್ರಾಮದ ಹಾರಂಗಿ ಕಾಲುವೆ ಬಳಿ ರೈತ ಚಂದ್ರು ಅವರ ಜಮೀನಿನಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದೆ. ಈ ಭಾಗದ ರೈತರು ರಾತ್ರಿ ವೇಳೆ ತಮ್ಮ ಜಮೀನುಗಳಿಗೆ ತೆರಳಲು ಭಯ ಭೀತರಾಗಿದ್ದಾರೆ.
ಹನಗೋಡು ಮತ್ತು ಶೆಟ್ಟಹಳ್ಳಿ ಭಾಗದಲ್ಲಿ ಕಳೆದ ಆರು-ಏಳು ತಿಂಗಳಿನಿಂದಲೂ ಆಗಾಗ್ಗೆ ಹುಲಿ ಹೆಜ್ಜೆ ಕಾಣಿಸಿಕೊಂಡಿದ್ದು, ಹುಲಿಯು ತನ್ನ ಇರುವಿಕೆಯನ್ನು ಸ್ಪಷ್ಟಪಡಿಸುತ್ತಿದೆ.
ಬೋನ್ ಇಡಲು ಆಗ್ರಹ: ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಎಡೆ ಬಿಡದೇ ಸುರಿಯುತ್ತಿರುವ ಜಡಿ ಮಳೆಯ ಸಂಕಷ್ಟದಲ್ಲಿರುವ ರೈತರು ಹುಲಿ ಹೆಜ್ಜೆ ಕಾಣಿಸಿಕೊಂಡಿರುವುದರಿಂದ ಜಮೀನುಗಳಿಗೆ ತೆರಳಲು ಮತ್ತು ಜಾನುವಾರು ಮೇಯಿಸಲು ಹೋಗುವುದಕ್ಕೂ ಹೆದರುತ್ತಿದ್ದಾರೆ. ಶೀಘ್ರ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇರಿಸಿ ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಗ್ರಾ.ಪಂ. ಸದಸ್ಯ ಎಚ್.ಪಿ. ಶಿವಣ್ಣ ಒತ್ತಾಯಿಸಿದ್ದಾರೆ.