ಹುಣಸೂರು: ತಾಲೂಕಿನ ಇಬ್ಬರು ವಿಕಲಚೇತನ ಕ್ರೀಡಾಪಟುಗಳು ನೇಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಪ್ಯಾರಾ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಹುಣಸೂರು ನಗರದ ಮೂರೂರಮ್ಮ ಬಡಾವಣೆಯ ವಿಕಲಚೇತನ ಸೋಮ ಕುಮಾರ್ ಹಾಗೂ ತಾಲೂಕಿನ ಹನಗೋಡು ಗ್ರಾಮದ ವಾಸಿಂ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡ ವಿಕಲಚೇತನ ಕ್ರೀಡಾಪಟುಗಳು.
ಇವರು ತಮಿಳುನಾಡಿನ ಪೆರಂದೊರೈಯ ಈರೋಡ್ ಸೆಂಗುನತ್ತಾರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಗೆದ್ದು, ಇದೀಗ ಫೆ.19 ರಿಂದ 21 ರವರೆಗೆ ನೇಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಶಾಸಕ ಅಭಿನಂದನೆ: ಪ್ರತಿಭೆಗಳನ್ನು ಗುರುತಿಸಿ ಇತ್ತೀಚೆಗೆ ಶಾಸಕ ಎಚ್.ಪಿ. ಮಂಜುನಾಥ ಅಭಿನಂದಿಸಿ ತಲಾ 20 ಸಾವಿರ ರೂ. ನೆರವು ನೀಡಿದ್ದಾರೆ.
ನೆರವಿಗೆ ಮನವಿ: ಇರ್ವರೂ ವಿಕಲಚೇತನ ಕ್ರೀಡಾಪಟುಗಳು ಬಡವರಾಗಿದ್ದು, ನೇಪಾಳಕ್ಕೆ ತೆರಳಲು ಈ ಪ್ರತಿಭೆಗಳಿಗೆ ಮತ್ತಷ್ಟು ಹಣಕಾಸಿನ ನೆರವು ಅಗತ್ಯವಿದ್ದು, ಸಂಘ-ಸಂಸ್ಥೆಗಳು, ದಾನಿಗಳು ನೆರವಿನ ಹಸ್ತ ಚಾಚುವಂತೆ ಮನವಿ ಮಾಡಿದ್ದು, ನೆರವಾಗಲಿಚ್ಚಿಸುವವರು ಸೋಮ ಕುಮಾರ್ (9980347231) ಮೊ.ಸಂ.ಯನ್ನು ಸಂಪರ್ಕಿಸಬಹುದು.