Advertisement

ಹುಣಸೂರು: ತಾಲೂಕಿನ 271 ಹಳ್ಳಿಗಳಿಗೆ 282 ಕೋಟಿ ವೆಚ್ಚದಡಿ ಕಾವೇರಿ ನೀರು ಪೂರೈಕೆ

12:42 PM Dec 11, 2022 | Team Udayavani |

ಹುಣಸೂರು: ಹುಣಸೂರು ತಾಲೂಕಿನ ಎಲ್ಲ ಹಳ್ಳಿಗಳಿಗೂ 2024 ಡಿಸೆಂಬರ್‌ನೊಳಗೆ ಕಾವೇರಿ ನೀರು ಪೂರೈಸುವ 282 ಕೋಟಿ ವೆಚ್ಚದ ಬಹುಗ್ರಾಮ(ಜೆಜೆಎಂ) ಕುಡಿಯುವ ನೀರು ಯೋಜನೆಗೆ ಸಂಪುಟದಲ್ಲಿ ಅನುಮೋದನೆ ದೊರೆತಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.

Advertisement

ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಯೋಜನೆ ಕುರಿತು ಮಾಹಿತಿ ನೀಡಿದ ಅವರು, ಹಳೇ ಉಂಡವಾಡಿಯ ಕಾವೇರಿ ಹಿನ್ನೀರಿನ ಬಳಿ ನೀರು ಸಂಗ್ರಹಿಸಿ ಚಿಕ್ಕಾಡಿಗನಹಳ್ಳಿ ಬಳಿಯಲ್ಲಿ 15 ಲಕ್ಷ ಲೀ. ಬೃಹತ್ ನೀರು ಸಂಗ್ರಹಿಸುವ ಟ್ಯಾಂಕ್ ನಿರ್ಮಿಸಿ ಅಲ್ಲಿಂದ ಎಲ್ಲ ಗ್ರಾಮಗಳಿಗೂ ಕಾವೇರಿ ನೀರು ಪೂರೈಸುವ ಯೋಜನೆ ಇದಾಗಿದ್ದು, ಇದಕ್ಕಾಗಿ ವಿವಿಧ ಗ್ರಾಮಗಳಲ್ಲಿ ಹೊಸದಾಗಿ 28 ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ಇಷ್ಟು ವರ್ಷಗಳ ಅಧಿಕಾರವಧಿಯಲ್ಲಿ ತಾಲೂಕಿನ ಎಲ್ಲ ಗ್ರಾಮಗಳಿಗೂ ಕಾವೇರಿ ನೀರು ತಲುಪಿಸುವ ಕಾರ್ಯ ನನ್ನ ಅವಧಿಯಲ್ಲಿ ಸಾಕಾರಗೊಳ್ಳುತ್ತಿರುವುದು ತೃಪ್ತಿ ತಂದಿದ್ದು, ತಾವು ಈ ಹಿಂದೆ ಜನತೆಗೆ ನೀಡಿದ್ದ ಭರವಸೆ ಈಡೇರಿಸಿದ ಹೆಮ್ಮೆ ಇದೆ ಎಂದರು.

ಜಿಲ್ಲೆಯಲ್ಲೇ ಪ್ರಥಮ:

ಮೈಸೂರು ಜಿಲ್ಲೆಯಲ್ಲೇ ಪ್ರಥಮವಾಗಿ ಬಹುಗ್ರಾಮ ಕುಡಿಯುವ ನೀರು ಯೋಜನೆ ನಮ್ಮ ತಾಲೂಕಿನಲ್ಲಿ ಸಾಕಾರಗೊಳ್ಳುತ್ತಿರುವುದು ಸಂತಸದ ವಿಷಯ. ಈವರೆಗೆ ಕೆಲವು ಹಳ್ಳಿಗಳಿಗೆ 3-4 ದಿನಗಳಿಗೊಮ್ಮೆ ಬೋರ್ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿತ್ತು. 2024 ರ ಡಿಸೆಂಬರ್ ಅಂತ್ಯದೊಳಗೆ ಯೋಜನೆ ಪೂರ್ಣಗೊಂಡು ತಾಲೂಕಿನ ಎಲ್ಲ 271 ಗ್ರಾಮಗಳಿಗೂ ಯೋಜನೆಯಡಿ ನೀರು ಪೂರೈಸುವ ಯೋಜನೆ ಇದಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರ ಸಮಾನ ಅನುದಾನ ಭರಿಸಲಿದೆ ಎಂದರು.

Advertisement

ಸಿ.ಎಂ.ಗೆ ಅಭಿನಂದನೆ: ಬಹುಗ್ರಾಮ ಕುಡಿಯುವ ನೀರು ಯೋಜನೆಗೆ  ಸಂಪುಟದಲ್ಲಿ ಅನುಮೋದನೆಗೆ ನೆರವಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಎಂಎಲ್‌ಸಿ ವಿಶ್ವನಾಥ್ ಹಾಗೂ ಸಂಸದ ಪ್ರತಾಪಸಿಂಹ ಮತ್ತು ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next