Advertisement

ಹುಣಸೂರು: ಡಿಸೆಂಬರ್‌ಗೆ ಆಸ್ಪತ್ರೆ ಕಾಮಗಾರಿ ಪೂರ್ಣ; ಆರೋಗ್ಯ ಸಚಿವ ಡಾ. ಸುಧಾಕರ್ ಭರವಸೆ

09:58 AM Oct 29, 2022 | Team Udayavani |

ಹುಣಸೂರು: ಡಿಸೆಂಬರ್ 2022 ರೊಳಗೆ ಹುಣಸೂರಿನಲ್ಲಿ ನಿರ್ಮಿಸುತ್ತಿರುವ ದೇವರಾಜ ಅರಸು ಹೈಟೆಕ್ ಆಸ್ಪತ್ರೆಯನ್ನು ಪೂರ್ಣಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಆರ್. ಸುಧಾಕರ್ ಭರವಸೆ ನೀಡಿದ್ದಾರೆ.

Advertisement

ಶಾಸಕ ಎಚ್.ಪಿ.ಮಂಜುನಾಥ ಅವರ ಮನವಿ ಮೇರೆಗೆ ನಿರ್ಮಾಣ ಹಂತದ ಆಸ್ಪತ್ರೆ ಕಾಮಗಾರಿಯನ್ನು ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆಯನ್ನು 135 ಹಾಸಿಗೆಗಳಿಗೆ ಏರಿಕೆ ಮಾಡಲಾಗಿದ್ದ ಪರಿಣಾಮ ಅಂದಾಜು ವೆಚ್ಚವೂ ಹೆಚ್ಚಿದೆ. ಕೆಲ ತಾಂತ್ರಿಕ ಸಮಸ್ಯೆ, ಸ್ಥಳ ಬದಲಾವಣೆಯಿಂದಾಗಿ 25 ರಿಂದ 32 ಕೋಟಿಗೆ ಏರಿಕೆಯಾಗಿದೆ. ಈ ವೇಳೆ 25 ಕೋಟಿಗೆ ನಿಗದಿಗೊಳಿಸುವ ಸಲುವಾಗಿ ಕಾಂಪೌಂಡ್‌, ನೀರಿನ ಟ್ಯಾಂಕ್, ಲಿಪ್ಟ್, ಒಳಾಂಗಣ ರಸ್ತೆ ಸೇರಿದಂತೆ ಕೆಲ ಪ್ರಮುಖ ಕಾಮಗಾರಿಗಳೇ ಕೈಬಿಟ್ಟು ಹೋಗಿದೆ. ಇದಕ್ಕೆ ಅಂದಾಜು 7-8 ಕೋಟಿ ರೂ. ಅವಶ್ಯವಿದ್ದು, ತಕ್ಷಣವೇ ಆಡಳಿತಾತ್ಮಕ ಮಂಜೂರಾತಿ ಕೊಡಿಸುತ್ತೇನೆ ಎಂದರು.

ಅದಲ್ಲದೇ ಅಗತ್ಯ ಉಪಕರಣಗಳ ಖರೀದಿಗೂ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಸ್ಥಳದಿಂದಲೇ ಆರೋಗ್ಯ ಇಲಾಖೆ ಕಾರ್ಯದರ್ಶಿ ರಂದೀಪ್‌ರನ್ನು ಸಂಪರ್ಕಿಸಿ ಮಂಜೂರಾತಿಗೆ ತಕ್ಷಣವೇ ಅಗತ್ಯ ಕ್ರಮವಹಿಸುವಂತೆ ಹಾಗೂ ಹೆಚ್ಚುವರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ತಕ್ಷಣವೇ ಕ್ರಿಯಾ ಯೋಜನೆ ಸಲ್ಲಿಸುವಂತೆ ಚೀಫ್‌ ಇಂಜಿನಿಯರ್ ಮಂಜಪ್ಪ, ಕಾರ್ಯಪಾಲಕ ಅಭಿಯಂತರ ಶ್ರೀನಾಥ್‌ರಿಗೆ ಸಚಿವರು ಸೂಚಿಸಿದರು.

ಇದೇ ವೇಳೆ ಶಾಸಕ ಮಂಜುನಾಥ್‌, 2018ರ ಸಿದ್ದರಾಮಯ್ಯರ ಅವಧಿಯಲ್ಲಿ ಮಂಜೂರಾದ ಈ ಆಸ್ಪತ್ರೆ ನಿರ್ಮಾಣ ಪೂರ್ಣಗೊಳ್ಳಲು ಹಾಗೂ ಅಗತ್ಯವಿರುವ ಬಾಕಿ ಅನುದಾನ ಬಿಡುಗಡೆಗೆ ಸದನದಲ್ಲಿ ಪ್ರಶ್ನಿಸಿದ್ದೆ, ಕೊಟ್ಟ ಭರವಸೆಯಂತೆ ಪೂರ್ಣಗೊಳ್ಳಲು ಅನುದಾನ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು ಈ ಡಿಸಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಉಳಿದ ಕಾಮಗಾರಿಗಳಿಗೆ ತಕ್ಷಣವೇ ಅನುದಾನ ಬಿಡುಗಡೆ ಮಾಡುವುದಾಗಿ ಸಚಿವರು ವಾಗ್ದಾನ ಮಾಡಿದರು.

ಹನಗೋಡು-ಬಿಳಿಕೆರೆ ಆಸ್ಪತ್ರೆ ಮೇಲ್ದರ್ಜೆಗೇರಿಸಿ:

Advertisement

ರಾಜ್ಯದಲ್ಲೇ ಅತೀ ಹೆಚ್ಚು ಹೆರಿಗೆಯಾಗುವ ಆಸ್ಪತ್ರೆಗಳಲ್ಲಿ ಒಂದಾದ ಕಾಡಂಚಿನ ಹನಗೋಡು ಪಿಎಚ್‌ಸಿಯನ್ನು ಹಾಗೂ ಬಿಳಿಕೆರೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಶಾಸಕರ ಮನವಿಗೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವ ಭರವಸೆ ಇತ್ತರು. ಇದೇ ವೇಳೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ರಾತ್ರಿ ಪಾಳಿಯಲ್ಲಿ ಒಬ್ಬರೇ ವೈದ್ಯರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿ ವೈದ್ಯರ ನೇಮಕಕ್ಕೆ ಕ್ರಮವಹಿಸಬೇಕೆಂಬ ಬೇಡಿಕೆಗೆ ಪಿ.ಜಿ.ವೈದ್ಯರ ನೇಮಕಕ್ಕೆ ಕ್ರಮವಹಿಸಲು ಡಾ.ಸರ್ವೇಶ್‌ರಾಜ್‌ಅರಸ್‌ರಿಗೆ ಸೂಚಿಸಿದರು.

ತಾಯಿ-ಮಕ್ಕಳ ಆಸ್ಪತ್ರೆಗೆ ಸಂಸದ ಮನವಿ:

ಹಾಲಿ ಸಾರ್ವಜನಿಕ ಆಸ್ಪತ್ರೆಯನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಾಗಿದ್ದು, ಅಗತ್ಯ ಕ್ರಮಕೈಗೊಳ್ಳುವಂತೆ ಹಾಗೂ ಬಿಳಿಕೆರೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಸಂಸದ ಪ್ರತಾಪಸಿಂಹ ಮಾಡಿದ ಮನವಿಗೆ ಸ್ಥಳದಲ್ಲಿದ್ದ ಆರೋಗ್ಯ ಇಲಾಖೆ ನಿರ್ದೇಶಕಿ ಡಾ.ಇಂದುಮತಿಗೆ ಅಗತ್ಯ ಕ್ರಮವಹಿಸಲು ಸೂಚಿಸಿ, ಹನಗೋಡು ಹಾಗೂ ಬಿಳಿಕೆರೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಪರಿಶೀಲಿಸಲಾಗುವುದೆಂದರು. ತಹಸೀಲ್ದಾರ್ ಡಾ.ಅಶೋಕ್, ಡಿಎಚ್‌ಓ ಡಾ.ಪ್ರಸಾದ್, ಟಿಎಚ್‌ಓ ಡಾ.ಕೀರ್ತಿಕುಮಾರ್, ಡಾ.ಸವೇಶ್‌ ರಾಜೇ ಅರಸ್ ಇದ್ದರು.

ಹುಡಾ ಅಧ್ಯಕ್ಷ ಗಣೇಶ್‌ ಕುಮಾರ ಸ್ವಾಮಿ, ನಗರಸಭೆ ಸದಸ್ಯರಾದ ಸೈಯದ್‌ ಯೂನಸ್, ಸಮೀನಾ ಬಾನು, ರಮೇಶ್, ಮನು, ಕಾಂಗ್ರೆಸ್ ಅಧ್ಯಕ್ಷ ನಾರಾಯಣ್, ಕಲ್ಕುಣಿಕೆ ರಮೇಶ್, ದೇವರಾಜ್, ಮಾಜಿ ಉಪಾಧ್ಯಕ್ಷ ದೇವನಾಯಕ, ರಾಘು, ವೆನ್ನಿ, ಕುಮಾರ್, ಪ್ರಭಾಕರ್, ನಾಗರಾಜ್, ಮಂಜು, ಆಸ್ಪತ್ರೆ ಜಯರಾಂ, ಬಿಜೆಪಿ ಮುಖಂಡರಾದ ಯೋಗಾನಂದ ಕುಮಾರ್, ವೀರೇಶ್‌ ರಾವ್‌ ಬೋಬಡೆ, ವಿ.ಎನ್.ದಾಸ್ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next