ಹುಣಸೂರು: ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರ ಮೊಟಕುಗೊಳಿಸುವ ಸರಕಾರದ ನಿರ್ಧಾರದ ವಿರುದ್ದ ಹುಣಸೂರು ತಾಲೂಕು ಸದಸ್ಯರೊಡಗೂಡಿ ಅ.18 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ತಾಲೂಕು ಗ್ರಾ.ಪಂ. ಸದಸ್ಯರ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಗ್ರಾಮ ಪಂಚಾಯತ್ ಗೆ ಇರುವ ಪರಮಾಧಿಕಾರವನ್ನು ಚೆಕ್‌ಗಳಿಗೆ ಸಹಿ ಮಾಡುವ, ಅದರಲ್ಲೂ 11-ಬಿ, 11-9, ಲೈಸನ್ಸ್ ಹಾಗೂ ನಿರಾಪೇಕ್ಷಣಾ ಪತ್ರ ನೀಡುವ ಅಧಿಕಾರವನ್ನು ಪಿಡಿಓಗಳಿಗೆ ನೀಡಿರುವುದು ಸ್ಥಳೀಯ ಸರಕಾರದ ಸಾಮಾನ್ಯ ಸಭೆಯ ಅಧಿಕಾರವನ್ನೇ ಮೊಟಕುಗೊಳಿಸಲು ಹೊರಟಿರುವುದು ಖಂಡನೀಯ. ಆದರೆ ಸರಕಾರ ಅಧಿಕಾರ ಮೊಟಕುಗೊಳಿಸುತ್ತಿಲ್ಲವೆಂದು ಹೇಳುತ್ತಿದ್ದರೂ ಗ್ರಾಮೀಣಾಭಿವೃದ್ದಿ ಇಲಾಖೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿಗಳು ಯಾವುದೇ ಸ್ಪಷ್ಟನೆ ನೀಡದಿರುವುದು ಅನುಮಾನಕ್ಕೆಡೆ ಮಾಡಿದೆ. ಹೀಗಾಗಿ ಸರಕಾರದ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅ.16ಕ್ಕೆ ಗ್ರಾ.ಪಂ.ಎದುರು,18ಕ್ಕೆ ಹುಣಸೂರಲ್ಲಿ ಪ್ರತಿಭಟನೆ:
ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷೆ ಛಾಯಾನಾಗೇಗೌಡ ಮಾತನಾಡಿ, ಇದೊಂದು ಸಂವಿದಾನ ವಿರೋಧಿಯಾಗಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ಪ್ರಥಮ ಹಂತದಲ್ಲಿ ಅ.16ಕ್ಕೆ ತಾಲೂಕಿನ 41 ಗ್ರಾಮ ಪಂಚಾಯತ್ ಗಳ ಮುಂದೆ ಪ್ರತಿಭಟಿಸಲಾಗುವುದು, ಅ.18ಕ್ಕೆ ಹುಣಸೂರಿನಲ್ಲಿ ನಡೆಯಲಿದ್ದು. ನಗರಸಭಾ ಮೈದಾನದಿಂದ ಮೆರವಣಿಗೆಯಲ್ಲಿ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದೆಂದರು.
ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಸ್ವಪ್ನ ಚಂದ್ರಶೇಖರ್, ಖಜಾಂಚಿ ರಮೇಶ್, ಕರಿಮುದ್ದನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಮಹದೇವ್ ಮತ್ತಿತರಿದ್ದರು.