Advertisement

ಹುಣಸೂರು: ಬಿರುಗಾಳಿ ಸಹಿತ ಭಾರಿ ಮಳೆಗೆ ಲಕ್ಷಾಂತರ ರೂ. ಬೆಳೆ ನಷ್ಟ

08:28 PM May 12, 2023 | Team Udayavani |

ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ಗೌಡನಕಟ್ಟೆಯಲ್ಲಿ ಬಿರುಗಾಳಿ ಮಳೆಗೆ ಲಕ್ಷಾಂತರ ರೂ ಬೆಲೆ ಬಾಳುವ ಬಾಳೆ ಬೆಳೆ ನೆಲಕಚ್ಚಿದ್ದರೆ, ತೆಂಗಿನ ಮರಗಳು ಬುಡಸಹಿತ ಧರೆಗುರುಳಿದೆ. ಸಿಡಿಲು ಬಡಿದು ಎರಡು ಟ್ರಾನ್ಸ್ ಫಾರ‍್ಮರ್‌ ಸುಟ್ಟು ಹೋಗಿದೆ.

Advertisement

ತಾಲೂಕಿನ ಗುರುಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೌಡನಕಟ್ಟೆ ಸುತ್ತಮುತ್ತ ಗಂಟೆಕಾಲ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಗ್ರಾಮದ ರಾಮೇಗೌಡರ ಪುತ್ರ ಬಿ.ಆರ್.ಮಹದೇವ್‌ರಿಗೆ ಸೇರಿದ 6 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಫಲಕ್ಕೆ ಬಂದಿದ್ದ ನೇಂದ್ರ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಇದರಿಂದ ಸುಮಾರು 24 ಲಕ್ಷರೂ ನಷ್ಟವಾಗಿದೆ.

ಗೋವಿಂದನಾಯಕರಿಗೆ ಸೇರಿದ 500 ಕ್ಕೂ ಹೆಚ್ಚು ಏಲಕ್ಕಿ ಬಾಳೆ ಸಂಪೂರ್ಣ ನೆಲಕ್ಕುರುಳಿದ್ದು, ಸುಮಾರು ನಾಲ್ಕು ಲಕ್ಷರೂ ನಷ್ಟವಾಗಿದೆ. ಅಲ್ಲದೆ ಅಲ್ಲಲ್ಲಿ ತೆಂಗಿನ ಮರಗಳು ಸಹ ಬುಡಮೇಲಾಗಿದೆ.

ಗೌಡನಕಟ್ಟೆಯಲ್ಲಿ 6 ವಿದ್ಯುತ್ ಕಂಬಗಳು ಸಹ ನೆಲಕ್ಕುರುಳಿ ಬಿದ್ದಿದ್ದದ್ದರ ಪರಿಣಾಮ ಗುರುವಾರ ರಾತ್ರಿಯಿಂದ ವಿದ್ಯುತ್ ಸ್ಥಗಿತಗೊಂಡಿದ್ದು, ಗೌಡನಕಟ್ಟೆಬಳಿಯಲ್ಲಿ ಬೃಹತ್ ಆಲದಮರವೊಂದು ಬುಡಸಹಿತ ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದಿದ್ದು, ಶುಕ್ರವಾರ ಸಂಜೆವರೆಗೂ ಚೆಸ್ಕಾಂಸಿಬಂದಿಗಳು ದುರಸ್ತಿಕಾರ್ಯ ನಡೆಸುತ್ತಿದ್ದಾರೆ.

ಧರೆಗುರುಳಿದ ನೂರಾರು ಮರಗಳು
ಬಿರುಗಾಳಿಗೆ ಸಿಲುಕಿ ಗುರುಪುರ ಟಿಬೇಟ್ ಕ್ಯಾಂಪ್, ಗುರುಪುರ ಶಾಲೆ ಬಳಿ, ಗೌಡನಕಟ್ಟೆ ಸೇರಿದಂತೆ ಸುತ್ತ ಮುತ್ತಲ ಜಮೀನುಗಳಲ್ಲಿ ನೂರಾರು ಮರಗಳು ಧರೆಗುರುಳಿವೆ. ಯಾವುದೇ ಪ್ರಾಣ ಹಾನಿಯಾಗದಿರುವುದು ಗ್ರಾಮಸ್ಥರಲ್ಲಿ ನೆಮ್ಮದಿ ತಂದಿದೆ. ಗುರುಪುರದಲ್ಲಿ ಎರಡು ಮನೆಗಳ ಮೇಲ್ಚಾವಣಿ ಹಾರಿ ಹೋಗಿದ್ದರೆ. ಮನೆ ಮನೆ ಮೇಲೆ ಮರ ಉರುಳಿ ಬಿದ್ದು ಗೋಡೆ ಕುಸಿದಿದೆ.

Advertisement

ಪರಿಹಾರಕ್ಕೆ ಮನವಿ
ಬಾಳೆ ಬೆಳೆ ನಷ್ಟದಿಂದ ಲಕ್ಷಾಂತರ ರೂ ನಷ್ಟ ಉಂಟಾಗಿದೆ. ಸಾಲ ಮಾಡಿ ಬೆಳೆದಿದ್ದ ನೇಂದ್ರ ಬಾಳೆ ಫಸಲು ಕೈಗೆ ಹಣ ಸಿಗುವ ವೇಳೆ ಬಿರುಗಾಳಿಗೆ ಸಿಲುಕಿ ಬದುಕನ್ನೇ ನಾಶ ಮಾಡಿದ್ದು, ಸರಕಾರ ನಷ್ಟಕ್ಕೆ ತಕ್ಕ ಪರಿಹಾರ ನೀಡುವಂತೆ ನೊಂದ ರೈತ ಮಹದೇವ್ ಮನವಿ ಮಾಡಿದ್ದಾರೆ.

ನಗರದಲ್ಲೂ ಭಾರಿ ಮಳೆ
ನಗರ ಸೇರಿದಂತೆ ತಾಲೂಕಿನಾದ್ಯಂತ ಬಿದ್ದ ಬಾರೀ ಬಿರುಗಾಳಿ ಸಹಿತ ಮಳೆ ಸಿಡಿಲು ಬಡಿದು ನಗರದ ಸಾರ್ವಜನಿಕ ಆಸ್ಪತ್ರೆ ಬಳಿ ಹಾಗೂ ಹಾಳಗೆರೆ ಬಳಿ ಸುಟ್ಟುಹೋಗಿದ್ದ ಎರಡು ಟ್ರಾನ್ಸ್ ಫಾರ‍್ಮರ್‌ ಗಳನ್ನು ಚೆಸ್ಕಾಂ ಸಿಬಂದಿಗಳು ಮುಂಜಾನೆಯೇ ದುರಸ್ತಿಗೊಳಿಸಿ ಸಂಪರ್ಕ ಕಲ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next