Advertisement
ನಗರದ ರಂಗನಾಥ ಬಡಾವಣೆಯಲ್ಲಿ ನಂದಿ ಕಂಬಕ್ಕೆ ಸಂಸದ ಪ್ರತಾಪಸಿಂಹ, ಮಾಜಿ ಸಚಿವ ಎಚ್.ವಿಶ್ವನಾಥ್, ಜಿಪಂ ಉಪಾಧ್ಯಕ್ಷೆ ಗೌರಮ್ಮ, ತಾಪಂ ಅಧ್ಯಕ್ಷೆ ಪದ್ಮಮ್ಮ, ಗ್ರಾಮೀಣ ದಸರಾ ಉಪಸಮಿತಿ ಅಧ್ಯಕ್ಷ ರಮೇಶಕುಮಾರ್, ತಹಶೀಲ್ದಾರ್ ಬಸವರಾಜ್, ಇಒ ಗಿರೀಶ್ ಮತ್ತಿತರರು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
Related Articles
Advertisement
ತಾಲೂಕು ಪಂಚಾಯ್ತಿಯ ಉದ್ಯೋಗ ಖಾತರಿ, ಜಲಾಮೃತ ಯೋಜನೆ ಸೇರಿದಂತೆ ಕಾರ್ಯಕ್ರಮಗಳ ಪರಿಚಯ, ನಗರಸಭೆಯ ಸ್ವಚ್ಛತೆ, ಜಲಶಕ್ತಿಯೋಜನೆಯ ಪರಿಕಲ್ಪನೆ, ಸಮಾಜ ಕಲ್ಯಾಣ-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಮಗ್ರ ಮಾಹಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನೆಗಳ ಮಾರ್ಗಸೂಚಿ, ಅದುಲಾಮ್ ಶಾಲಾ ಮಕ್ಕಳ ಕರ್ನಾಟಕ ದರ್ಶನ ಹೀಗೆ ತರೇಹವಾರಿ ಕಾರ್ಯಕ್ರಮಗಳು ಗಮನ ಸೆಳೆದವು.
ಶ್ವೇತ ಕುದುರೆ ಸವಾರಿ: ಪ್ರಥಮ ಬಾರಿಗೆ ಮೆರವಣಿಗೆಯಲ್ಲಿ ಅಲಂಕೃತ ಎರಡು ಬಿಳಿ ಕುದುರೆಗಳು, ಅವುಗಳ ಮೇಲೆ ಸೈನಿಕ ಮತ್ತು ಪೊಲೀಸ್ ವೇಷಧಾರಿ ಮಕ್ಕಳ ಸವಾರಿ ಮೆರವಣಿಗೆಗೆ ಮೆರಗು ನೀಡಿತು.
101 ಕಳಶ ಹೊತ್ತ ಮಹಿಳೆಯರು: ತಾಲೂಕಿನ ವಿವಿಧ ಮಹಿಳಾ ಸಂಘಗಳ 101 ಮಹಿಳೆಯರು ಕಳಶಹೊತ್ತು ಮೆರವಣಿಗೆಯುದ್ದಕ್ಕೂ ಸಾಗಿಬಂದು ಕಳೆಕಟ್ಟಿದರು. ಇನ್ನು ಬೆಳ್ಳಿಯ ಅಲಂಕೃತ ಸಾರೋಟಿನಲ್ಲಿ ಚಾಮುಂಡೇಶ್ವರಿ ದೇವಿ ಸಾಗಿಬಂತು.
ಶ್ವೇತವಸ್ತ್ರದಲ್ಲಿ ಮಿಂಚಿದ ಅಧಿಕಾರಿಗಳು: ತಾಪಂ ಇಒ ಗಿರೀಶ್, ಎಡಿಎ ರಂಗಸ್ವಾಮಿ, ಎಇಇ ರಮೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಶ್ವೇತ ವಸ್ತ್ರಧರಿಸಿ ಮೆರವಣಿಗೆಗೆ ಮೆರಗು ತಂದರು. ಅಲ್ಲದೇ ತಮಟೆ ಸದ್ದಿಗೆ ಸಂಜೀವಿನ ಒಕ್ಕೂಟ, ಸ್ತ್ರೀಶಕ್ತಿ ಸಂಘದ ಮಹಿಳೆಯರು, ಪಿಡಿಒಗಳು ಸೇರಿದಂತೆ ಅಧಿಕಾರಿಗಳು ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿದರು.
ಮೆರವಣಿಗೆಯು ಕಲ್ಕುಣಿಕೆ ವೃತ್ತದ ಮೂಲಕ ಶ್ರೀರಾಮ ವೃತ್ತ, ಹಳೇ ಸೇತುವೆ, ರೋಟರಿ ವೃತ್ತ, ಬಸ್‌ನಿಲ್ದಾಣದ ರಸ್ತೆ, ಕಲ್ಪತರು ವೃತ್ತದ ಮೂಲಕ ಸಾಗಿ ಬಂದು ನಗರಸಭೆ ಮೈದಾನದಲ್ಲಿ ಸಮಾವೇಶಗೊಂಡಿತು.
ಸಂಸದ ಪ್ರತಾಪ್ ಸಿಂಹಗೆ ಪೊಲೀಸ್ ಸರ್ಪಗಾವಲು: ಹುಣಸೂರು ಗ್ರಾಮೀಣ ದಸರಾದಲ್ಲಿ ಸಂಸದರು ಪಾಲ್ಗೊಂಡರೆ ಪ್ರತಿಭಟಿಸುತ್ತೇವೆ ಎಂದು ಪ್ರಗತಿಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದರಿಂದ ಸಂಸದ ಪ್ರತಾಪ ಸಿಂಹ ಅವರನ್ನು ಬಿಜೆಪಿ ಕಾರ್ಯಕರ್ತರು ಪೊಲೀಸ್ ಸರ್ಪಗಾವಲಿನಲ್ಲಿ ಮೆರವಣಿಗೆ ಆರಂಭದ ಸ್ಥಳಕ್ಕೆ ಕರೆತಂದರು.
ಪೊಲೀಸರ ಭದ್ರತೆಯಲ್ಲಿ ರಂಗನಾಥ ಬಡಾವಣೆಯಿಂದ ಹೊರಟ ಗ್ರಾಮೀಣ ದಸರಾ ಮೆರವಣಿಗೆಗೆ ಸಂಸದ ಪ್ರತಾಪಸಿಂಹ ಚಾಲನೆ ನೀಡಿದರು. ಡಿವೈಎಸ್ಪಿ ಸುಂದರರಾಜ್, ವೃತ್ತ ನಿರೀಕ್ಷಕ ಪೂವಯ್ಯ, ಎರಡು ಡಿಎಆರ್, ಒಂದು ಕೆಎಸ್‌ಆರ್‌ಪಿ ತುಕಡಿಗಳು, 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಕಲ್ಕುಣಿಕೆ ಸರ್ಕಲ್‌ವರೆಗೆ ಮೆರವಣಿಗೆಯಲ್ಲಿ ಸಾಗಿಬಂದ ಸಂಸದರು ಅಲ್ಲಿಂದ ಮೈಸೂರು ಕಡೆಗೆ ಪೊಲೀಸ್ ರಕ್ಷಣೆಯಲ್ಲಿ ತೆರಳಿದರು.
94 ಮಂದಿ ಬಂಧನ, ಬಿಡುಗಡೆ: ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟಿಸುತ್ತೇವೆ ಎಂದಿದ್ದ ಸಂಘಟನೆಗಳ ಮುಖಂಡರನ್ನು ಡಿವೈಎಸ್ಪಿ ಸುಂದರರಾಜ್ ಮನವೊಲಿಸಿದ್ದರು. ಆದರೂ ಕಲ್ಕುಣಿಕೆ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಪುುಟ್ಟರಾಜು, ಜಗದೀಶ್ ಸೂರ್ಯ, ರಾಜು, ಗೋವಿಂದರಾಜು, ಸ್ವಾಮಿ ಮತ್ತಿತರರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಪ್ತಿಯಲ್ಲಿದ್ದ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಈ ಎಲ್ಲಾ 24ಮಂದಿಯನ್ನು ಬಂಧಿಸಿ,
ಪೊಲೀಸ್ ಠಾಣೆಗೆ ಕರೆದೊಯ್ದು ಮಧ್ಯಾಹ್ನದ ಬಳಿಕ ಬಿಡುಗಡೆಗೊಳಿಸಿದರು. ಬೆಟ್ಟದಪುರದಿಂದ ಹುಣಸೂರು ಕಡೆಗೆ ಆಗಮಿಸುತ್ತಿದ್ದ 70 ಮಂದಿ ಪ್ರತಿಭಟನಾಕಾರರನ್ನು ಬೆಟ್ಟದಪುರದಲ್ಲೇ ಬಂಧಿಸಿ, ಮಧ್ಯಾಹ್ನ ಬಿಡುಗಡೆಗೊಳಿಸಲಾಯಿತು ಎಂದು ಡಿವೈಎಸ್ಪಿ ಸುಂದರರಾಜ್ ತಿಳಿಸಿದರು.