ಹುಣಸೂರು: ನೀರು ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಹುಣಸೂರು ಗ್ರಾಮಾಂತರ ಪೊಲೀಸರು ಮಾಲು ಸಹಿತ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಸಾಲಿಗ್ರಾಮ ತಾಲೂಕಿನ ಕೆಲ್ಲೂರು ಹೊಸಕೋಟೆ ಗ್ರಾಮದ ವಸಂತ ಹಾಗೂ ಗಿರೀಶ್ ಬಂಧಿತ ಆರೋಪಿಗಳು.
ಘಟನೆ ವಿವರ: ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ ಕಲ್ಲಹಳ್ಳಿ ನಿವಾಸಿ ಜವರಾಯಿಗೌಡ ಅವರ ಮನೆಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಕುಡಿಯಲು ನೀರು ಕೇಳಿದ್ದರಿಂದ ಜವರಾಯಿಗೌಡರ ಪತ್ನಿ ಶಿವಲಿಂಗಮ್ಮ ನೀರು ನೀಡುತ್ತಿದ್ದಂತೆ ಆಕೆಯ ಬಾಯಿ ಮುಚ್ಚಿ ಕೊರಳಿನಲ್ಲಿದ್ದ 40 ಗ್ರಾಂ. ಚಿನ್ನದ ಸರ ಅಪಹರಿಸಿದ್ದರು. ಸರ ಕಿತ್ತು ಹೋಗಿ ಸ್ವಲ್ಪ ಭಾಗ ಶಿವಲಿಂಗಮ್ಮರ ಕೈಯಲ್ಲೇ ಉಳಿದಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಂಧನ: ಡಿವೈಎಸ್ಪಿ ಗೋಪಾಲಕೃಷ್ಣ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಮುನಿಯಪ್ಪ ಮತ್ತು ತಂಡ ಆರೋಪಿಗಳನ್ನು ಪತ್ತೆ ಮಾಡಿ ಚಿನ್ನದ ಸರ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಕಳ್ಳತನ ಮಾಡಿದ್ದ ಸರವನ್ನು ಹುಣಸೂರಿನ ಗಿರವಿ ಅಂಗಡಿಯೊಂದಕ್ಕೆ ತೆರಳಿ ಲಕ್ಷ ರೂ. ನೀಡುವಂತೆ ತಿಳಿಸಿದ್ದರಾದರೂ ಅಂಗಡಿ ಮಾಲಿಕ 40 ಸಾವಿರ ಕೊಟ್ಟು ಕಳುಹಿಸಿದ್ದ, ಮತ್ತೆ ಬಾಕಿ ಹಣ ಕೇಳಲು ಬಂದ ವೇಳೆ ಮಾಹಿತಿ ಮೇರೆಗೆ ಚಿನ್ನದ ಸರವನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ರಾಮು, ಎಎಸ್‌ಐ ಆಂಥೋಣಿ ಕ್ರೂಸ್, ಸೈಯದ್ ಹಿದಾಯತ್, ಇಬ್ರಾನ್ ಷರೀಫ್ ಇದ್ದರು.