ಹುಣಸೂರು: ತಾಲೂಕಿನ ವಡ್ಡಂಬಾಳು ಗ್ರಾಮದಲ್ಲಿ ಹುಲಿಯೊಂದು ಜು.13ರ ಶನಿವಾರ ಮುಂಜಾನೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.
ಗ್ರಾಮದ ರೈತ ಚಂದ್ರರಾವ್ ಅವರ ಜೋಳದ ಜಮೀನಿನಲ್ಲಿ ಬೆಳಿಗ್ಗೆ 7ರ ವೇಳೆ ಕಾಣಿಸಿಕೊಂಡ ಹುಲಿ ನಂತರ ಅಶ್ವಥ್‌ರ ಬಾಳೆ ತೋಟದ ಕಡೆ ಹೋಗಿದ್ದು, ತೋಟದಿಂದ ಹೊರಗೆ ಹೋಗಿದೆಯೋ ಅಥವಾ ತೋಟದಲ್ಲೇ ಇದೆಯೋ ಎಂಬುದು ತಿಳಿದಿಲ್ಲ.
ಹುಲಿಯನ್ನು ಪ್ರತ್ಯಕ್ಷವಾಗಿ ಕಂಡ ವಡ್ಡಂಬಾಳಿನ ನಾಗೇಶ್, ಚಂದ್ರಕಾಂತ್, ಮಂಜಯ್ಯ ತಿಳಿಸಿದ್ದಾರೆ.
ಈ ಭಾಗದಲ್ಲಿ ಹಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿತ್ತು. ಆದರೆ ಇದೀಗ ಹುಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಇದೇ ರೀತಿ ಪಕ್ಕದ ಅಣ್ಣೆಗೆರೆಯಲ್ಲಿ 3 ತಿಂಗಳ ಹಿಂದೆ ಹುಲಿಯೊಂದು ರಸ್ತೆ ದಾಟಿರುವುದನ್ನು ಅರಣ್ಯಾಧಿಕಾರಿಗಳು ಧೃಡಪಡಿಸಿ, ರಾತ್ರಿ ವೇಳೆ ಒಂಟಿಯಾಗಿ ತಿರುಗಾಡದಂತೆ ಎಚ್ಚರಿಸಿದ್ದರು. ನಂತರ ಕಣ್ತಪ್ಪಿಸಿ ತಿರುಗಾಡುತ್ತಿತ್ತು. ಇದೀಗ ವಡ್ಡಂಬಾಳಿನಲ್ಲಿ ಕಾಣಿಸಿರುವುದು ಆತಂಕ ಉಂಟು ಮಾಡಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಹೆಜ್ಜೆ ಪರಿಶೀಲನೆ ನಡೆಸಿದ್ದಾರೆ.
ಕಳೆದ ಒಂದು ವರ್ಷದಿಂದೀಚೆಗೆ ಕಾಮಗೌಡನಹಳ್ಳಿ, ಹನಗೋಡು, ಶೆಟ್ಟಹಳ್ಳಿ, ಅಬ್ಬೂರು, ಶಿಂಡೇನಹಳ್ಳಿ, ಕಚುವಿನಹಳ್ಳಿ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಳ್ಳುತ್ತಲೇ ಇದೆ.
ಗ್ರಾಮಸ್ಥರ ಮನವಿ ಮೇರೆಗೆ ಕೂಂಬಿಂಗ್ ನಡೆಸಲಾಗಿದ್ದು, ಹುಲಿ ಪತ್ತೆಯಾಗಿಲ್ಲ. ಗ್ರಾಮಸ್ಥರು ಹುಲಿ ಎನ್ನುತ್ತಿದ್ದಾರೆ. ಹೀಗಾಗಿ ಭಾನುವಾರ ಬೋನ್ ಇರಿಸಲಾಗುವುದೆಂದು ಆರ್.ಎಫ್.ಓ.ನಂದಕುಮಾರ್ ತಿಳಿಸಿದ್ದಾರೆ.