Advertisement

ಹುಣಸೂರು: ಗೊಮ್ಮಟಗಿರಿಯಲ್ಲಿ 73 ನೇ ವರ್ಷದ ಮಸ್ತಕಾಭಿಷೇಕದ ವೈಭವ

07:32 PM Nov 27, 2022 | Team Udayavani |

ಹುಣಸೂರು : ಜೈನರ ಆರಾಧ್ಯ ದೈವ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಗೊಮ್ಮಟಗಿರಿಯಲ್ಲಿ ವಿರಾಜಮಾನವಾಗಿ ನಿಂತಿರುವ ಬಾಹುಬಲಿಗೆ ನ.27 ರ ಭಾನುವಾರದಂದು ನಡೆದ 73 ನೇ ವರ್ಷದ ಮಸ್ತಕಾಭಿಷೇಕದಲ್ಲಿ ಗೊಮ್ಮಟ ಭಕ್ತರ ಜಯಉದ್ಘೋಷಗಳ ನಡುವೆ ಬಣ್ಣಬಣ್ಣದ ಅಭಿಷೇಕದಲ್ಲಿ ಕಂಗೊಳಿಸಿತು.

Advertisement

ಕೋವಿಡ್ ನಂತರದ ನಡೆಯುತ್ತಿರುವ ಮಸ್ತಕಾಭಿಷೇಕವು ಶಿವಮೊಗ್ಗಜಿಲ್ಲೆಯ ಹೊಂಬುಜ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮಿಜಿಯವರ ಸಾನಿಧ್ಯದಲ್ಲಿ ಮಹಾ ಮಸ್ತಕಾಭಿಷೇಕವು ಜರುಗಿತು.

ಧಾರ್ಮಿಕ ವಿಧಿ ವಿಧಾನಗಳ ನಂತರ ಬೆಟ್ಟದ ಮೇಲಿನ 18 ಅಡಿ ಎತ್ತರದ ನಗುಮೊಗದ ಬಾಹುಬಲಿ ಮೂರ್ತಿಗೆ ಹರಾಜಿನಲ್ಲಿ ತಮ್ಮದಾಗಿಸಿ ಕೊಂಡ ಭಕ್ತರು ಕಳಸಗಳನ್ನು ತಲೆಯ ಮೇಲೆ ಹೊತ್ತುತಂದು ಅಭಿಷೇಕ ನೆರವೇರಿಸಿದರು.

ಗೊಮ್ಮಟನಿಗೆ ಮೊದಲಿಗೆ ಜಲಾಭಿಷೇಕ, ಎಳನೀರು, ಕಬ್ಬಿನ ಹಾಲು, ಅರಿಶಿನ, ಚಂದನ, ಕ್ಷೀರ, ಕಂಕಚೂರ್ಣ, ಅರಳು, ಸಕ್ಕರೆಪುಡಿ, ಅಕ್ಕಿ ಹಿಟ್ಟು, ಜೇನುತುಪ್ಪ, ಶ್ರೀಗಂಧ, ವಿವಿಧ ಕಷಾಯಾಭಿಷೇಕ ಸೇರಿದಂತೆ ಒಟ್ಟು ೧೮ ಬಗೆಯ ಅಭಿಷೇಕದ ವೇಳೆ ವಿರಾಗಿ ಬಣ್ಣಬಣ್ಣಗಳಿಂದ ಕಂಗೊಳಿಸಿದ, ಪ್ರತಿ ಅಭಿಷೇಕದಲ್ಲೂ ಗೊಮ್ಮಟನನ್ನು ಕಣ್ತುಂಬಿಕೊAಡ ಭಕ್ತರು ವಿರಾಟ್ ಯೋಗಿ ಬಾಹುಬಲಿ ಮಹಾರಾಜ್ ಕೀ ಜೈ ಎನ್ನುತ್ತಾ ಜಯಘೋಷ ಮೊಳಗಿಸಿದರು.

ರಾಜ್ಯದ ವಿವಿಧೆಡೆಗಳಿಂದ ಜೈನ ಭಕ್ತರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಮಂದಿ ಗ್ರಾಮಸ್ಥರು ಮಸ್ತಕಾಭಿಷೇಕವನ್ನು ಕಣ್ತುಂಬಿಕೊಂಡರು. ಮಹಿಳೆಯರು, ಮಕ್ಕಳೆನ್ನದೆ ಬೆಟ್ಟ ಹತ್ತಿ ಪೂಜೆ ಸಲ್ಲಿಸಿ ಬಾಹು ಬಲಿ ದರ್ಶನ ಪಡೆದರು.

Advertisement

ಈ ಬಾರಿ ಗೊಮ್ಮಟಗಿರಿ ಕ್ಷೇತ್ರದ ಸೇವಾಸಮಿತಿಯ ಅಧ್ಯಕ್ಷ ಡಾ.ಎಂ.ವಿ.ಶಾಂತಕುಮಾರ್, ಕಾರ್ಯದರ್ಶಿ ಪದ್ಮರಾಜಯ್ಯ, ಖಜಾಂಚಿ ರಾಜೇಶ್, ಪೂಜಾ ಸಮಿತಿ ಅಧ್ಯಕ್ಷ ಸಂತೋಷ್ ಮತ್ತಿತರ ಮುಖಂಡರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ಹಾಗೂ ಮಸ್ತಕಾಭಿಷೇಕ ಜರುಗಿತು. ಅಭಿಷೇಕಕ್ಕೂ ಮೊದಲಿಗೆ ಸ್ವಾಮಿಜಿ ಹಾಗೂ ಕ್ಷಲಿಕಾ ಶ್ರೀ ವಿನಯ ಶ್ರೀ ಮಾತಾಜಿ ಆಶೀರ್ವಚನ ನೀಡಿದರು.

ಪ್ರಸಾದ ವಿತರಣೆ
ಮಸ್ತಕಾಭಿಷೇಕಕ್ಕೆ ಬಂದಿದ್ದ ಭಕ್ತಾಗಳಿಗೆ ಅನೇಕ ದಾನಿಗಳು ಅನ್ನಸಂತರ್ಪಣೆ ನಡೆಸಿಕೊಟ್ಟರು, ಬಿಳಿಕೆರೆ ಠಾಣಾ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು, ಚುನಾವಣಾ ವರ್ಷವಾದರೂ ಸಹ ಈ ಬಾರಿ ಯಾವುದೇ ರಾಜಕೀಯ ಮುಖಂಡರು ಭಾಗವಹಿಸಿರಲಿಲ್ಲ.

ಮಸಾಲೆ ಪುರಿಯ ವೈಶಿಷ್ಟ್ಯ
ಎಲ್ಲೇ ಮಸ್ತಕಾಭಿಷೇಕ ನಡೆದರೂ ಅಲ್ಲಿ ಮಸಾಲೆ ಪುರಿಯ ಮಾರಾಟ ಭರ್ಜರಿಯಾಗಿರುತ್ತದೆ, ಇಲ್ಲಿಯೂ ಬಗೆಬಗೆಯ ಮಸಾಲೆಪುರಿ ಘಮಘಮಿಸುತ್ತಿತ್ತು, ಭಕ್ತರು ಮುಗಿ ಬಿದ್ದು ಖರೀದಿಸಿದರು, ಸಿಹಿತಿಂಡಿ ಅಂಗಡಿ, ಮಕ್ಕಳ ಆಟಿಕೆ ಸಾಮಾನುಗಳ ಅಂಗಡಿಗಳು ಗಮನ ಸೆಳೆಯಿತು.
ಗೊಮ್ಮಟನ ಅಭಿಷೇಕದಿಂದ ಸುಖ ಶಾಂತಿ, ದಾನದಿಂದ ನೆಮ್ಮದಿ ಸಿಗಲಿದೆ.

ಶಿವಮೊಗ್ಗಜಿಲ್ಲೆಯ ಹೊಂಬುಜ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮಿಜಿ ಆಶೀರ್ವಚನ ನೀಡಿ, ಶ್ರವಣ ಬೆಳಗೊಳದಲ್ಲಿ 12 ವರ್ಷಗಳಿಗೊಮ್ಮೆ ಮಸ್ತಕಾಭಿಷೇಕ ನಡೆಯುತ್ತದೆ. ಆದರೆ ಗೊಮ್ಮಟಗಿರಿಯಲ್ಲಿ ಭಕ್ತರ ನೆರವಿನೊಂದಿಗೆ ಪ್ರತಿವರ್ಷವೂ ಅಭಿಷೇಕ ನಡೆದುಕೊಂಡು ಬರುತ್ತಿರುವುದು ಈ ಭಾಗದ ಜನರ ಆರಾಧ್ಯ ದೈವವೆಂಬುದನ್ನು ಸಾಕ್ಷೀಕರಿಸಿದೆ. ಇನ್ನು ಬಾಹುಬಲಿಗೆ ಅಭಿಷೇಕ ನಡೆಸುವುದು ಮತ್ತು ದಾನ ಮಾಡುವುದು ಒಂದೆ ಎನ್ನುತ್ತಾರೆ, ಆದರೆ ಅಭಿಷೇಕ ನಮ್ಮ ಒಳಿತಿಗಾಗಿ, ದಾನ ಮಾಡುವುದು ಮತ್ತೊಬ್ಬರ ಶ್ರೇಯಸ್ಸಿಗಾಗಿ ಎನ್ನುವುದನ್ನು ಎಲ್ಲರೂ ಅರಿಯಬೇಕೆಂದರು.

ಜೈನ ಬಿಕ್ಕು ಕ್ಷಲಿಕಾ ಶ್ರೀ ವಿನಯ ಶ್ರೀ ಮಾತಾಜಿ ಆಶೀರ್ವಚನ ನೀಡಿ ಮಾತನಾಡಿ, ಉಳ್ಳವರು ಅದ್ದೂರಿ ಮದುವೆ ಮತ್ತಿತರ ಸಮಾರಂಭ ನಡೆಸುವ ಬದಲಿಗೆ ಇಷ್ಟ ದೇವರಿಗೆ ಅಭಿಷೇಕ ನಡೆಸುವುದು ಮತ್ತು ದಾನ ಮಾಡಿದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಲಿದೆ. ಅಭಿಷೇಕದಿಂದ ಮನಸ್ಸಿಗೆ ನಿಮ್ಮದಿ ಸಿಗಲಿದೆ ಆದೇರೀತಿ ದಾನದಿಂದ ಸಂತೃಪ್ತಿ ಸಿಗಲಿದೆ ಜೈನ ಸಮುದಾಯದ ಎಲ್ಲರೂ ಅಳವಡಿಸಿಕೊಂಡಲ್ಲಿ ನಮ್ಮ ಸುತ್ತಮುತ್ತಲಿನಲ್ಲಿ ಸುಭಿಕ್ಷೆಯಾಗಿರಲಿದೆ ಎಂದರು.

ವೈರಾಗ್ಯಮೂರ್ತಿಯ, ಶಾಂತಸ್ವರೂಪವದನದ ಬಾಹುಬಲಿಯ ಅವರ್ಣನೀಯ ಸೌಂದರ್ಯವನ್ನು ಬೆಟ್ಟದ ತಪ್ಪಲಿನಲ್ಲಿ ವೀಕ್ಷಿಸುತ್ತಿದ್ದ ಭಕ್ತಗಣ ಜೈ ಬಾಹುಬಲಿ, ಜೈ ಶಾಂತಿದೂತ ಮುಂತಾದ ಘೋಷಣೆಗಳನ್ನು ಮೊಳಗಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ನೆರೆದ ಭಕ್ತಗಣ ಭಾವವೇಶದಲ್ಲಿ ಹೋ ಎಂದು ಕೂಗಿ ತಮ್ಮ ಭಕ್ತಿಯನ್ನು ಪ್ರದರ್ಶಿಸುತ್ತಿದ್ದರು. ಅಂತಿಮವಾಗಿ ಪುಷ್ಪಾರ್ಚನೆ, ಪೂರ್ಣಕುಂಬ ಜಲಾಭಿಷೇಕ ನೆರವೇರಿಸಿದ ನಂತರ ದೃಷ್ಟಿ ತೆಗೆದು ಮಹಾಮಂಗಳಾರತಿ ಬೆಳಗಿಸಲಾಯಿತು. ಮಸ್ತಕಾಭಿಷೇಕದ ನಂತರ ಭಕ್ತರು ಬೆಟ್ಟದ ತಪ್ಪಲಿನ 24 ತೀರ್ಥಂಕರರ ಪಾದುಕೆಗಳ ಸ್ಥಳಕ್ಕೆ ಭೇಟಿ ನೀಡಿ ಪೂಜಾ ಕಾರ್ಯಗಳನ್ನು ಸಲ್ಲಿಸಿದರು.

*ಸಂಪತ್ ಕುಮಾರ್ ಹುಣಸೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next