ಹುಣಸೂರು; ನಗರದಲ್ಲಿ ಸಂಚರಿಸುವ ಆಟೋ ಚಾಲಕರು ಕಡ್ಡಾಯವಾಗಿ ಆಟೋಗಳಿಗೆ ಎಫ್.ಸಿ ಹಾಗೂ ವಿಮೆ ಮಾಡಿಸಬೇಕು. ಸಿಕ್ಕಿ ಬಿದ್ದಲ್ಲಿ ದಂಡ ಜೊತೆಗೆ ಪ್ರಕರಣ ದಾಖಲಿಸಲಾಗುವುದೆಂದು ನಗರ ಠಾಣೆ ಇನ್ಸ್ಪೆಕ್ಟರ್ ಆರ್. ಸಂತೋಷ್ ಕಶ್ಯಪ್ ಎಚ್ಚರಿಸಿದರು.
ನಗರ ಠಾಣೆ ಸಭಾಂಗಣದಲ್ಲಿ ಆಟೋಚಾಲಕರು ಹಾಗೂ ಮಾಲಿಕರ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೆ ಹಲವಾರು ಆಟೋಗಳ ದಾಖಲಾತಿ ಪರಿಶೀಲನೆ ವೇಳೆ ದಾಖಲಾತಿಯೇ ಇಟ್ಟುಕೊಳ್ಳದಿರುವುದು, ವಿಮೆ ಮಾಡಿಸದಿರುವುದು ಕಂಡು ಬಂದಿದೆ. ಮುಂದೆ ಎಲ್ಲಾ ಆಟೋಗಳನ್ನು ಠಾಣೆಯಲ್ಲಿ ಕಡ್ಡಾಯವಾಗಿ ನೊಂದಾಯಿಸಬೇಕು. ರಾತ್ರಿವೇಳೆ ಅನುಮತಿ ಇಲ್ಲದೆ ಆಟೋ ಓಡಿಸುವಂತಿಲ್ಲ. ಬೇಕಾಬಿಟ್ಟಿಯಾಗಿ ನಿಲ್ಲಿಸದೆ ನಿಗದಿಪಡಿಸಿರುವ ನಿಲ್ದಾಣಗಳಲ್ಲೇ ನಿಲ್ಲಿಸಬೇಕು. ಕಾಲಮಿತಿಯೊಳಗೆ ಎಲ್ಲಾ ಆಟೋಗಳಿಗೆ ವಿಮೆ ಹಾಗೂ ಎಫ್.ಸಿ.ಮಾಡಿಸದ ವಾಹನಗಳು ರಸ್ತೆಗಿಳಿಯುವಂತಿಲ್ಲ. ಚಾಲಕರು ಡ್ರೈವಿಂಗ್ ಲೈಸನ್ಸ್ ಇಲ್ಲದೆ ಓಡಿಸುವಂತಿಲ್ಲ. ಆಟೋ ಚಾಲಕರು ಹಾಗೂ ಮಾಲಿಕರು ಆಟೋಗಳ ದಾಖಲಾತಿಗಳನ್ನು ಅಪ್ ಡೇಟ್ ಮಾಡಿಕೊಂಡು, 15ನೇ ತಾರೀಕಿನೊಳಗೆ ಠಾಣೆಗೆ ನೀಡಬೇಕು. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮವಾಗಲಿದೆ ಎಂದು ಎಚ್ಚರಿಸಿದರು.
ಎಸ್.ಐ.ತಾಜುದ್ದೀನ್ ಮಾತನಾಡಿ ಆಟೋಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ರಾತ್ರಿವೇಳೆ ಸಂಚರಿಸುವ ಆಟೋಗಳವರು ಠಾಣೆಯಲ್ಲಿ ಅನುಮತಿ ಪಡೆಯುವುದು ಕಡ್ಡಾಯ. ಹೊರ ಊರುಗಳಿಂದ ಬರುವ ಪ್ರಯಾಣಿಕರ ಬಳಿ ಹೆಚ್ಚಿನ ಹಣ ಕೇಳುವುದು ತರವಲ್ಲ. ಅಪರಿಚತರು ದೂರದ ಊರುಗಳಿಗೆ ಹೋಗಲು ಹೇಳಿದರೆ ಎಚ್ಚರವಹಿಸಬೇಕು.
ಈ ವೇಳೆ ಮಾತನಾಡಿದ ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗಣ್ಣ, ಹಾಗೂ ಶ್ರೀನಿವಾಸ್, ವಿವಿಧ ಆಟೋ ನಿಲ್ದಾಣಗಳ ಪದಾಧಿಕಾರಿಗಳಾದ ಮಂಜುನಾಥ್, ಮಂಜು, ಸನಾವುಲ್ಲಾ, ಜಗದೀಶ್, ಮಂಜು, ರಂಗಸ್ವಾಮಿ, ರಘು ಮತ್ತಿತರರು ಆಟೋ ವೃತ್ತಿಯಿಂದಲೇ ಜೀವನ ನಡೆಸುತ್ತಿದ್ದೇವೆ, ನಗರ ಸೇರಿದಂತೆ ತಾಲೂಕಿನಲ್ಲಿ ೭೦೦ಕ್ಕೂ ಹೆಚ್ಚು ಆಟೋಗಳಿದ್ದು, ಆಟೋಗಳ ಮೇಲೆ ಪಡೆದಿರುವ ಸಾಲ ಕಟ್ಟುವುದು, ಮಕ್ಕಳ ವಿದ್ಯಾಬ್ಯಾಸ, ಕುಟುಂಬ ನಿರ್ವಹಣೆ ಸಹ ವೃತ್ತಿಯಿಂದಲೇ ನಡೆಯಬೇಕಿದೆ. ಒಮ್ಮೆಲೆ ದಾಖಲಾತಿ ಸರಿಪಡಿಸಿಕೊಳ್ಳಲು ಕಷ್ಟವಾಗಲಿದ್ದು, ಒಂದು ತಿಂಗಳ ಕಾಲಾವಕಾಶ ನೀಡುವಂತೆ ಮಾಡಿದ ಮನವಿಗೆ ಏ.೧ರೊಳಗಾಗಿ ದಾಖಲಾತಿಗಳನ್ನು ಅಪ್‌ಡೇಟ್ ಮಾಡಿಕೊಂಡು ನಗರ ಠಾಣೆಯಲ್ಲಿ ನೊಂದಾಯಿಸಿಕೊಂಡು ನಂಬರ್ ಪಡೆದುಕೊಳ್ಳಬೇಕು. ನಂತರದಲ್ಲಿ ಪರಿಶೀಲನೆ ವೇಳೆ ಸಿಕ್ಕಿ ಬಿದ್ದಲ್ಲಿ ಕೇಸ್ ಹಾಕಲಾಗುವುದೆಂದು ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಎಚ್ಚರಿಸಿದರು. ಎಲ್ಲರೂ ಒಪ್ಪಿದರು.
ಸಭೆಯಲ್ಲಿ ೩೦೦ಕ್ಕೂ ಹೆಚ್ಚು ಆಟೋ ಚಾಲಕರು ಹಾಗೂ ಮಾಲಿಕರು ಹಾಜರಿದ್ದರು.
ಇದನ್ನೂ ಓದಿ: Namaz On Road: ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದವರನ್ನು ಒದ್ದು ಎಬ್ಬಿಸಿದ ಪೊಲೀಸ್ ಅಧಿಕಾರಿ