Advertisement

Hunsgi ; ಕಲುಷಿತ ನೀರು ಸೇವನೆಗೆ ವಾಂತಿ ಭೇದಿ ಉಲ್ಬಣ: ಮಹಿಳೆ ಮೃತ್ಯು

04:00 PM Aug 30, 2023 | Team Udayavani |

ಹುಣಸಗಿ: ತಾಲೂಕಿನ ಮಾರಲಭಾವಿ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರಿನಿಂದಾಗಿ ವಾಂತಿಭೇದಿ ಉಲ್ಬಣಗೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ. ಮೂರು ದಿನಗಳಿಂದಲೇ ಇಲ್ಲಿನ ಜನರಿಗೆ ವಾಂತಿಭೇದಿ ಸಾಧಾರಣ ಕಂಡುಬಂದಿದೆ. ಎರಡು ದಿನಗಳಲ್ಲಿಯೇ ವಾಂತಿಭೇದಿ ತೀವ್ರಗೊಂಡು ಹಲವು ಜನರನ್ನು ಅಸ್ವಸ್ಥರನ್ನಾಗಿಸಿದೆ.

Advertisement

ಸಚ್ಚಿನ್ ಬಾಕ್ಲಿ(14), ಮಂದಮ್ಮ ಬಾಕ್ಲಿ(28),ನಂದಿನಿ ನಿಂಗಪ್ಪ (16), ಭಾಗ್ಯಶ್ರೀ ಮೇಟಿ(28), ಪ್ರಮೋದ ಗೌಡ(8), ಪ್ರಥಮ ಕರಿಗೌಡ(5),ಅನಿರುತ್ ಅಡಗಲ್(9 ತಿಂಗಳ ಮಗು), ಪ್ರತಿಭಾ ಮೇಟಿ(3), ವಿಠೋಭಾ ಸುಭೇದಾರ(70), ಹುಲಗಪ್ಪ ಹನುಮಂತಪ್ಪ ಸೇರಿ ನಾಲ್ವರು ಮಕ್ಕಳು ಹಾಗೂ 6 ಮಂದಿ ಮಧ್ಯಮ ವಯಸ್ಸಿನವರು ವಾಂತಿಭೇದಿಗೆ ಒಳಗಾಗಿದ್ದು, ನಾಲ್ಕು ಜನರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಗುರುವಾರ ರಾತ್ರಿಯಿಂದಲೇ ವೈದ್ಯಕೀಯ ತಂಡದೊಂದಿಗೆ ಜನರ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ಡಾ:ಮಲ್ಲಿಕಾರ್ಜುನ ಕೋರಿ ತಿಳಿಸಿದ್ದಾರೆ.

ವಾಂತಿಭೇದಿಗೆ ಗ್ರಾಮದ ತಿಪ್ಪವ್ವ ಮಲ್ಲಣ್ಣ ಕೂಚಬಾಳ(50) ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪವೂ ಕೇಳಿಬರುತ್ತಿದೆ. ಎರಡು ದಿನದಿಂದೇ ಬುಧವಾರ ವಾಂತಿಭೇದಿ ಕಂಡುಬಂದಿದ್ದು, ಹುಣಸಗಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೆ, ಹೆಚ್ಚಿನ ಚಿಕಿತ್ಸೆಗಾಗಿ ತಾಳಿಕೋಟಿ ಖಾಸಗಿ ಆಸ್ಪತ್ರೆಗೆ ಹೋಗುವಾಗ ಮಾರ್ಗ ಮಧ್ಯ ಸಾವನ್ನಪ್ಪಿದ್ದಾಳೆ ಎಂದು ಮೃತಳ ಕುಟುಂಬಸ್ಥರು ದು:ಖಿತರಾಗಿ ತಿಳಿಸಿದರು.

ಗುರುವಾರ ರಾತ್ರಿ ಹಾಗೂ ಶುಕ್ರವಾರ ಕ್ಯಾಂಪ್ ಹಾಕಿಕೊಂಡು 100 ಜನರಿಗೆ ತಪಾಸಣೆ ಮಾಡಲಾಗಿದೆ. ಪರಿಸ್ಥಿತಿ ತಿಳಿಯಾಗಿದೆ. ಯಾವುದೇ ಗಾಬರಿ ಪಡಬೇಕಿಲ್ಲ. ಈಗಾಗಲೇ ಔಷಧಿ ನೀಡಿ ಉಪಚರಿಸಲಾಗಿದೆ ಎಂದು ಸುರಪುರ ತಾಲೂಕು ವೈದ್ಯಾಧಿಕಾರಿ ಡಾ.ರಾಜಾ ವೆಂಕಪ್ಪನಾಯಕ ತಿಳಿಸಿದ್ದಾರೆ.

ಕುಡಿವ ನೀರಿನ ಬಾವಿ ಸ್ವಚ್ಛತೆಗೆ ಅನೇಕ ಬಾರಿ ಸೂಚಿಸಿದರೂ ಅಧಿಕಾರಿಗಳು ಮುಂಜಾಗ್ರತೆಯಿಂದ ಬಾವಿ ಸ್ವಚ್ಛತೆ ಕೈಗೊಂಡಿಲ್ಲ. ಇದರಿಂದಾಗಿ ವಾಂತಿಭೇದಿ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳು ನಿಷ್ಕಾಳಜಿ ವಹಿಸಿದೆ. ಶುದ್ಧ ಕುಡಿಯುವ ನೀರು ಒದಗಿಸಬೇಕು. ಅಧಿಕಾರಿಗಳ ಬೇಜವಾಬ್ದಾರಿಯೇ ಸಮಸ್ಯೆಗೆ ಕಾರಣ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಸಿಇಒ ಭೇಟಿ
ವಾಂತಿಭೇದಿ ಉಲ್ಬಣಗೊಂಡ ಮಾರಲಭಾವಿ ಗ್ರಾಮಕ್ಕೆ ಜಿಲ್ಲಾ ಪಂಚಾಯಿತ್ ಸಿಇಒ ಗರಿಮಾ ಪನ್ವಾರ ಶುಕ್ರವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮದಲ್ಲಿ ಹಳೆಯ ಬಾವಿ ಇದೆ. ಅದ್ದರಿಂದ ಸಮಸ್ಯೆಯಾಗಿದೆ. ಈಗಾಗಲೇ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸೂಚಿಸಲಾಗಿದೆ. ಕ್ಯಾಂಪ್ ಹಾಕಿ ಚಿಕಿತ್ಸೆ ನೀಡುವ ಕೆಲಸ ವೈದ್ಯರು ಮಾಡುತ್ತಿದ್ದಾರೆ. 100ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಕೈಗೊಂಡಿದ್ದಾಗಿದೆ. ಅಂತಹ ಸಮಸ್ಯೆ ಏನೂ ಇಲ್ಲ. ಕುಡಿಯುವ ನೀರಿನಲ್ಲಿ ಹಲೋಜಿನ್ ಮಾತ್ರೆ ಹಾಕಿಕೊಂಡು ಕುಡಿಯಲು ಮಾತ್ರೆಗಳು ವಿತರಿಸಲಾಗಿದೆ ಎಂದರು.

ಶಾಶ್ವತ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಗ್ರಾಮವನ್ನು ಜಲಧಾರೆ ಯೋಜನೆ ಹಾಗೂ ಜೆಜೆಎಂ ಯೋಜನೆಯೂ ಒಳಪಟ್ಟಿದೆ. ಜಲಧಾರೆ ಯೋಜನೆಯು ಯಾದಗಿರಿ ಜಿಲ್ಲೆಯಾದ್ಯಂತ ಅನ್ವಯವಾಗುತ್ತಿದೆ. ಸದ್ಯ ಕಾಮಗಾರಿಯೂ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಶುದ್ಧ ಕುಡಿಯುವ ನೀರಿನ ಸೌಕರ್ಯ ಒದಗಲಿದೆ. ಇಂತಹ ಘಟನೆ ನಿಯಂತ್ರಿಸಲು ಕುಡಿಯುವ ನೀರಿನ ಬಗ್ಗೆ ಜನರಲ್ಲಿ ಜಾಗೃತಿಯೂ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ತಹಶೀಲ್ದಾರ್ ಬಸವಲಿಂಗಪ್ಪ ನಾಯ್ಕೋಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ:ಸಾಜೀದ್, ಸುರಪುರ ತಾಲೂಕು ವೈದ್ಯಾಧಿಕಾರಿ ಡಾ.ರಾಜಾ ವೆಂಕಪ್ಪನಾಯಕ, ಹುಣಸಗಿ ತಾಲೂಕು ವೈದ್ಯಾಧಿಕಾರಿ ಎಸ್.ಬಿ.ಪಾಟೀಲ, ತಾ.ಪಂ.ಇಒ ಬಸವರಾಜಯ್ಯ ಹಿರೇಮಠ, ಡಾ:ಮಲ್ಲಿಕಾರ್ಜುನ ಕೋರಿ, ಡಾ:ಧರ್ಮರಾಜ ಹೊಸಮನಿ, ಗ್ರಾಮಾಭಿವೃದ್ಧಿ ಅಧಿಕಾರಿ ಭಾಗಣ್ಣ ಬಿಳೇಬಾವಿ, ಪಿಡಿಒ ಬಸವಣ್ಣಯ್ಯ ಉಮಚಿಮಠ, ಪಿಎಸ್‌ಐ ಚಂದ್ರಶೇಖರ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next