Advertisement
ಆಟವಾಡುತ್ತಾ ಕಳೆಯಬೇಕಾದ ಬಾಲ್ಯದ ಏಳನೇ ವಯಸ್ಸಿನಲ್ಲಿಯೇ ಬೆಂಕಿಯ ಅವಘಡಕ್ಕೆ ಸಿಲುಕಿದ್ದು ಲೇಖಕಿಯ ಜೀವನಕ್ಕೆ ಪ್ರಮುಖ ತಿರುವಾಯ್ತು. ಆ ಅವಘಡಕ್ಕೆ ಸಿಲುಕಿ ಮುಖ, ಮೈ ಕಲೆಯಾದ ಮೇಲೆ ಜನರು ಒಂದಿಷ್ಟು ಅನುಕಂಪ ತೋರಿಸುವುದರ ಜೊತೆಗೆ ಮುಖ ಮುಚ್ಚಿಕೊಂಡು ಓಡಾಡು ಎಂಬ ಬುದ್ಧಿಮಾತು ಹೇಳಿದ್ದು, ಆಗ ಇವರ ಮನಸ್ಥಿತಿ ಹೇಗಿರಬೇಡ? ಇವರಿಗೋ ಕಲೆ ದೇಹದ ಹೊರಗಡೆಯಿದ್ದರೆ ಈ ಮನುಷ್ಯರಿಗೆ ಮನಸ್ಸೆಲ್ಲಾ ಕಲೆ ಎನ್ನಲು ವಿಷಾದವಾಗುತ್ತದೆ.
Related Articles
Advertisement
ಪಿಯುಸಿಯಲ್ಲಿ ಫೇಲ್ ಆದರೂ ಛಲ ಬಿಡದೆ ಡಿಪ್ಲೊಮಾ ಪದವಿ ಮುಗಿಸಿದ ಕುರಿತು ಓದುವಾಗ ಲೇಖಕಿ ಎಂತಹ ಛಲಗಾತಿಯೆಂಬುದನ್ನು ಅರಿಯಬಹುದು. ಅವರಿಗಾದ ಮೊದಲ ಪ್ರೀತಿ ಆ ವಯಸ್ಸಿಗದು ಸಹಜವೇ ಅನ್ನಿಸುತ್ತದೆ. ಆ ಹುಡುಗ ನಂತರ ಕಾರಣವೇ ತಿಳಿಸದೆ ಬಿಟ್ಟು ಹೋದಾಗ ಲೇಖಕಿ ಆತನನ್ನು ಸಂಪರ್ಕಿಸಲು ಪಡುವ ಕಷ್ಷ, ಅದಕ್ಕಾಗಿ ಮಾಟ-ಮಂತ್ರದ ಮೊರೆ ಹೋದ ಕುರಿತು ಓದುವಾಗ ನಿಜ ಪ್ರೀತಿ ಮಾಡಿದವರಿಗೇ ಎಷ್ಟೊಂದು ನೋವು ಎನ್ನಿಸದೆ ಇರುವುದಿಲ್ಲ. ಇನ್ನು, ಲೇಖಕಿ ಉಳಿದುಕೊಂಡ ಪಿ.ಜಿ. ಯವರ ಕೆಟ್ಟ ಗುಣ, ಬೇಕಂತಲೇ ಹಳಸಿದ ಊಟ ಕೊಡುತ್ತಿದ್ದುದರ ಕುರಿತೂ ಬರೆದಿದ್ದಾರೆ. ಕೇವಲ ಹಣಕ್ಕಾಗಿ ಹಪ-ಹಪಿಸುವ ಕೆಲವು ಪಿ.ಜಿ. ಮಾಲಕರೂ ಇರುತ್ತಾರೆ ಎಂಬುದು ಸತ್ಯ.
ಮೊದಲ ಪ್ರೀತಿ ಕಳೆದುಹೋದ ನೋವಿನಲ್ಲೇ ಮುಳುಗಿರುವಾಗ ಕಂಪೆನಿಯವರೂ ನಾಲ್ಕು ತಿಂಗಳಿಂದ ಸಂಬಳ ಕೊಡದೆ ಸತಾಯಿಸಿದ ಪರಿಗೆ ಲೇಖಕಿ ಯಾವ ರೀತಿ ಒದ್ದಾಡಿರಬೇಡ. ಅದೂ ಬೆಂಗಳೂರಿನಲ್ಲಿ ಹಣವಿಲ್ಲದೆ ಜೀವನ ಸಾಧ್ಯವೇ ? ಇಷ್ಟೆಲ್ಲ ಹೋರಾಟದ ಹಾದಿಯ ನಡುವೆಯೇ ಇವರ ಬದುಕಿನಲ್ಲೂ ಹೂವ ಹಾದಿ ಚಿಗುರಿದ್ದು ಸುಳ್ಳಲ್ಲ. ಗೆಳೆಯ ಚೇತನ್ ನ ಒತ್ತಾಯಕ್ಕೆ ಹಾಗೂ ಇವರಿಗೂ ನಟನೆಯ ಆಸೆಯಿದ್ದುದರಿಂದ ಕಾಲಿಟ್ಟಿದ್ದು ರಂಗಭೂಮಿಯತ್ತ.
ಎನ್.ಜಿ.ಓ ನಲ್ಲಿ ಕೆಲಸ ಸಿಕ್ಕಿದ್ದು, ಅಲ್ಲಿ ಭಯವನ್ನೆಲ್ಲ ತೊರೆದು ನಾಲ್ಕು ಜನರ ಮುಂದೆ ಮಾತನಾಡಿದ್ದು, ಇವರ ಆತ್ಮ ವಿಶ್ವಾಸವನ್ನು ಇನ್ನೂ ಹೆಚ್ಚಿಸಿತೆನ್ನಬಹುದು. ಇನ್ನು, ಉತ್ತಮ ಶಿಕ್ಷಕರಾದ ಸಂತೋಷ್ ಮಾಸ್ಟ್ರು, ಮಾವನ ಮಗಳು ಅಶ್ವಿನಿ, ಗೆಳೆಯ ಹಾಗೂ ಮುಂದೆ ಜೀವನದ ಭಾಗವಾದ ಪತಿ ಚೇತನ್ ಇವರೆಲ್ಲರ ಪಾತ್ರ ಇಲ್ಲಿ ಮುಖ್ಯವಾಗಿದೆ. ನಾಯಿಗಳೆಂದರೆ ಆಗದ ಇವರಿಗೆ ಭೀಮನೆಂಬ ನಾಯಿ ಸಿಕ್ಕಿ ಅದು ಸ್ವಂತ ಮಗುವಿನಂತೆಯೇ ಆಗಿದ್ದು ಓದುವಾಗ ಖುಷಿಯಾಗುತ್ತದೆ. ಇವರ ಪತಿಯಾದ ಚೇತನ್ ರವರ ಸಹಕಾರ ಮೆಚ್ಚುವಂತದ್ದು. ಇವರು ಕೆಲಸ ಮಾಡುತ್ತಿದ್ದ ಎನ್. ಜಿ. ಓನಲ್ಲಿ “ಸೌಂದರ್ಯ ಹಾಗೂ ಮಾನಸಿಕ ಆರೋಗ್ಯ” ಕುರಿತು ಪ್ರಬಂಧ ಬರೆಯುವ ಅವಕಾಶವಿದ್ದಾಗ ಅದನ್ನೇ ಬರೆದುಕೊಟ್ಟ ಲೇಖಕಿಗೆ ಇಲ್ಲೂ ಒಂದು ಮಹತ್ವದ ತಿರುವು ದೊರೆಯಿತು. ಅದು ಸಾವಿರಾರು ಜನರು ಓದುವಂತಾಗಿ, ಇವರ ಧೈರ್ಯದ ಕುರಿತು ಹೊಗಳಿದ್ದರಂತೆ. ಚೇತನ್ ನ ಸಲಹೆಯಂತೆ ಅದನ್ನೇ ಫೇಸ್ಬುಕ್ ನಲ್ಲಿ ಹಾಕಿದಾಗ ಮತ್ತೆ ಹಲವು ಜನರ ಪ್ರಶಂಸೆ. ಇದರಿಂದಾಗಿಯೇ ಗೆಳೆಯರ ಬಳಗ ದೊಡ್ಡದಾಯಿತೆನ್ನುತ್ತಾರೆ.
ಕೇವಲ ಬಿಳಿ ಚರ್ಮ, ತೆಳ್ಳನೆಯ ದೇಹಸ್ಥಿತಿ, ಸುಂದರ ಸ್ವರ ಇದ್ದರೇನೇ ಅವರು ಬದುಕಲು ಅರ್ಹರು ಎಂಬ ಸಣ್ಣ ಮನಸ್ಥಿತಿಯ ಜನರ ನಡುವೆ ಲೇಖಕಿ ವಿನುತಾ ವಿಶ್ವನಾಥ್, ಬದುಕನ್ನು ಎದುರಿಸುತ್ತಿರುವ ಪರಿ ನಿಜಕ್ಕೂ ನಮಗೆಲ್ಲ ಸ್ಫೂರ್ತಿದಾಯಕ. ಈ ಪುಸ್ತಕ ಓದಿ ಮುಗಿಸುವಾಗ ‘ಅಬ್ಬಾ ಛಲಗಾತಿಯೇ’ ಅನ್ನಿಸದಿರುವುದಿಲ್ಲ. ಈ ನಿಟ್ಟಿನಲ್ಲಿ ಈ ಪುಸ್ತಕದ ಮೂಲಕ ವಿನುತಾ ವಿಶ್ವನಾಥ್ ಓದುಗರಿಗೆ ಸಕಾರಾತ್ಮಕ ಸಂದೇಶವನ್ನು ರವಾನಿಸಿದ್ದಾರೆ.
~ವಿನಯಾ ಕೌಂಜೂರು
ಇದನ್ನೂ ಓದಿ : ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಡಿಜಿಟಲೈಸ್ಡ್ ವ್ಯವಸ್ಥೆ ಜಾರಿ: ಸಚಿವ ಮಾಧುಸ್ವಾಮಿ