Advertisement

ಸ್ಮಶಾನಕ್ಕೆ 18 ಗುಂಟೆ ಜಾಗ ಬಿಟ್ಟುಕೊಟ್ಟ ಗ್ರಾಪಂ ಸದಸ್ಯ!

12:29 PM Jun 11, 2023 | Team Udayavani |

ಚನ್ನಪಟ್ಟಣ: ಹಲವಾರು ವರ್ಷಗಳಿಂದ ಹುಣಸನ ಹಳ್ಳಿ ಗ್ರಾಮದಲ್ಲಿ ಶವಸಂಸ್ಕಾರ ಮಾಡಲು ಸೂಕ್ತ ಜಾಗವಿಲ್ಲದೇ ಪರದಾಡುವ ಸ್ಥಿತಿಯನ್ನು ಮನಗಂಡ ಗ್ರಾಪಂ ಸದಸ್ಯ ಮುತ್ತುರಾಜು ತನ್ನ ಜಮೀನನ್ನೇ ಸ್ಮಶಾನಕ್ಕೆ ನೀಡಲು ಮುಂದಾಗಿದ್ದಾರೆ.

Advertisement

ತಾಲೂಕಿನ ಕೋಡಂಬಹಳ್ಳಿ ಗ್ರಾಪಂ ವ್ಯಾಪ್ತಿಯ ಹುುಣಸನಹಳ್ಳಿಯ ಸದಸ್ಯ ಮುತ್ತುರಾಜು ತನ್ನ 18 ಗುಂಟೆ ಜಾಗವನ್ನು ಸ್ಮಶಾನಕ್ಕೆಂದು ಸರ್ಕಾರಕ್ಕೆ ನೀಡಲು ಮುಂದಾಗಿದ್ದು, ಈ ಸಂಬಂಧ ತಹಶೀಲ್ದಾರ್‌ ಮಹೇಂದ್ರ ಅವರನ್ನು ಭೇಟಿ ಮಾಡಿ ಜಾಗವನ್ನು ಸುಪರ್ದಿಗೆ ಪಡೆಯುವಂತೆ ಮನವಿ ಮಾಡಿದ್ದಾರೆ.

ಸಮಸ್ಯೆ ಬಗೆಹರಿಸಿ: ಹುಣಸನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆಂದು ಪ್ರತ್ಯೇಕ ಜಾಗವಿಲ್ಲ, ಹೊಳೆದಡೆಯ ಪಕ್ಕ ಇರುವ ಜಾಗದಲ್ಲಿ ಹಾಗೂ ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿ ಇಲ್ಲಿಯವರೆಗೂ ಶವಸಂಸ್ಕಾರವನ್ನು ನಡೆಸಲಾಗುತ್ತಿತ್ತು. ಆದರೆ, ಕೆಲ ದಿನಗಳಿಂದ ಖಾಸಗಿ ವ್ಯಕ್ತಿಯೂ ಶವಸಂಸ್ಕಾರಕ್ಕೆ ಅವಕಾಶ ನೀಡದ ಕಾರಣ ಗ್ರಾಮದಲ್ಲಿ ಸ್ಮಶಾನದ ಸಮಸ್ಯೆ ತಲೆದೋರಿದ್ದು ಅಧಿಕಾರಿಗಳಿಗೂ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು.

ಕೋಡಂಬಹಳ್ಳಿ ಗ್ರಾಪಂನ ಹುಣಸನಹಳ್ಳಿ ಗ್ರಾಮದ ಸದಸ್ಯ ಮುತ್ತುರಾಜ್‌ ಅವರ 18 ಗುಂಟೆ ಜಾಗವೂ ಹೊಳೆ ಪಕ್ಕದಲ್ಲಿದ್ದು, ಸ್ಮಶಾನಕ್ಕೆ ಹೇಳಿ ಮಾಡಿಸಿದ ಜಾಗ. ಗ್ರಾಮದ ಮುಖ್ಯಸ್ಥರು, ಗ್ರಾಮಸ್ಥರು ಆ ಜಾಗವನ್ನು ಸ್ಮಶಾನಕ್ಕೆ ನೀಡುವಂತೆ ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಮುತ್ತುರಾಜ್‌ ಜಾಗ ಬಿಟ್ಟುಕೊಡಲು ಸಮ್ಮತಿಸಿದ್ದಾರೆ.

ಈ ಸಂಬಂಧ ಈಗಾಗಲೇ ತಾಲೂಕು ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್‌ ಮಹೇಂದ್ರ ಅವರನ್ನು ಗ್ರಾಮಸ್ಥರೊಡನೆ ಭೇಟಿ ಮಾಡಿ ತನಗೆ ಸೇರಿದ 18ಗುಂಟೆ ಜಾಗವನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡು ಸ್ಮಶಾನ ಮಾಡಿ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Advertisement

ತಹಶೀಲ್ದಾರ್‌ರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಂಕರಾನಂದ, ಮಂಜುನಾಥ, ಗೋಪಿ, ಮುತ್ತುರಾಜ್‌, ನಾಗೇಶ್‌, ಪುಟ್ಟಸ್ವಾಮಿ, ರಾಮು, ಶ್ರೀನಿವಾಸ್‌ ಇತರರಿದ್ದರು.

ಹೊಳೆ ಪಕ್ಕ ಇರುವ ನನ್ನ 18 ಗುಂಟೆ ಜಾಗ ಸ್ಮಶಾನಕ್ಕೆ ಹೇಳಿ ಮಾಡಿಸಿದಂತಿದ್ದು ಅದನ್ನು ಬಿಟ್ಟುಕೊಡುವಂತೆ ಗ್ರಾಮದ ಮುಖ್ಯಸ್ಥರು, ಗ್ರಾಮಸ್ಥರು ಕೇಳಿದ್ದಾರೆ. ಹೀಗಾಗಿ ಜಾಗ ಬಿಟ್ಟುಕೊಡಲು ಒಪ್ಪಿ ತಹಶೀಲ್ದಾರ್‌ರಿಗೆ ಮನವಿ ಪತ್ರ ನೀಡಿದ್ದೇನೆ. -ಮುತ್ತುರಾಜ್‌, ಗ್ರಾಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next