ನಂಜನಗೂಡು: ದಕ್ಷಿಣ ಕಾಶಿಯೆಂದೇ ಪ್ರಸಿದ್ಧವಾದ ಶ್ರೀಕಂಠೇಶ್ವರನ ಸನ್ನಿಧಿಗೆ ಹುಣ್ಣಿಮೆ ಹಿನ್ನೆಲೆಯಲ್ಲಿ ಅಪಾರ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಭಕ್ತ ಸಾಗರ: ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಂತರ ಸುಮಾರು 2 ವರ್ಷಗಳ ನಂತರ ಭಕ್ತರು ಅಲ್ಪ ಪ್ರಮಾಣದಲ್ಲಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಭಾನುವಾರ ಧನುರ್ಮಾಸ ಹುಣ್ಣಿಮೆ ಅಂಗವಾಗಿ ಶ್ರೀಕಂಠೇಶ್ವರನ ಸನ್ನಿಧಿಗೆ ಭಕ್ತಸಾಗರವೇ ಹರಿದು ಬಂದಿತ್ತು.
ಹರಸಾಹಸ: ಪರಿಣಾಮ ದೇವಾಲಯದ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರ ಸಾಹಸಪಡಬೇಕಾಯಿತು.
50 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ: ಭಾನುವಾರ ಬೆಳಗಿನ ಜಾವವೇ ಅಸಂಖ್ಯಾತ ಭಕ್ತರು ನಂಜನಗೂಡಿನತ್ತ ಸಾಗಿ ಕಪಿಲಾ ನದಿಯಲ್ಲಿ ಮಿಂದೆದ್ದರು. ನಂತರ, ತಮ್ಮ ಆರಾಧ್ಯ ದೈವ ನಂಜುಂಡೇಶ್ವರನ ದರ್ಶನಕ್ಕೆ ಧಾವಿಸತೊಡಗಿದರು. ಬೆಳಗಿನಿಂದ ಸಂಜೆಯವರಿಗೆ ಸುಮಾರು50 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿರಬಹುದು ಎಂದು ತಿಳಿದು ಬಂದಿದೆ. ಕೊರೊನಾ ನಂತರ ಇದೇ ಮೊದಲ ಬಾರಿಗೆ ಅಪಾರ ಭಕ್ತರು ದೇಗುಲಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ.
ದರ್ಶನಕ್ಕೆ ದರ: ಭಾನುವಾರ ಮುಂಜಾನೆ 6 ಗಂಟೆಯಿಂದ ಸಂಜೆ ನಾಲ್ಕರವರಿಗೆ 3000ಕ್ಕೂ ಹೆಚ್ಚು ಜನ ತಲಾ 100 ರೂ.(3,31ಲಕ್ಷರೂ.)ನೀಡಿ ಭಗವಂತನನ್ನು ದರ್ಶಿಸಿದರೆ, ಸುಮಾರು ಅಷ್ಟೇ ಜನ 50 ರೂ. (1.45ಲಕ್ಷ ರೂ,) ನೀಡಿ ದರ್ಶನ ಪಡೆದರು. ಸುಮಾರು 45 ಸಾವಿರಕ್ಕೂ ಹೆಚ್ಚು ಭಕ್ತರು ಯಾವುದೇ ಶುಲ್ಕ ನೀಡದೆ ಭವರೋಗ ವೈದ್ಯ ನಂಜುಂಡೇಶ್ವರನಿಗೆಪೂಜೆ ಸಲ್ಲಿಸಿದರು. ಸರದಿಯಲ್ಲಿ ಬಂದವರು ಭಗವಂತನ ಮುಂದೆ ಹೆಚ್ಚು ಕಾಲ ನಿಲ್ಲದಂತೆ ಅವರನ್ನು ಸಾಗ ಹಾಕುವುದೇ ಸಿಬ್ಬಂದಿಗೆ ಪ್ರಯಾಸದ ಕಾರ್ಯವಾಗಿತ್ತು.