Advertisement

ಹಸಿವು

03:45 AM May 07, 2017 | |

ಇವತ್ತು ಹೇಗಾದ್ರು ಮಾಡಿ ಲೋಕೇಶ್‌ ಮಾಸ್ತರ ಕ್ಲಾಸಿಗೆ ಚಕ್ಕರ್‌ ಹೊಡೀಬೇಕು, ಆದ್ರೆ, ಆ ಮಾಸ್ತರನ್ನು ನೆನೆಸಿಕೊಂಡರೇನೆ ಭಯ ಆಗುತ್ತೆ, ಗಂಡುಮಕ್ಕಳು ಹೆಣ್ಣುಮಕ್ಕಳು ಅಂತ ಮುಖ ಮೂತಿ ನೋಡದೆ ಹೊಡೀತಾರಲ್ಲ, ಹೊಡೀಬಾರ್ಧು ಅಂತ ಕಾನೂನು ಇದೆ ಅಂತ ವೈಷ್ಣವಿ ಹೇಳ್ತಾ ಇದ್ದಳು. ಆದ್ರೂ ಇದು ಹೊಟ್ಟೆ ವಿಷಯ.  ಸುಮಾಳ ತಲೆಯಲ್ಲಿ ಯೋಚನೆಗಳು ಸಾವಿರಕಾಲಿನ ಝರಿ ತರಹ ಹರಿಯುತ್ತ ಇದುÌ. 

Advertisement

ಪರಮೇಶ ಎರಡು ವರ್ಷಗಳ ಹಿಂದೆ ಪೆಟ್ರೋಲ್‌ ಬ್ಯಾಂಕಿನ ಕೆಲಸದಿಂದ ರಾತ್ರಿ ವಾಪಸು ಬರುವಾಗ ಯಾರೋ ಹಿಂದುಗಡೆಯಿಂದ ವಾಹನದಲ್ಲಿ ಗುದ್ದಿ ಹೋಗಿದ್ದರು. ಬೆಳಗಿನವರೆಗೂ ಅಪ್ಪ ಬಾರದೆ ಇದ್ದಾಗ ಬೆಳಿಗ್ಗೆ ಮಾದೇಶ ತಂದ ಸುದ್ದಿ ಪರಮೇಶನ ಮನೆಯವರನ್ನು ದಿಕ್ಕು ಕೆಡಿಸಿತ್ತು. “ದುಡಿಯೋದು ಒಂದು ಕೈ ತಿನ್ನೋದು ಮಾತ್ರ ನಾಲ್ಕು ಹೊಟ್ಟೆ ‘ ಪರಮೇಶ ಆಗಾಗ್ಗೆ ಹೆಂಡತಿಗೆ ರೇಗಿಸ್ತಾ ಇದ್ದ. ಹೀಗಾಗಿಯೇ ಸುಮಾಳ ತಾಯಿಯೂ ಒಂದೆರಡು ಮನೆಕೆಲಸ ಮಾಡಿಕೊಂಡು ಅಲ್ಲಿ ಕೊಟ್ಟಿದ್ದ ತಂಗಳು ಪಂಗಳು ತಿಂದುಕೊಂಡು ಸುಮಾಳಿಗೆ ಸರ್ಕಾರಿ ಶಾಲೆಗೆ ಕಳುಹಿಸ್ತಾ ಇದ್ದಳು. ಸುಮಾ ನಾಲ್ಕನೇ ಕ್ಲಾಸು ಓದ್ತಾ ಇದ್ದಳು. ಇನ್ನು ಅವಳ ತಂಗಿ ಸುಧಾ, ಈಗಿನ್ನು ಅಂಗನವಾಡಿಗೆ ಹೋಗ್ತಾ ಇದು. ಆದರೆ, ಅಪ್ಪ ಸತ್ತ ಒಂದು ವರ್ಷದ ಒಳಗೆಯೇ ಸುಮಾಳ ತಾಯಿಗೆ ಭಾರ ಎತ್ತೋಕಾಗದೆ ಕೆಲಸ ಮಾಡೋಕ್ಕೆ ಆಗಿರಲಿಲ್ಲ. ಹೀಗಾಗಿ, ಸುಮಾ ಶಾಲೆಗೆ ಹೋಗುವ ಮುನ್ನವೇ ಅಮ್ಮ ಕೆಲಸ ಮಾಡುತ್ತಿದ್ದ ಎರಡು ಮನೆಗಳ ಮುಸುರೆ ತಿಕ್ಕಿ, ಕಸ ಗುಡಿಸಿ, ಬಟ್ಟೆ ಒಗೆದು, ರಂಗೋಲಿ ಹಾಕಿ ಬಂದ ನಂತರ ಸರ್ಕಾರ ಕೊಟ್ಟ ಶಾಲಾ ಸಮವಸ್ತ್ರ ತೊಟ್ಟು , ಇದ್ದ ಬ್ಯಾಗಿಗೆ ಪುಸ್ತಕಗಳನ್ನು ತುರುಕಿಕೊಂಡು ಕೊಪ್ಪಲಿನ ಶಾಲೆಗೆ ಬರುವಾಗಲೆ ಶಾಲೆಯ ಬೆಲ್‌ ಬಾರಿಸಿ ಹುಡುಗರೆಲ್ಲ ಸಾಲಾಗಿ ಪ್ರಾರ್ಥನೆಗೆ ನಿಂತುಕೊಳ್ತಾ ಇರೋವಾಗಲೆ, ಹಾಗೆ ಸಂದಿಯಲ್ಲಿ ತೂರಿಕೊಳ್ತಾ ಇದು.  ಆದರೆ, ಲೋಕೇಶ್‌ ಮಾಸ್ತರರು ಮಾತ್ರ ತುಂಬ ಕಟ್ಟುನಿಟ್ಟು . ಅವರ ಕಣ್ಣಿಗೆ ಲೇಟಾಗಿ ಬಂದದ್ದು ಕಂಡರೆ, ಹೋಂವರ್ಕ್‌ ಮಾಡದೇ ಇದ್ರೆ, ಮುಗೀತು ಅಷ್ಟೆ.  

ಲೋಕೇಶ್‌ ಮಾಸ್ತರರನ್ನು ನೆನೆಸಿಕೊಂಡೇ ಭಯವಾಗತೊಡಗಿತ್ತು.  ಹೋಂವರ್ಕ್‌ ಏನೋ ಮುಗಿಸಿದ್ದಾಗಿದೆ. ಆದರೆ, ಇವತ್ತು ಮಾತ್ರ ನನಗೆ ರಜೆ ಬೇಕೇ ಬೇಕು. ಸುಮಾ ಕೆಲಸ ಮಾಡುತ್ತಿದ್ದ ಮನೆಯವರ ಗೃಹಪ್ರವೇಶಕ್ಕೆ ಕೆಲಸ ಮಾಡಲು ಅಮ್ಮಾವರು ಹೇಳಿ ಬಿಟ್ಟಿದ್ದರು. “”ಲೇ ಸುಮಾ, ನಿಮ್ಮಮ್ಮನಿಗಂತೂ ಮೈ ಸರಿಯಿಲ್ಲ ಅಂತಾ ಬರೋದನ್ನೆ ನಿಲ್ಲಿಸಿದ್ದಾಳೆ, ನೀನೂ ಸ್ಕೂಲೂ ಪಾಲೂ ಅಂತ ಹೇಳಿ ಚಕ್ಕರ್‌ ಕೊಡಬೇಡವೆ” ಅಂತ ಗಡಸಾಗಿಯೇ ಹೇಳಿದ್ದರು.  ಸುಮಾ ಒಮ್ಮೆ ಯೋಚಿಸಿದಳು, ಈಗ ನಾನು ಮನೆಕೆಲಸಕ್ಕೆ ಹೋಗ್ತಾ ಇರೋದ್ರಿಂದ ಹೇಗೋ ನಾಲ್ಕು ಕಾಸು ಬರ್ತಾ ಇದೆ. ಅದು ಅಮ್ಮನ ಮನೆ ಖರ್ಚಿಗೆ ಆಗುತ್ತೆ, ಇನ್ನು ತನಗೆ ಸ್ಕೂಲಲ್ಲೆ ಮಧ್ಯಾಹ್ನದ ಊಟ ಕೊಡ್ತಾರೆ, ಸಂಜೆ ಹೇಗೋ ಆಗುತ್ತೆ, ನಾನೇನಾದ್ರೂ ಈಗ ಅವರ ಮನೆಗೆ ಹೋಗದೇ ಇದ್ರೆ, ಕೆಲಸದಿಂದ ತೆಗೆದು ಬಿಟ್ರೆ, ಅಬ್ಟಾ ! ಪುಟ್ಟ ಹುಡುಗಿಯ ಮನದಲ್ಲಿ ಏನೆಲ್ಲಾ ದೊಡ್ಡ ಆಲೋಚನೆಗಳು. ಹಾಗೆ ಲೋಕೇಶ ಮಾಸ್ತರರ ಭಯವೂ ಆಗಿತ್ತು. ವೈಷ್ಣವಿ ಕೈಯಲ್ಲಿ ಹೋಂವರ್ಕ್‌ ಕೊಟ್ಟು ಕಳುಹಿಸಿದರೂ, ಮಾಸ್ತರ್‌ ಮಾರನೆಯ ದಿನ ತನ್ನ ಬಿಡುವುದಿಲ್ಲ. ಆದರೆ, ಮಾಸ್ತರರ ಶಿಕ್ಷೆಗಿಂತ ತನಗೆ ಇದೀಗ ಗೃಹಪ್ರವೇಶದ ಮನೆಯ ಕೆಲಸ ಮಾಡಿದರೆ, ಒಂದೆರಡು ದಿನದ ಊಟಕ್ಕೆ ಮತ್ತು ಸ್ವಲ್ಪ ಕಾಸೂ ಗಿಟ್ಟಬಹುದು, ಹೀಗಾಗಿ ಚಕ್ಕರ್‌ ಹೊಡೆಯುವುದೇ ಸರಿ ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದಳು ಸುಮಾ.

ಬೆಳಿಗ್ಗೆ ಏಳು ಗಂಟೆಗೇ ಸುಮಾ ಗೃಹಪ್ರವೇಶದ ಮನೆಗೆ ಬಂದಿದ್ದಳು.  ಮನೆಯೊಡತಿ ಆ ಹುಡುಗಿಯನ್ನು , “ಏನಾದ್ರೂ ತಿಂದಿದ್ದೀಯಾ, ಕುಡಿದಿದ್ದೀಯಾ’ ಅಂತ ಕೇಳಲೆ ಇಲ್ಲ. ಬಂದ ತಕ್ಷಣವೇ, ಕೆಲಸಕ್ಕೆ ಹಚ್ಚಿ ಬಿಟ್ಟಳು. ಹಿಂದಿನ ದಿನ ರಾತ್ರಿಯೆಲ್ಲಾ ಹೋಂವರ್ಕ್‌ ಬರೆದು, ತಿನ್ನಲೆಂದು ಪಾತ್ರೆಗೆ ಕೈ ಹಾಕಿದಾಗ, ಬೆಳಗಿನ ಅನ್ನ ನೀರಾಗಿ ಹಳಸಿ ವಾಕರಿಕೆ ಬರುವಂತಿತ್ತು.  ಸುಮಾಳ ಅಮ್ಮನೂ “ಮಗಳು ಬರಲಿ’ ಎಂದು ತಿಂದಿರಲಿಲ್ಲ. ಒಟ್ಟಾರೆ ಆ ದಿನ ಮೂರು ಜೀವಗಳು ಹಸಿದುಕೊಂಡೇ ಇದ್ದವು. ಈ ರೀತಿಯ ಹಸಿವಿನ ದಿನಗಳು ಅವರಿಗೆ ಹೊಸದಾಗಿರಲಿಲ್ಲ. ಆದರೆ ಸುಮಾ ಮಾತ್ರ ಬೆಳಿಗ್ಗೆ ಗೃಹಪ್ರವೇಶದ ಮನೆಗೆ ಹೋದರೆ ಚೂರುಪಾರು ತಿಂಡಿ ಸಿಕ್ಕೇ ಸಿಗುತ್ತೆ ಎಂಬ ಆಸೆಯಲ್ಲಿದ್ದಳು. 

ಗೃಹ ಪ್ರವೇಶದ ಮನೆಯ ಪೂಜಾ ಕಾರ್ಯಗಳು ಮುಗಿದವು. ಬಂದ ಅತಿಥಿಗಳಿಗೆ ತಿಂಡಿ, ತೀರ್ಥದ ಉಪಚಾರದ ನಂತರ ಮಧ್ಯಾಹ್ನದ ಊಟಕ್ಕೆ ಏರ್ಪಾಡು ಮಾಡಿದ್ದರು.  ತಿಂಡಿ ತಿನ್ನುತ್ತಾ ಇದ್ದವರನ್ನು ನೋಡಿಯೇ ಹಸಿವು ನೀಗಿಸಿಕೊಂಡ ಸುಮಾ, ಇದೀಗ ಬೇಗ ಊಟವಾದರೆ ಸಾಕು ಎಂದುಕೊಳ್ಳುತ್ತಿದ್ದಳು. ಮೊದಲನೆಯ ಪಂಕ್ತಿಯ ಊಟ ಆಯಿತು.  ಊಟದ ನಂತರ ಎಲೆಗಳನ್ನು, ಮೇಜಿನ ಮೇಲೆ ಹಾಸಿದ್ದ ಕಾಗದವನ್ನು ತೆಗೆಯುತ್ತ ಬಂದಳು.  ಪಲ್ಯ, ಕೋಸಂಬರಿ, ಖೀರು, ಪಲಾವ್‌, ಅಂಬೊಡೆ, ಅಬ್ಟಾ ಹಸಿವು ಇಮ್ಮಡಿಯಾಗತೊಡಗಿತ್ತು ಸುಮಾಳಿಗೆ. ಇನ್ನು ಸ್ವಲ್ಪವೇ ಹೊತ್ತು, ಚೆನ್ನಾಗಿ ತಿಂದು ಏನಾದ್ರೂ ಮಿಕ್ಕಿದ್ದನ್ನು ಅಮ್ಮಾವರು ಕೊಟ್ಟರೆ, ಎರಡು ದಿನ ಪರವಾಗಿಲ್ಲ ಅಂದುಕೊಳ್ತ ಇದ್ದಳು.  ಇದೀಗ ಎರಡನೆಯ ಪಂಕ್ತಿ ಭೋಜನ ಪ್ರಾರಂಭವಾಗಿತ್ತು.  ಊಟದ ಎಲೆಗೆ ಕೋಸಂಬರಿ, ಪಲ್ಯ, ಅನ್ನ ಬಡಿಸಿದ ನಂತರ ಸುಮಾಳ ಕಣ್ಣು ಅಲ್ಲೆ ಕೂತಿದ್ದ ತಾಯಿ-ಮಗನ ಕಡೆಗೆ ಹೋಯಿತು.  ಆಕೆಯ ಮಗ ಸುಮಾರು ಸುಮಾಳ ವಯಸ್ಸೇ ಇರಬಹುದು.  ಆದರೆ ಆತ ತಿನ್ನೋದಿಕ್ಕೆ ತುಂಬ ಹಠ ಮಾಡುತ್ತಿದ್ದ.  ಕಲಸಿ ಬಾಯಿಗಿಟ್ಟರೂ ಬಾಯೇ ತೆಗೆಯುತ್ತಿರಲಿಲ್ಲ.  ಸುಮಾ ನೋಡ್ತಾ ಇದ್ದಳು, ಆ ತಾಯಿ ಮೊದಲಿಗೆ ಪ್ರೀತಿಯಿಂದ ಹೇಳಿದಳು, ನಂತರ ಗದರಿದಳು, “”ಊಹುಂ, ಜಪ್ಪಯ್ಯ ಅಂದ್ರೂ ಒಂದೆರಡು ಕೋಸಂಬರಿ ಕಾಳನ್ನು ತಿಂದ ಆ ಹುಡುಗ ಊಟ ಬೇಡವೇ ಬೇಡ” ಅನ್ನುತ್ತಿದ್ದ.  ಎದುರಿಗೇ ಕೂತಿದ್ದ ಒಬ್ಬರು, “”ಅಲ್ಲಾ ಪದ್ಮಾ, ಇದ್ಯಾಕೆ ನಿನ್ನ ಮಗ ಏನೂ ತಿನ್ತಾ ಇಲ್ಲ, ಊಟ ಬೇಡವಂತಾ” ಅಂದಾಗ, ಆ ತಾಯಿ, “”ಇಲ್ಲ ದೊಡ್ಡಪ್ಪ , ತಿನ್ತಾನೆ, ನೋಡಿ ಈಗ ಎಂದು ಹೇಳುತ್ತಾ ನೋಡೋ ದೊಡ್ಡಪ್ಪ ಬಯ್ತಾರೆ ತಿನ್ನೋ ಬೇಗ” ಎಂದು ತಿನಿಸತೊಡಗಿದಾಗ ಮತ್ತೆ ಆ ಹುಡುಗ ತಿನ್ನಲೆ ಇಲ್ಲ. ಆಗ ಎದುರಿಗೆ ಕೂತಿದ್ದ ಆ ಆಸಾಮಿ, “”ಅಲ್ವೇ ಪದ್ಮಾ ಯಾರಾದ್ರೂ ಡಾಕ್ಟರಿಗೆ ತೋರಿಸಿ ಒಳ್ಳೇ ಹಸಿವಾಗೋ ಹಾಗೇ ಯಾವುದಾದರು ಟಾನಿಕ್ಕೋ ಮಾತ್ರೇನೋ ಕೊಡಬೇಕಿತ್ತು” ಎಂದರು.  “”ಹೂಂ ದೊಡ್ಡಪ್ಪ , ನಿಮ್ಮ ಪಕ್ಕದಲ್ಲಿ ಕೂತಿ¨ªಾರಲ್ಲ ಅವರೇ ನಮ್ಮ ಫ್ಯಾಮಿಲಿ ಡಾಕ್ಟರು, ಅವರ ಕ್ಲಿನಿಕ್ಕಿಗೆ ಹೋಗಿ¨ªೆ, ಅವರು ಹಸಿವಿಗೆ ಅಂತ ಕೊಟ್ಟ ಎಲ್ಲಾ ಔಷಧಿ ಮಾತ್ರೆ ಕೊಡ್ತಾ ಇದ್ದೇನೆ ಆದ್ರೂ…”

Advertisement

ಹಸಿವಿಗೆ ಔಷಧಿ ಎನ್ನುವ ಮಾತು ಕಿವಿಗೆ ಬಿದ್ದ ಕೂಡಲೇ ಸುಮಾ ಜಾಗೃತಗೊಂಡಳು. ಹಸಿವಿಗೆ ಔಷಧಿ ಇದೆ ಅಂತಾದ್ರೆ, ಹಸಿವನ್ನು ಮರೆಮಾಚಿಸುವ ಔಷಧಿಯೂ ಇರಬೇಕು ಎನ್ನುವ ತತ್ವ ಆ ಪುಟ್ಟ ಹುಡುಗಿಯ ಮನದಲ್ಲಿ ಮೂಡಿತ್ತು.  ಹೌದು ಎಲ್ಲ ಹಸಿವಿಗೆ ಏಕೆ ಔಷಧಿ ತೆಗೆದುಕೊಳ್ತಾರೆ, ಮತ್ತೆ ಹಸಿವಿಗಾಗಿ ಏಕೆ ದುಡಿಯುತ್ತಾರೆ, ಹಸಿದರೆ ಮಾತ್ರ ಹೊಟ್ಟೆ ತುಂಬಿಸಲು ಕೆಲಸ, ಕೆಲಸ ಇÇÉಾ ಅಂತಂದ್ರೆ, ಕಳ್ಳತನ, ಸುಲಿಗೆ, ಮೋಸ, ಹಸಿವೆಯೆ ಇಲ್ಲದಿದ್ರೆ. ಸುಮಾಳ ಯೋಚನಾ ಲಹರಿ ಸಾಗಿತ್ತು.  ಅಷ್ಟು ಹೊತ್ತಿಗೆ ಆ ಪಂಕ್ತಿಯವರ ಊಟ ಮುಗಿದಿತ್ತು.  “”ಲೇ ಸುಮಾ, ಕೊನೆಯಿಂದ ಎಲೆಗಳನ್ನು ತೆಗೆಯುತ್ತಾ ಬಾರೆ” ಅಮ್ಮನವರು ಕೂಗಿ ಹೇಳಿದ್ರು.  ಆದರೆ, ಸುಮಾಳ ಮನಸ್ಸಿನ ಯೋಚನೆಗಳಲ್ಲಿ ನಡುವೆ ಅಮ್ಮನವರು ಕರೆದದ್ದು ಕೇಳಿಸಲೇ ಇಲ್ಲ.  ಕೈ ತೊಳೆಯುತ್ತಿದ್ದ ಜಾಗಕ್ಕೆ ಬಂದು ಅವಳು ಆ ಡಾಕ್ಟರರನ್ನು ಹುಡುಕಿದಳು.  ಅದಾಗಲೇ, ಡಾಕ್ಟರು, ಕೈ ತೊಳೆದುಕೊಂಡು ತಾಂಬೂಲ ತೆಗೆದುಕೊಳ್ಳಲು ಮುಂಬಾಗಿಲ ಕಡೆಗೆ ಬರುತ್ತಿದ್ದರು.  ಅವರ ಬಳಿಗೆ ಬಂದವಳೇ, ಸುಮಾ, “”ಕ್ಷೀಣ ದನಿಯಲ್ಲಿ, ಸಾರ್‌… ಸಾ…” ಎಂದಳು. ವೀಳ್ಯದೆಲೆಗೆ ಸುಣ್ಣ ಹಚ್ಚಿಕೊಳ್ಳುತ್ತಿದ್ದ ವೈದ್ಯರು, ಸುಮಾಳನ್ನು ನೋಡಿ, ಬಾಯಿಯಲ್ಲಿ ಅಡಿಕೆ ಹಾಕಿಕೊಂಡಿದ್ದರಿಂದ “”ಏನೂ?” ಎಂಬಂತೆ ಹುಬ್ಬು ಹಾರಿಸಿದರು.  “”ಸಾ…  ಮತ್ತೆ, ಮತ್ತೆ,  ನೀವು ನಿಮ್ಮೆದುರು ಕೂತಿದ್ದ ಆಂಟಿಯ ಮಗನಿಗೆ ಹಸಿವಾಗಲಿಕ್ಕೆ ಔಷಧಿ ಕೊಟ್ರಂತೆ…” ಸುಮಾ ಮಾತು ಮುಗಿಸುವ ಮುನ್ನವೇ ನಗುತ್ತಾ ವೈದ್ಯರು, “”ಹೂಂ ನಿನಗೂ ಹಸಿವಿಗೆ ಔಷಧಿ ಬೇಕಾ?” ಅಂದರು.  “”ಸಾ… ನನಗೆ ಹಸಿವಿಗೆ ಬೇಡ ಸಾರ್‌, ಹಸಿವೇ ಆಗದೇ ಇರೋ ಹಾಗೇ ಏನಾದ್ರೂ ಔಷಧಿ ಇದ್ರೆ ಹೇಳಿ ಸಾರ್‌” ಎಂದಳು. 

ಇದೀಗ ತಬ್ಬಿಬ್ಟಾಗುವ ಸರದಿ ಡಾಕ್ಟರ್‌ದಾಗಿತ್ತು. “”ಏನ್‌ ಹೇಳ್ತಾ ಇದ್ದೀಯಮ್ಮಾ ನೀನು, ನನಗೆ ಗೊತ್ತಿರೋದು ಹಸಿವಿಗೆ ಮಾತ್ರ, ಅಸಂಬದ್ಧ ಪ್ರಶ್ನೆಗಳನ್ನು ಕೇಳಬೇಡ” ಎಂದು ಸಿಡುಕಿಯೇ ಬಿಟ್ಟರು. “”ಇಲ್ಲಾ ಸಾರ್‌, ಹಸಿವಿಗೆ ಔಷಧಿ ಕಂಡುಹಿಡಿದ ಮೇಲೆ, ಹಸಿವಾಗದೇ ಇರಲಿಕ್ಕೂ ಔಷಧಿ ಇರಬೇಕಲ್ಲವೇ, ಅಂತಹ ಔಷಧಿ ಇದ್ದರೆ ನಮ್ಮಂತಹವರಿಗೆ ಉಪಕಾರ ಸಾರ್‌. ಹಸಿವಿಗಾಗೇ ನಾವು ಒ¨ªಾಡ್ತ ಇದ್ದೀವಿ, ಹಸಿವಿಗಾಗಿಯೇ ಶಾಲೆಗೆ ಹೋಗಿಲ್ಲ, ಹಸಿವಿಗಾಗಿಯೇ ನಾನು ದುಡೀತಾ ಇದೀನಿ, ಇನ್ನು ಈ ಹಸಿವೇ ಇಲ್ಲ ಅಂದ್ರೆ…” ಸುಮಾ ಇನ್ನೂ ಮಾತಾಡ್ತಾ ಇದ್ದಳು.  ಡಾಕ್ಟರು ಅ ಪುಟ್ಟ ಹುಡುಗಿಯ ಬಾಯಿಂದ ಬಂದ ಮಾತು ಕೇಳಿ ಮೂಕವಿಸ್ಮಿತರಾಗಿದ್ದರು.  ಸುಮಾಳನ್ನು “ಎಲೆ ಎತ್ತು’ ಎಂದು ಹೇಳಲು ಬಂದಿದ್ದ ಅಮ್ಮನವರೂ ಸುಮಾಳ ಮಾತು ಕೇಳಿ ದಿಗೂಢರಾಗಿದ್ದರು.  ಅವರಿಗರಿವಿಲ್ಲದಂತೆಯೇ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು.  ಆದರೆ ಇದಾವುದರ ಪರಿವೆ ಇಲ್ಲದೆ, ಸುಮಾ ಅಮ್ಮನವರು ಬಂದಿದ್ದನ್ನು ನೋಡಿ ಎಲೆ ಎತ್ತಲು ಶುರುಮಾಡಿದಳು. 

ವಿಜಯ್‌ ಹೆಮ್ಮಿಗೆ

Advertisement

Udayavani is now on Telegram. Click here to join our channel and stay updated with the latest news.

Next