Advertisement

ಹಸಿವೆಯೇ ನನ್ನ ಗುರು

03:04 PM Oct 26, 2017 | |

ಹಳೆಯ ಚಿತ್ರಗಳಲ್ಲಿ ನೀವು ನೋಡಿರಬಹುದು. ಒಬ್ಬ ಹುಡುಗ ತನ್ನ ಊರು ಬಿಟ್ಟು, ಮನೆ-ಮಂದಿಯನ್ನು ಬಿಟ್ಟು ರೈಲ್ವೇ ಹಳಿಗಳ ಮೇಲೆ ಓಡುತ್ತಿರುತ್ತಾನೆ. ಕ್ಯಾಮೆರಾ ಅವನ ಕಾಲನ್ನೇ ತೋರಿಸುತ್ತಿರುತ್ತದೆ. ಓಡುತ್ತಾ ಓಡುತ್ತಾ ಕ್ರಮೇಣ ಕಾಲುಗಳು ದೊಡ್ಡದಾಗುತ್ತವೆ. ಆ ಚಿಕ್ಕ ಹುಡುಗ, ದೊಡ್ಡವನಾಗಿರುತ್ತಾನೆ. ಹಳ್ಳಿಯ ಮನೆ ಬಿಟ್ಟು ಬಂದವನು, ಊರಲ್ಲಿ ದೊಡ್ಡ ಮನುಷ್ಯನಾಗಿರುತ್ತಾನೆ. ಇಷ್ಟೆಲ್ಲಾ ಕಥೆ ಯಾಕೆ ಎಂದರೆ, ರವಿ ಬಸ್ರೂರು ಎಂಬ ಸಂಗೀತ ನಿರ್ದೇಶಕರ ಕಥೆಯೂ ಇದೆ. 1998ರಲ್ಲಿ ಮನೆಯಿಂದ ಓಡಿ ಬೆಂಗಳೂರಿಗೆ ಸೇರಿಕೊಂಡ ಅವರು, ಇವತ್ತು ಚಿತ್ರರಂಗದಲ್ಲಿ ದೊಡ್ಡ ಹೆಸರು. ಸಂಗೀತ ನಿರ್ದೇಶಕರಾಗಿ ಗುರುತು ಪಡೆದ ಅವರು, ಈಗ ನಿರ್ಮಾಪಕ-ನಿರ್ದೇಶಕ-ನಾಯಕ ಎಲ್ಲವೂ ಆಗಿ ಹೋಗಿದ್ದಾರೆ. ಹಾಗಿದ್ದವರು, ಹೀಗಾಗಿದ್ದು ಹೇಗೆ ಎಂದರೆ, ಹಸಿವು ಎಂಬ ಉತ್ತರ ಅವರಿಂದಲೇ ಬರುತ್ತದೆ. ಹಸಿವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದು ಅವರ ನಂಬಿಕೆ. ಆ ನಂಬಿಕೆಯೇ ಅವರನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆಯಂತೆ.

Advertisement

ಕನ್ನಡದಲ್ಲಿ ಸದ್ಯದ ಮಟ್ಟಿಗೆ ಬೇಡಿಕೆ ಸಂಗೀತ ನಿರ್ದೇಶಕರು ಯಾರು ಎಂದರೆ ಮೂರು ಹೆಸರುಗಳು ಬರುತ್ತವೆ. ಅಜನೀಶ್‌ ಲೋಕನಾಥ್‌, ರವಿ ಬಸ್ರೂರು ಮತ್ತು ಚರಣ್‌ರಾಜ್‌. ಈ ಪೈಕಿ ರವಿ ಬಸ್ರೂರುಗೆ ಚಾರಿತ್ರಿಕ ಮಹತ್ವ ಇರುವುದು ಅವರೊಬ್ಬ ಸಂಗೀತ ನಿರ್ದೇಶಕ ಅಂದಷ್ಟೇ ಅಲ್ಲ. ಸಂಗೀತ ನಿರ್ದೇಶಕರ ಜೊತೆಗೆ ನಟ-ನಿರ್ದೇಶಕ-ನಿರ್ಮಾಪಕ ಸಹ ಎಂಬ ಕಾರಣಕ್ಕೆ. ನಟರಾದವರು ನಂತರದ ದಿನಗಳಲ್ಲಿ ಬೇರೆ ಆಯಾಮಗಳತ್ತ ಮುಖ ಮಾಡುವುದು ಸಹಜ. ಆದರೆ, ಸಂಗೀತ ನಿರ್ದೇಶಕರಾಗಿ ಬಂದು, ಆ ನಂತರ ನಾಯಕ-ನಿರ್ಮಾಪಕ-ನಿರ್ದೇಶಕ ಎಂದೆಲ್ಲಾ ಆಗುವುದಿದೆಯಲ್ಲಾ, ಅದು ವಿಚಿತ್ರ ಮತ್ತು ವಿಶೇಷ. ಆ ಕೆಲಸವನ್ನು ರವಿ ಬಸೂÅರು ಮಾಡಿದ್ದಾರೆ.

ರವಿ, ಬಸ್ರೂರು ಬಿಟ್ಟು 98ರಲ್ಲಿ ಬೆಂಗಳೂರಿಗೆ ಬಂದಾಗ, ಸ್ವಿಚ್‌ ಹಾಕಿದರೆ ಲೈಟ್‌ ಉರಿಯತ್ತೆ ಅಂತ ಸಹ ಗೊತ್ತಿರಲಿಲ್ಲವಂತೆ. “ಹತ್ತನೇ ಕ್ಲಾಸ್‌ ಬರೆದು ಬೆಂಗಳೂರಿಗೆ ಓಡಿ ಬಂದವನು ನಾನು. ಆಗ ಸ್ವಿಚ್‌ ಹಾಕಿದ್ರೆ ಲೈಟ್‌ ಆನ್‌ ಆಗತ್ತೆ ಅಂತ ಸಹ ಗೊತ್ತಿರಲಿಲ್ಲ. ಆವತ್ತು ನಮ್ಮನೆಗೆ ಭಾಗ್ಯಜ್ಯೋತಿ ಲೈಟ್‌ ಹಾಕಿದ ದಿನ. ಆವತ್ತು ಮನೆ ಬಿಟ್ಟು ಬಂದುಬಿಟ್ಟೆ. ಇಲ್ಲಿಗೆ ಬಂದು ಕೆತ್ತನೆ ಮಾಡುತ್ತಿದ್ದೆ. ಮಹಾಲಕ್ಷ್ಮೀ ಲೇಔಟ್‌ನ ದೇವಸ್ಥಾನದ ಗಣಪತಿ ಕವಚ, ಆಂಜನೇಯನ ಪಾದುಕೆ ಮಾಡಿದ್ದು ನಾನೇ. ಆ ಸಂದರ್ಭದಲ್ಲಿ ನನಗೆ ಸಂಗೀತ ಕಲಿಯಬೇಕು ಅಂತ ಅನಿಸಿತು. ಅಷ್ಟರಲ್ಲಿ ಸಾಲೋಮನ್‌ ಎಂಬುವವರ ಪರಿಚಯ ಆಯ್ತು. ಅವರಿಂದಲೇ ನನಗೆ ಗೊತ್ತಾಗಿದ್ದು, ಈಗ ಕಂಪ್ಯೂಟರ್‌ನಲ್ಲೇ ಸಂಗೀತ ಮಾಡ್ತಾರೆ ಅಂತ. ಸಾಲೋಮನ್‌ ಅವರೇ ನನಗೆ ಒಂದು ಕಂಪ್ಯೂಟರ್‌ ಕೊಡಿಸಿದರು. ಮೂರು ವರ್ಷದಲ್ಲಿ ಸ್ಟಡಿ ಆದೆ. ಆ ನಂತರ ವೇದಿಕೆ ಸಿಕ್ಕಿದ್ದು ಎಫ್.ಎಂನಲ್ಲಿ. ಆಮೇಲೆ ಅರ್ಜುನ್‌ ಜನ್ಯ ಪರಿಚಯವಾಯ್ತು, ಆಮೇಲೆ “ಉಗ್ರಂ’ ಆಯ್ತು, ಆಮೇಲೇನಾಯ್ತು ಅಂತ ನಿಮಗೇ ಗೊತ್ತು’ ಎಂದರು ರವಿ.

ಬಹಳಷ್ಟು ಜನರಿಗೆ ಪೋಸ್ಟ್‌ “ಉಗ್ರಂ’ನ ರವಿ ಗೊತ್ತು. ಅದಕ್ಕಿಂತ ಮುನ್ನ ಅವರೇನಾಗಿದ್ದರು ಅಂತ ಗೊತ್ತಿರಲಿಕ್ಕಿಲ್ಲ. ಆ ಕುರಿತು ಅವರನ್ನು ಕೆದಕಿದರೆ, ತಾನು ಚಿತ್ರರಂಗಕ್ಕೆ ಬಂದು 16 ವರ್ಷ ಆಯ್ತು ಎನ್ನುತ್ತಾರೆ ಅವರು. “ನಾನು ಚಿತ್ರರಂಗಕ್ಕೆ ಬಂದು 16 ವರ್ಷ ಆಗಿದೆ. ನಾನು ಬಂದಿದ್ದು ಪ್ರೋಗ್ರಾಮರ್‌ ಆಗಿ. ಜೊತೆಗೆ ಜಿಂಗಲ್ಸ್‌ ಸಹ ಮಾಡುತ್ತಿದ್ದೆ. ಒಟ್ಟು ಮೂರು ಚಿತ್ರರಂಗಗಳಲ್ಲಿ ಪ್ರೋಗ್ರಾಮರ್‌ ಆಗಿ ಈಗಲೂ ದುಡಿಯುತ್ತಿದ್ದೇನೆ. ನಾನು ಯಾರಿಂದ ಸಂಗೀತ ಕಲಿತೆ ಎಂದು ಹೇಳುವುದು ಕಷ್ಟ. ಆದರೆ, ಚಿತ್ರರಂಗದ 80 ಪರ್ಸೆಂಟ್‌ ಸಂಗೀತ ನಿರ್ದೇಶಕರು ನನ್ನಿಂದ ಕೆಲಸ ಮಾಡಿಸಿದ್ದಾರೆ. ಕೀಬೋರ್ಡ್‌, ಲೈವ್‌ ಪ್ರೋಗ್ರಾಮಿಂಗ್‌ ಇವೆಲ್ಲಾ “ಮಾಣಿಕ್ಯ’ ಚಿತ್ರದವರೆಗೂ ಮಾಡುತ್ತಿದ್ದೆ. ನಾನು “ಉಗ್ರಂ’ನಲ್ಲಿ ಸಂಗೀತ ನಿರ್ದೇಶಕನಾಗುವ ಮುನ್ನ 65 ಸಿನಿಮಾಗಳಿಗೆ ಕೆಲಸ ಮಾಡಿದ್ದೆ. ಸುಮಾರು 800 ಹಾಡುಗಳಿಗೆ ಪ್ರೋಗ್ರಾಮಿಂಗ್‌ ಮಾಡಿರಬಹುದು. ಅದರಲ್ಲೂ ಅರ್ಜುನ್‌ ಜನ್ಯಗೇ 30 ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ನಿಜ ಹೇಳಬೇಕೆಂದರೆ, ನನ್ನೊಳಗಿನ ಕೆಲಸಗಾರನ್ನ ತೆಗೆದು, ಬೆಳಕು ತೋರಿಸಿದವರು ಅವರೇ’ ಎಂದು ಅರ್ಜುನ್‌ ಜನ್ಯಗೆ ಧನ್ಯರಾಗುತ್ತಾರೆ ಅವರು.

“ಉಗ್ರಂ’ ಚಿತ್ರದಿಂದ ರವಿ ಬಸ್ರೂರು ಹಲವು ಹಾಡುಗಳನ್ನು ಸಂಯೋಜಿಸಿದ್ದಾರೆ. ಆದರೆ, ಅವರ ಸಂಗೀತಕ್ಕಿಂತ ಜನಪ್ರಿಯವಾಗಿರುವುದು ಹಿನ್ನೆಲೆ ಸಂಗೀತವೇ. ಅಷ್ಟೇ ಅಲ್ಲ, ನಿರ್ಮಾಪಕರು ಅವರನ್ನು ಹುಡುಕಿಕೊಂಡು ಬರುತ್ತಿರುವುದು ಸಹ ಹಿನ್ನೆಲೆ ಸಂಗೀತಕ್ಕೆ. ಆ ಬಗ್ಗೆ ರವಿಗೆ ಬೇಸರವಿದ್ದಂತೆ ಇಲ್ಲ. “ಒಂದು ಚಿತ್ರದಲ್ಲಿ ಹಾಡುಗಳ ಅವಧಿ 20ರಿಂದ 25 ನಿಮಿಷ ಇರಬಹುದು. ಮಿಕ್ಕಂತೆ ಸಿನಿಮಾದ ಒಂದೂಮುಕ್ಕಾಲು ಗಂಟೆ ನಿಂತಿರೋದು ಹಿನ್ನೆಲೆ ಸಂಗೀತದ ಮೇಲೆ. ಒಂದೂಮುಕ್ಕಾಲು ಗಂಟೆ ನುಡಿಸುವ ಕೆಪ್ಯಾಸಿಟಿ ದೊಡ್ಡದು. ಹಾಗಾಗಿ ನನಗೆ ಬರೀ ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ ಎಂಬ ಬಗ್ಗೆ ಬೇಸರವಿಲ್ಲ. ಇಲ್ಲಿ ಇನ್ನೂ ಒಂದು ವಿಷಯವಿದೆ. ಅದೇನೆಂದರೆ, ನನ್ನನ್ನು ಹುಡುಕಿಕೊಂಡು ಬರುವವರೆಲ್ಲಾ ಸಂಗೀತ ಕೆಲಸ ಮುಗಿಸಿ, ಹಿನ್ನೆಲೆ ಸಂಗೀತಕ್ಕೆಂದೇ ಬಂದಿರುತ್ತಾರೆ. “ಟೈಸನ್‌’, “ಕರ್ವ’ ಚಿತ್ರಗಳ ಕೊನೆಯ ಹಂತಕ್ಕೆ ನನ್ನ ಬಳಿ ಚಿತ್ರತಂಡದವರು ಬಂದರು. ಮಿಕ್ಕಂತೆ “ಬೀಟ್‌’, “ಮೃಗಶಿರ’, “ರಿಂಗ್‌ ಮಾಸ್ಟರ್‌’ ಚಿತ್ರಕ್ಕೆ ಹಾಡುಗಳನ್ನು ಮಾಡಿದ್ದೀನಿ. ನಾನು ಸಂಗೀತ ಸಂಯೋಜಿಸಿರುವ ಹಾಡುಗಳ ಸಂಖ್ಯೆ ಕಡಿಮೆ ಇರಬಹುದು. ಆದರೆ, ಹಾಡುಗಳನ್ನೂ ಕೊಟ್ಟಿದ್ದೀನಿ’ ಎಂಬ ಉತ್ತರ ಬರುತ್ತದೆ ಅವರಿಂದ.

Advertisement

ಎ ಟು ಝೆಡ್‌ ಕಲಿಯದೆ ಪ್ರಯತ್ನಿಸಬಾರದು
ಇನ್ನು ಸಂಗೀತ ನಿರ್ದೇಶಕರಾಗಿದ್ದವರು ನಾಯಕ-ನಿರ್ದೇಶಕ ಎಲ್ಲಾ ಆಗಿದ್ದು ಕಡಿಮೆಯೇ. ರವಿ ಆಗಿದ್ದು ಹೇಗೆ ಎಂದರೆ ಹಸಿವು ಎಂಬ ಉತ್ತರ ಅವರಿಂದ ಬರುತ್ತದೆ. “ಒಳಗೆ ಹಸಿವೊಂದು ಇದ್ದರೆ ನಾವು ಏನು ಬೇಕಾದರೂ ಮಾಡಬಹುದು. ಬಹಳಷ್ಟು ಬಾರಿ ನಾವು ತೊಡಗಿಸಿಕೊಳ್ಳುವುದಿಲ್ಲ ಅಥವಾ ಪ್ರಯತ್ನ ಮಾಡುವುದಿಲ್ಲ. ಐದು ವರ್ಷಗಳ ಹಿಂದೆ ಒಂದು ಶಾರ್ಟ್‌ ಮೂವಿ ಮಾಡಬೇಕು ಎಂಬ ಆಸೆಯಿಂದ, ಒಂದು ಕಿರುಚಿತ್ರ ಮಾಡಿದೆ. ಅದರ ನಿರ್ಮಾಪಕ ನಾನು. ಸುಮಾರು 22 ದಿನಗಳ ಚಿತ್ರೀಕರಣವೂ ಆಗಿತ್ತು. ಚಿತ್ರತಂಡದವರಿಗೆ ಟೀ ತಂದುಕೊಡಲಿಕ್ಕೆ, ಮಧ್ಯಾಹ್ನ ಊಟ ವ್ಯವಸ್ಥೆ ಮಾಡೋಕೆ ಸೀಮಿತವಾಗಿಬಿಟ್ಟೆ. ನಾನು ಏನು ಕಲಿಯಬೇಕು ಎಂದು ಹೊರಟೆನೋ ಅದು ಆಗಲೇ ಇಲ್ಲ. ಏನೋ ಮಾಡೋಕೆ ಹೋಗಿ, ಇನ್ನೇನೋ ಮಾಡಿದೆ ಅಂತನಿಸಿತು. ಆಗಲೇ ನಿರ್ಧಾರ ಮಾಡಿದೆ. ಯಾವುದೇ ಕ್ಷೇತ್ರಕ್ಕೆ ಹೋದರೂ ಅದರ ಎ ಟು ಝೆಡ್‌ ಕಲಿಯದೆ ಪ್ರಯತ್ನ ಮಾಡಬಾರದು ಅಂತ. ಅಲ್ಲಿಂದ ಶುರುವಾಯಿತು. ಛಾಯಾಗ್ರಹಣ ಕೋರ್ಸ್‌ ಮಾಡಿದೆ, ಲೈಟಿಂಗ್‌ ಕೋರ್ಸ್‌ ಮಾಡಿದೆ. ಎಲ್ಲಾ ಆನ್‌ಲೈನ್‌ ಮೂಲಕವೇ. ಎರಡು ವರ್ಷದ ಯಾವ ಸುದ್ದಿಗೂ ಹೋಗಲಿಲ್ಲ. ಫ‌ುಲ್‌ ಕಲಿತೆ. ಆ ಅನುಭವ ನನ್ನ ಸಹಾಯಕ್ಕೆ ನಂತರ ಬಂತು. ನಿಜ ಹೇಳಬೇಕೆಂದರೆ, “ಗರ್‌ಗರ್‌ ಮಂಡ್ಲ’ ಮತ್ತು “ಬಿಲಿಂಡರ್‌’ ಸಿನಿಮಾಗಳನ್ನು ಪರಿಪೂರ್ಣವಾಗಿ ಮಾಡಿದ್ದ ನಾನೇ. ಎಲ್ಲಾ ವಿಷಯದಲ್ಲೂ ಯಾರನ್ನೂ ಕಾಯದೇ ಎರಡ ಸಿನಿಮಾ ಮಾಡೋದಕ್ಕೆ ಆಯ್ತು. ಮ್ಯೂಸಿಕ್‌, ಡಬ್ಬಿಂಗ್‌, ಎಡಿಟಿಂಗ್‌ ಎಲ್ಲವೂ ನನ್ನದೇ. ಅವು ಲೋ ಬಜೆಟ್‌ ಸಿನಿಮಾಗಳಿರಬಹುದು. ಜನಕ್ಕೆ ತಲುಪುವಂತೆ ಮಾಡಿದ್ದೀನಿ’ ಎಂದು ಖುಷಿಯಾಗುತ್ತಾರೆ ಅವರು.

ಹಸಿವು ಎಲ್ಲವನ್ನೂ ಕಲಿಸತ್ತೆ
ಇದಕ್ಕೆಲ್ಲಾ ಕಾರಣವಾಗಿದ್ದು ಹಸಿವು ಎಂಬುದು ಅವರ ಅಭಿಪ್ರಾಯ. “ಹಸಿವು ಎಲ್ಲವನ್ನೂ ಕಲಿಸತ್ತೆ. ನಾನು ಊರಲ್ಲಿದ್ದಾಗ ತಬಲಾ ಕಲಿಯಬೇಕು ಅಂತ ಬಹಳ ಆಸೆ ಇತ್ತು. ಆದರೆ, ಅನುಕೂಲ ಇರಲಿಲ್ಲ. ನನ್ನ ಸಂಬಂಧಿಕನೊಬ್ಬ ತಬಲಾ ಕ್ಲಾಸ್‌ಗೆ ಕುಂದಾಪುರಕ್ಕೆ ಹೋಗುತ್ತಿದ್ದ. ಅವನ ಜೊತೆಗೆ ನಾನೂ ಹೋಗುತ್ತಿದ್ದೆ. ಅವನಿಗೆ ಆಸಕ್ತಿ ಇಲ್ಲ. ನಾನು ಕಿಟಕಿಲಿ ನೋಡಿ, ಮನೆಗೆ ಬಂದು ಮಣೆಯ ಮೇಲೆ ಪ್ರಾಕ್ಟೀಸ್‌ ಮಾಡ್ತಿದ್ದೆ. ಹಸಿವು ಇತ್ತು. ಆದರೆ, ಅವಕಾಶ ಇರಲಿಲ್ಲ. ಅದೇ ರೀತಿ, ಭಜನೆ ಮಾಡೋಕೆ ಹೋದಾಗ, ಹಾರ್ಮೋನಿಯಂ ಮುಟ್ಟೋಕೆ ಹೋದರೆ ಬಯ್ಯುತ್ತಿದ್ದರು. ಆಸಕ್ತಿ ಇರೋನಿಗೆ ಏನೂ ಸಿಕ್ಕಿಲ್ಲ ಎಂದರೆ ಹುಡುಕಿಕೊಂಡು ಹೋಗ್ತಾನೆ. ಏನು ಮಾಡೋಕೆ ಆಗಲಿಲ್ಲವೋ, ಅವೆಲ್ಲಾ ಮಾಡಬೇಕು ಅಂತ ಬಯಸುತ್ತಾನೆ. ಅದು ನನ್ನ ಜೀವನದಲ್ಲೂ ಆಗಿದೆ. ನನಗೆ ಬಾಲ್ಯದಲ್ಲಿ ಏನೇನು ಸಾಧ್ಯವಾಗಲಿಲ್ಲವೋ, ಅದನ್ನು ಈಗ ಮಾಡುತ್ತಿದ್ದೀನಿ. ಸಿನಿಮಾ ಮಾಡಿದ್ದು ಸಹ ಅದೇ ರೀತಿ’ ಎಂಬುದು ಅವರ ಅಭಿಪ್ರಾಯ.

ಕನ್ನಡವೇ ಕಳೆದುಹೋಗುವಂತಹ ಪರಿಸ್ಥಿತಿ
ರವಿ ಬಸ್ರೂರುಗೆ ಕುಂದಗನ್ನಡದಲ್ಲಿ ಸಿನಿಮಾ ಮಾಡಿದ್ದಕ್ಕೂ ಒಂದು ಪ್ರಮುಖ ಕಾರಣವಿದೆ. ಆ ಕಾರಣ ಕೇಳಿದರೆ, ನಿಮಗೆ ಖುಷಿಯಾಗುತ್ತದೆ. “ಹಿಂದೊಮ್ಮೆ ಭಾರತದಲ್ಲಿ 1857 ಭಾಷೆ ಇತ್ತು. ಈಗ 900ಕ್ಕೆ ಇಳಿದಿದೆ. ಅದಕ್ಕೆ ಕಾರಣ ಬಳಕೆ ಇಲ್ಲದಿರುವುದು. ಆ ಲಿಸ್ಟ್‌ಗೆ ನಮ್ಮ ಭಾಷೆ ಸೇರಿಸುವುದು ನನಗೆ ಇಷ್ಟಲ್ಲ. ಇವತ್ತು 85 ಪರ್ಸೆಂಟ್‌ ಇಂಗ್ಲೀಷ್‌ ಆಗಿದೆ. ಅದರ ಮಧ್ಯೆ ಕನ್ನಡವೇ ಕಳೆದುಹೋಗುವಂತಹ ಪರಿಸ್ಥಿತಿ ಇದೆ. ಅದರಲ್ಲೂ ಕುಂದಾಪುರ ಕನ್ನಡ ಬಹಳ ಸೀಮಿತವಾಗುತ್ತಿದೆ. ಹಾಗಾಗಿಯೇ ನಾನು ನಾನು ಕುಂದಾಪ್ರ ಕನ್ನಡದಲ್ಲಿ ಸಿನಿಮಾ ಮಾಡಿದ್ದೀನಿ. ಮಾಡಿದ ಎರಡು ಸಿನಿಮಾಗಳಲ್ಲೂ ಕಳೆದುಕೊಂಡೆ. ಆದರೂ ಮಾಡುತ್ತೀನಿ. ಉದ್ದೇಶ ಇಷ್ಟೇ. ಅರ್ಥವಾಗದಿರುವುದಕ್ಕೆ ಅದೇನು ತೆಲುಗು, ತುಳು, ಇಂಗ್ಲೀಷ್‌ ಅಲ್ಲ. ಅದು ಕನ್ನಡದ ಸೋದರ ಭಾಷೆ. ಅದನ್ನು ನಿಲ್ಲಿಸಬೇಕು ಅಂತಾಸೆ. ಬರೀ ಕುಂದಾಪ್ರ ಕನ್ನಡವಷ್ಟೇ ಅಲ್ಲ, ಹುಬ್ಬಳ್ಳಿ, ಮಂಡ್ಯ, ಮಂಗಳೂರುಗೆ ಬೇರೆ ಬೇರೆ ಸ್ಲಾಂಗ್‌ಗಳಿವೆ. ಅವೆಲ್ಲಾ ಕರ್ನಾಟಕದ ಭಾಷೆ. ಬರೀ ಬೆಂಗಳೂರು ಕನ್ನಡದ ಸಿನಿಮಾ ಬಂದರೆ ಸಾಲದು. ಸಮ್ಮಿಶ್ರ ಆಗಬೇಕು. ಹಾಗಾದಾಗ ನಮ್ಮ ಭಾಷೆ ಎಲ್ಲರಿಗೂ ತಲುಪುತ್ತದೆ ಮತ್ತು ನಮ್ಮ ಇಗೋ ಸಹ ತಣಿಯುತ್ತದೆ. ಇಲ್ಲದಿದ್ದರೆ, ಕುಂದಾಪುರ ಕನ್ನಡ ಕಂಡರೆ ಇಲ್ಲಿ ಒಂಥರಾ ಮಾಡೋದು, ಇಲ್ಲಿಯ ಭಾಷೆಯ ಬಗ್ಗೆ ಅಲ್ಲಿಯವರು ಮಾತನಾಡುವುದು ಮುಂದುವರೆಯುತ್ತದೆ’ ಎನ್ನುತ್ತಾರೆ ಅವರು.

ಏನೇನು ಸಾಧ್ಯವೋ ಅವೆಲ್ಲಾ ಮಾಡುವ ಆಸೆ
ಸರಿ ಸಂಗೀತ ನಿರ್ದೇಶಕ, ನಾಯಕ, ನಿರ್ದೇಶಕ, ನಿರ್ಮಾಪಕ, ಸಂಕಲನಕಾರ ಎಲ್ಲವೂ ಆಗಿದ್ದಾಯಿತು. ಮುಂದೇನು ಎಂದರೆ, ಇನ್ನೂ ಏನೇನು ಸಾಧ್ಯವೋ ಅವೆಲ್ಲಾ ಮಾಡಬೇಕು ಎನ್ನುತ್ತಾರೆ ಅವರು. “ಜೀವನದಲ್ಲಿ ನನ್ನ ಅಚೀವ್‌ಮೆಂಟ್‌ ಆಯ್ತು. ಇನ್ನು ಜೀವನ ಮುಗಿಯುವುದರೊಳಗೆ ಏನೇನು ಸಾಧ್ಯವೋ ಅವೆಲ್ಲಾ ಮಾಡುವ ಆಸೆ ಇದೆ. ಹೊಟ್ಟೆ ಪಾಡಿಗೆ ಸಮಸ್ಯೆ ಇಲ್ಲ. ಮೂರು ಚಿತ್ರರಂಗಗಳಿಗೆ ಕೆಲಸ ಮಾಡುತ್ತಿದ್ದೀನಿ. ಹಳ್ಳಿಯಿಂದ ಬಂದ ನಾನು, ಇಲ್ಲಿ ಜನರ ಮೆಚ್ಚುಗೆ ಪಡೆದಿದ್ದೀನಿ. ಈ ಮಟ್ಟಕ್ಕೆ ನಡೆದು ಬಂದಿರುವುದಕ್ಕೆ ತುಂಬಾ ಸಂತೋಷವಿದೆ. ನಾನು ತುಂಬಿ, ಹರಿದದ್ದನ್ನ ಕೊಡ್ತೀನಿ. ಹಿಂದೊಮ್ಮೆ ನಾನು ಅವಕಾಶ ಕೇಳಿ ಕೇಳಿ ಬೇಸತ್ತಿದ್ದೆ. ಉಪೇಂದ್ರ ಹತ್ತಿರ ಸೇರಿಸುತ್ತೀನಿ ಅಂತ ಹೇಳಿದವರಿಗೆ 15 ಸಾವಿರ ಕೊಟ್ಟು ಕಳೆದುಕೊಂಡೆ. ಬೇರೆಯವರಿಗೆ ಆ ತೊಂದರೆ ಆಗಬಾರದು. ನಮ್ಮ ಕೈಲಿ ಏನು ಸಾಧ್ಯವೋ ಅವೆಲ್ಲವನ್ನೂ ಮಾಡಬೇಕು. ನಮ್ಮ ಜೀವನ ಇನ್ನೊಬ್ಬರಿಗೆ ಇನ್‌ಸ್ಪೆçರ್‌ ಮಾಡಬೇಕು. ನಾಲ್ಕು ಜನ ಬದಲಾದರೆ ಜೀವನ ಸಾರ್ಥಕ. ಚಿತ್ರರಂಗದಲ್ಲಿ ಸ್ಟ್ರಗಲ್‌ ಮಾಡೋರಿಗೆ ಸಹಾಯ ಮಾಡಬೇಕು. ಒಂದು ವೇದಿಕೆ ಕಲ್ಪಿಸಬೇಕು ಅಂತ. ನನಗೆ 16 ಸಾವಿರ ಜನ ಫೇಸ್‌ಬುಕ್‌ ಫ್ಯಾನ್ಸ್‌ ಇದ್ದಾರೆ. ಅವರಲ್ಲಿ ಬಹಳಷ್ಟು ಜನರಿಗೆ ಚಿತ್ರರಂಗಕ್ಕೆ ಬರಬೇಕು ಅಂತಾಸೆ. ಅವರಿಗೆ ಏನಾದರೂ ಮಾಡಬೇಕು. ನಾವು ಬಂದಾಗಿದ್ದ ಕಷ್ಟ ಈಗಿಲ್ಲ. ಹಾಗಾಗಿ ಅವರಿಗೆ ಏನಾದರೂ ದಿಕ್ಕು ತೋರಿಸುವ ಕೆಲಸ ಮಾಡಬೇಕು. ಗೀತರಚನೆಕಾರರು, ಕಥೆಗಾರರು ಎಲ್ಲರದ್ದೂ ಟೀಮ್‌ ಮಾಡಿ ನಾನು ನಿರ್ಮಾಣ ಮಾಡ್ತೀನಿ. ಉದ್ದೇಶ ಇಷ್ಟೆ. ನಾನು ಯಾರು ಅಂತಲೇ ಗೊತ್ತಿರಲಿಲ್ಲ. ನನ್ನನ್ನ ಗುರುತಿಸಿ ಕನ್ನಡದ ಜನ ಈ ಲೆವೆಲ್‌ಗೆ ತಂದಿದ್ದಾರೆ. ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಜನ ಖಂಡಿತಾ ಗುರುತಿಸುತ್ತಾರೆ. ಸ್ವಲ್ಪ ಲೇಟ್‌ ಆಗಬಹುದು, ನನಗೆ 14 ವರ್ಷ ಬೇಕಾಯಿತು. ಪ್ರತಿಭೆ ಇದ್ದರೆ ಖಂಡಿತಾ ನಿಲ್ಲುತ್ತಾರೆ’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ರವಿ ಬಸ್ರೂರು.

“ಉಗ್ರಂ’ ನಂತರ 20 ಸಿನಿಮಾಗಳ ರಿಜೆಕ್ಟ್!
ಸಂಗೀತ ನಿರ್ದೇಶನದ ವಿಷಯಕ್ಕೆ ಬಂದರೆ, ರವಿ ಬಸ್ರೂರು ಬಹಳ ಚ್ಯೂಸಿಯಂತೆ. “ಕೈಯಲ್ಲಿ ಎರಡೇ ಎರಡು ಸಿನಿಮಾ ಇದೆ. ನಾನು ಸ್ವಲ್ಪ ಚ್ಯೂಸಿ. ಇವತ್ತು ಸಹ ಒಂದು ಚಿತ್ರವನ್ನ ರಿಜೆಕ್ಟ್ ಮಾಡಿದೆ. ಒಂದು ಸಿನಿಮಾಗೆ ನನ್ನ ಅವಶ್ಯಕತೆ ಇರಬೇಕು. ಇಲ್ಲ ನನಗೆ ಆ ಸಿನಿಮಾದ ಅವಶ್ಯಕತೆ ಇರಬೇಕು. ಎರಡೂ ಇಲ್ಲ ಎಂದರೆ ಪ್ರಯೋಜನವಿಲ್ಲ. ಅದರಿಂದ ಅಲ್ಟಿಮೇಟಿ ಹೆಸರು ಹಾಳು. ಹಾಗಾಗಿ ಇಷ್ಟವಾದ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. “ಉಗ್ರಂ’ ನಂತರ 20 ಸಿನಿಮಾಗಳನ್ನ ತಿರಸ್ಕರಿಸಿದ್ದೇನೆ. ಹೊಟ್ಟೆಪಾಡಿಗೆ ಯಾವುದೇ ಸಮಸ್ಯೆ ಇಲ್ಲ. ಸರಸ್ವತಿ ಕೊಟ್ಟಿದು, ವೇಸ್ಟ್‌ ಮಾಡೋಕೆ ಇಷ್ಟ ಇಲ್ಲ. ಹೆಸರು ಕಳೆದುಕೊಳ್ಳೋಕೆ ಇಷ್ಟ ಇಲ್ಲ. ಹಾಗಾಗಿ ಎಲ್ಲವನ್ನೂ ಒಪ್ಪುವುದಿಲ್ಲ. ಯಶ್‌ ಮತ್ತು ಮುರಳಿ ಅವರ ಚಿತ್ರ ಮಾಡುತ್ತಿದ್ದೀನಿ. ಜೊತೆಗೆ ಈಗಲೂ ಪ್ರೋಗ್ರಾಮಿಂಗ್‌ ಕೆಲಸ ನಡೆಯುತ್ತಲೇ ಇದೆ’ ಎನ್ನುತ್ತಾರೆ ಅವರು.

ಬರಹ: ಚೇತನ್‌ ನಾಡಿಗೇರ್‌, ಚಿತ್ರಗಳು: ಮನು

Advertisement

Udayavani is now on Telegram. Click here to join our channel and stay updated with the latest news.

Next