Advertisement

ಹಸಿವು ಮುಕ್ತ ಸಮಾಜದ ಹರಿಕಾರ ಅರಸು: ಆಸ್ಕರ್‌  

11:58 AM Mar 01, 2017 | Team Udayavani |

ಬಂಟ್ವಾಳ: ಉಳುವವನೇ ಹೊಲದೊಡೆಯ ಎಂಬ ಧ್ಯೇಯದೊಂದಿಗೆ ಭೂಮಸೂದೆ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದವರು ದಿ| ದೇವರಾಜ ಅರಸು. ಇದು ಹಸಿರು ಕ್ರಾಂತಿಗೆ, ಹಸಿವು ಮುಕ್ತ ಸಮಾಜ ನಿರ್ಮಾಣಕ್ಕೆ ಕಾರಣವಾಗಿತ್ತು. ಈ ಜಿಲ್ಲೆಯಲ್ಲಿ ಭೂಮಿಯ ಒಡೆತನ ಹೊಂದಿರುವ ಹಿರಿಯರು ಯುವಜನತೆಗೆ ಇಂತಹ ಇತಿಹಾಸ ತಿಳಿಸಿದಾಗ ಮಾತ್ರ ಸಾಮಾಜಿಕ ಸೌಹಾರ್ದ ಕಂಡುಕೊಳ್ಳಲು ಸಾಧ್ಯ ಎಂದು ಕೇಂದ್ರ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಹೇಳಿದ್ದಾರೆ.

Advertisement

ಅವರು ಮಂಗಳವಾರ ಬಂಟ್ವಾಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಭಾಂಗಣದಲ್ಲಿ ನಡೆದ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರಿಗೆ ಸಮ್ಮಾನ ಮತ್ತು ಮದರ್‌ ತೆರೆಸಾ “ಸಂತ’ ಪದವಿ ಪ್ರಾಪ್ತಿ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದೇಶದಲ್ಲಿ ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿ ತನ್ನ ಆಡಳಿತಾವಧಿಯಲ್ಲಿ ಕೈಗೊಂಡಿದ್ದ 20 ಅಂಶ ಕಾರ್ಯಕ್ರಮದಡಿ ಅರಸು ಇಂತಹ ಕ್ರಾಂತಿಕಾರಿ ಕೆಲಸ ಮಾಡಿ ಜನಸಾಮಾನ್ಯರನ್ನು ಭೂಮಿಯ ಒಡೆಯರನ್ನಾಗಿ ಮಾಡಿದರು. ಬ್ಯಾಂಕ್‌ ರಾಷ್ಟ್ರೀಕರಣ ಮತ್ತು ಭೂಮಸೂದೆ ಕಾಯ್ದೆ ಸಮಾಜದಲ್ಲಿ ರಕ್ತರಹಿತ ಕ್ರಾಂತಿಗೆ ಕಾರಣವಾಯಿತು ಭದ್ರ ತಾತ್ವಿಕ ಸಿದ್ಧಾಂತದ ನೆಲೆಯಲ್ಲಿ ಸಮಾಜ ಪರಿವರ್ತನೆ ಕಂಡಿತು ಎಂದರು.

ಹಸಿವು ಮುಕ್ತ ಸಮಾಜ
ಅಂದು ಇಂದಿರಾ ಗಾಂಧಿ ಅವರು ಶಿಕ್ಷಣ ಕಡ್ಡಾಯಗೊಳಿಸಿದ ಮಾದರಿ ಯಲ್ಲಿ ಕಳೆದ ಯುಪಿಎ ಆಡಳಿತಾವಧಿಯಲ್ಲಿ ಸೋನಿಯಾ ಗಾಂಧಿ “ಉದ್ಯೋಗ ಖಾತರಿ’ ಯೋಜನೆ ಮೂಲಕ ಜನತೆಗೆ ಧೈರ್ಯ ತುಂಬಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿವು ಮುಕ್ತ ಸಮಾಜ ನಿರ್ಮಿಸಲು “ಅನ್ನಭಾಗ್ಯ’ ಯೋಜನೆ ಅನುಷ್ಠಾನಗೊಳಿಸಿದರು ಎಂದು ವಿವರಿಸಿದರು.

Advertisement

ಸಮ್ಮಾನ
ಇದೇ ಸಂದರ್ಭ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ ಮತ್ತು ಬಿ.ಎ. ಮೊದಿನ್‌, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ ಅಮೀನ್‌ ಮಟ್ಟು ಅವರನ್ನು ಸಮ್ಮಾನಿಸಲಾಯಿತು.
ಸಾಹಿತಿ, ಸಂಶೋಧಕ ಮುದ್ದು ಮೂಡುಬೆಳ್ಳೆ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ| ಸದಾನಂದ ಪೆರ್ಲ, ಮುಸ್ಲಿಂ ಲೇಖಕರ ಸಂಘದ ಉಪಾಧ್ಯಕ್ಷ ಮಹಮ್ಮದ್‌ ಆಲಿ ಸಮ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು.

ರೈ ಮಾದರಿ: ಶಂಕರ್‌
ಕೆಪಿಸಿಸಿ ಉಪಾಧ್ಯಕ್ಷ ಡಾ| ಬಿ.ಎಲ್‌. ಶಂಕರ್‌ ಮಾತನಾಡಿ, ಇತಿಹಾಸ ಮರೆತವರಿಂದ ಇತಿಹಾಸ ಸೃಷ್ಟಿ ಅಸಾಧ್ಯ. ಜಿಲ್ಲೆಯನ್ನು ಕೋಮು ನೆಲೆಯಿಂದ ಸಾಮರಸ್ಯದ ಪ್ರಯೋಗಶಾಲೆಯನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿರುವ ಸಚಿವ ರಮಾನಾಥ ರೈ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಆಹಾರ ಸಚಿವ ಯು.ಟಿ. ಖಾದರ್‌, ಮಾಜಿ ಸಚಿವ, ಶಾಸಕ ಕೆ. ಅಭಯಚಂದ್ರ ಜೈನ್‌, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ, ವಿಧಾನಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಶಾಸಕ ಜೆ.ಆರ್‌. ಲೋಬೊ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್‌. ಖಾದರ್‌, ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ನಿರ್ದೇಶಕ ಡಾ| ರಘು, ಜಿಲ್ಲಾ ಕಾಂಗ್ರೆಸ್‌ ಸಮಿತಿ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹಮ್ಮದ್‌ ಹನೀಫ್‌, ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಎ. ಗಫ‌ೂರ್‌, 
ಬ್ಲೋಸಂ ಆಸ್ಕರ್‌ ಫೆರ್ನಾಂಡಿಸ್‌, ಬಂಟ್ವಾಳ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್‌, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್‌ ಶೆಟ್ಟಿ, ಬಿ. ಪದ್ಮಶೇಖರ ಜೈನ್‌, ಎಂ.ಎಸ್‌. ಮಹಮ್ಮದ್‌, ಮಮತಾ ಗಟ್ಟಿ, ಮಂಜುಳಾ ಮಾವೆ, ಸಾವುಲ್‌ ಹಮೀದ್‌, ಹಿರಿಯರಾದ ಎ.ಸಿ. ಭಂಡಾರಿ, ಎಪಿಎಂಸಿ ಅಧ್ಯಕ್ಷ ಕೆ. ಪದ್ಮನಾಭ ರೈ ಮತ್ತಿತರರು ಇದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸ್ವಾಗತಿಸಿ ಪ್ರಸ್ತಾವನೆ ನೀಡಿದರು. ಜಿಲ್ಲೆಯಲ್ಲಿ ಭೂಮಸೂದೆ ಕಾಯ್ದೆ ಮತ್ತು ಶೈಕ್ಷಣಿಕ ಮೀಸಲಾತಿ ಮೂಲಕ ಸ್ವಾಭಿಮಾನದ ಬದುಕು ರೂಪಿಸಿಕೊಂಡ ಜನತೆಗೆ ಇತಿಹಾಸ ನೆನಪಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಪಾಣೆಮಂಗಳೂರು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಬ್ಟಾಸ್‌ ಆಲಿ ವಂದಿಸಿದರು. ಶಿಕ್ಷಕ ಬಿ. ರಾಮಚಂದ್ರ ರಾವ್‌, ಬಾಲಕೃಷ್ಣ ಆಳ್ವ ಕೊಡಾಜೆ, ರವಿ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next