Advertisement

Bengaluru: ಸೊಸೈಟಿ ಮಹಾಮಂಡಲದಲ್ಲಿ 19.3 ಕೋಟಿ ಅಕ್ರಮ

11:59 AM Oct 19, 2024 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಕೋ-ಆಪರೇಟಿವ್‌ ಸೊಸೈಟಿ ಮಹಾಮಂಡಲ ನಿಯಮಿತದ 19.34 ಕೋಟಿ ರೂ. ದುರುಪಯೋಗಪಡಿಸಿಕೊಂಡ ಆರೋಪದಡಿ ಸೊಸೈಟಿಯ ಉಸ್ತುವಾರಿ ಸಿಇಒ ಸೇರಿ 6 ಮಂದಿ ವಿರುದ್ಧ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

ನಂದಿನಿ ಲೇಔಟ್‌ನಲ್ಲಿರುವ ಕರ್ನಾಟಕ ರಾಜ್ಯ ಕೋ-ಆಪರೇಟಿವ್‌ ಸೊಸೈಟಿ ಮಹಾಮಂಡಲ ನಿ. ಅಧ್ಯಕ್ಷ ವಿ.ರಾಜು ನೀಡಿದ ದೂರಿನ ಆಧಾರದ ಮೇಲೆ ಸೊಸೈಟಿಯ ಉಸ್ತುವಾರಿ ಸಿಇಒ ಪಿ.ಆಶಾಲತಾ, ಆಕೆಯ ಪತಿ ಸೋಮಶೇಖರ್‌, ವಿಜಯ್‌ ಕಿರಣ್‌, ಜೆ. ಮಂಜು ನಾಥ್‌, ಸುಜಯ್‌, ಬಿಡಿಸಿಸಿ ಹಾಗೂ ಅಪೆಕ್ಸ್‌ ಬ್ಯಾಂಕ್‌ ಮ್ಯಾನೇಜರ್‌ಗಳು, ಕೆಎಸ್‌ಸಿಸಿಎಸ್‌ಎಫ್ ಆಡಿಟರ್‌ಗಳ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ಸೊಸೈಟಿ ಮಹಾಮಂಡಲದಲ್ಲಿ 2015 ಜ.5ರಂದು ಎಫ್ಡಿಎ ಹಾಗೂ ಅಕೌಂಟೆಂಟ್‌ ಆಗಿ ಆರೋಪಿ ಆಶಾಲತಾ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. 2018ರ ಮೇ 31ರಂದು ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಇವರನ್ನು ಉಸ್ತುವಾರಿ ಸಿಇಒ ಆಗಿ ನೇಮಕ ಮಾಡಲಾಗಿತ್ತು. ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳು ಇವರ ವಶದಲ್ಲಿಯೇ ಇದ್ದು ಲೆಕ್ಕಪರಿಶೋಧಕರಿಗೆ ಲೆಕ್ಕ ಪತ್ರ ಒದಗಿಸುತ್ತಿದ್ದರು.

ಕಳೆದ ಅ.9ರಂದು ಸಹಕಾರ ಸಚಿವರು ನಡೆಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಆಶಾಲತಾ ಅವರು ಸೊಸೈಟಿಯ ಹಣವನ್ನು ಅಪೆಕ್ಸ್‌ ಸಹಕಾರ ಬ್ಯಾಂಕ್‌, ಬಿಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಮಾಡಿರುವುದಾಗಿ ತಿಳಿಸಿದ್ದರು. ಸಭೆಯಲ್ಲಿ ಬಿಡಿಸಿಸಿ ಬ್ಯಾಂಕ್‌ ಎಂ.ಡಿ.ಯು ಬಿಡಿಸಿಸಿ ಬ್ಯಾಂಕ್‌ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲ ನಿಯಮಿತದಿಂದ ಯಾವುದೇ ಠೇವಣಿಯನ್ನು ಮಾಡಿಲ್ಲ ಎಂದು ತಿಳಿಸಿದ್ದರು. ನಂತರ ಆಶಾಲತಾ ಠೇವಣಿಯನ್ನಿಟ್ಟಿರುತ್ತೇವೆ ಎಂದು ಇದಕ್ಕೆ ಸಂಬಂಧಿಸ ಪಾಸ್‌ಬುಕ್‌ಗಳು ಮನೆಯಲ್ಲಿರುತ್ತವೆ ಎಂದು ತಿಳಿಸಿದ್ದರು.ನಂತರ ನನ್ನ ಗಂಡ ಮನೆಯ ಬೀಗ ಹಾಕಿಕೊಂಡು ಹೋಗಿರುತ್ತಾರೆ ಹಾಗೂ ಸಿಬ್ಬಂದಿ ರಜೆಯಲ್ಲಿರುವುದರಿಂದ ಸೋಮವಾರ ಕಚೇರಿಯಲ್ಲಿ ಇತ್ಯರ್ಥ ಪಡಿಸುತ್ತಾರೆ ಎಂದು ತಿಳಿಸಿದ್ದರು.

ಇದಾದ ಬಳಿಕ ಬ್ಯಾಂಕ್‌ನಲ್ಲಿದ್ದ 111 ಪಿಕೆಟ್‌ ಡೆಪಾಸಿಟ್‌ ಖಾತೆಗಳ ಒಟ್ಟು 19.34 ಕೋಟಿ ರೂ. ನಕಲಿ ಠೇವಣಿ ಬಾಂಡ್‌ಗಳಿತ್ತು. ಕೆಲವು ನಿಶ್ಚಿತ ಠೇವಣಿಗಳನ್ನು ಆಶಾಲತಾ ಅವರೇ ಬರೆದಿದ್ದು ಬ್ಯಾಂಕ್‌ ದೃಢೀಕರಣ ಪತ್ರಗಳನ್ನು ಅವರೇ ಖುದ್ದಾಗಿ ತಂದಿದ್ದು ಲೆಕ್ಕ ಪರಿಶೋಧಕರಿಗೂ ನಕಲಿ ಪ್ರಮಾಣಪತ್ರ ನೀಡಿದ್ದಾರೆ. 2017ರಿಂದ ಬ್ಯಾಂಕಿನ ಸ್ಥಿರ ಠೇವಣಿಗಳ ಹಣವನ್ನು ತಮ್ಮ ಪತಿ ಸೋಮಶೇಖರ್‌, ವಿಜಯ್‌ ಕಿರಣ್, ಜೆ.ಮಂಜುನಾಥ್‌, ಸುಜಯ್‌ ಅವರಿಗೆ ವರ್ಗಾವಣೆ ಮಾಡಿದ್ದಾರೆ. ‌

Advertisement

2017ರಿಂದ 2023ರವರೆಗೆ ಮೂಲ ಸ್ಥಿರ ಠೇವಣಿ ವರ್ಗಾಯಿಸುವಾಗ ಅಧ್ಯಕ್ಷರ ನಕಲಿ ಸಹಿ ಹಾಕಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇದಲ್ಲದೇ ಮೂಲ ಎಫ್.ಡಿ. ಬಾಂಡ್‌ಗಳನ್ನು ಸಲ್ಲಿಸು ವಾಗ ಕವರ್‌ ಲೆಟರ್‌ಗಳನ್ನು ಸಹಕಾರ ಪೆಢರೇಷನ್‌ ನಲ್ಲಿ ಇಡಬೇಕಾಗಿದ್ದು ಇದರಲ್ಲಿ ಅಧ್ಯಕ್ಷರು ಮತ್ತು ಸಿಇಒ ಇಬ್ಬರು ಸಹಿ ಮಾಡಬೇಕಾಗುತ್ತದೆ. ಆದರೆ ಸಿಇಒ ಒಬ್ಬರೇ ಸಹಿ ಮಾಡಿ ಎಫ್.ಡಿ. ಮೊತ್ತವನ್ನು ಆಶಾಲತಾ ಅವರ ಪತಿಯ ವೈಯಕ್ತಿಕ ಖಾತೆಗೆ ಹಾಗೂ ವಿಜಯ್‌ ಕಿರಣ್, ಸುಜಯ್, ಮಂಜುನಾಥ್‌ ಖಾತೆಗೆ ವರ್ಗಾಯಿಸಿದ್ದರು ಎಂದು ಎಫ್ಐಆರ್‌ನಲ್ಲಿ ಉಲ್ಲೇಖೀಸಲಾಗಿದೆ. ‌

ಸಿಇಒ ಆಶಾಲತಾ ಜೊತೆ ಬ್ಯಾಂಕಿನವರು ಶಾಮಿಲು

ವಾಸ್ತವವಾಗಿ ಆರ್‌ಟಿಜಿಎಸ್‌ ಫಾರಂನಲ್ಲಿ ಅಧ್ಯಕ್ಷರು, ಸಿಇಒ ಇಬ್ಬರ ಸಹಿ ಇರಬೇಕಾಗಿದ್ದು, ಬ್ಯಾಂಕಿನವರು ಆಶಾಲತಾ ಅವರೊಂದಿಗೆ ಶಾಮೀಲಾಗಿ ಅಧ್ಯಕ್ಷರ ಸಹಿಯನ್ನು ಪಡೆಯದೆ ಹಣವನ್ನು ವರ್ಗಾಯಿಸಿದ್ದಾರೆ. ಇಲ್ಲಿಯವರೆಗೆ ಬ್ಯಾಂಕಿನವರು ಅಧ್ಯಕ್ಷರಿಗೆ, ನಿರ್ದೇಶಕರಿಗೆ ಹಾಗೂ ಪದಾಧಿಕಾರಿಗಳಿಗೆ ಹಣದ ವ್ಯವಹಾರದ ಬಗ್ಗೆ ಯಾವುದೇ ಮಾಹಿತಿ ತಿಳಿಸದೆ ಇನ್‌ ಚಾರ್ಜ್‌ ಸಿಇಒ ಆಶಾಲತಾ ಜೊತೆ ಬ್ಯಾಂಕಿನವರು ಶಾಮಿಲಾಗಿದ್ದಾರೆ. ಈ ವಿಚಾರವು ಬ್ಯಾಂಕಿನಿಂದ ದೃಢೀಕರಣ ಪತ್ರ ಪಡೆದ ನಂತರ ಬ್ಯಾಂಕಿನಲ್ಲಿ ಶೂನ್ಯ ಎಫ್.ಡಿ.ಗಳಿರುತ್ತವೆಂದು ತಿಳಿದಿದೆ. ಆಶಾಲತಾ ನಕಲಿ ಠೇವಣಿ ಮಾಡುವ ಮೂಲಕ ಫೆಡರೇಷನ್‌ಗೆ ಮೋಸ ಮಾಡಿದ್ದಾರೆ. ಫೆಡರೇಷನ್‌ನ ಲೆಕ್ಕ ಪರಿಶೋಧಕರಿಗೂ ನಕಲಿ ದಾಖಲಾತಿ ನೀಡಿದ್ದಾರೆ. ಇವರು ನೀಡಿದ ಮೋಸದ ದಾಖಲೆಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿರುವುದಿಲ್ಲ, ಆದ್ದರಿಂದ ಫೆಡರೇಷನ್‌ನ 19.34 ಕೋಟಿ ರೂ. ದುರುಪಯೋಗಪಡಿಸಿ ಕೊಂಡಿರುವ ಆಶಾಲತಾ, ಇತರ ಆರೋಪಿಗಳು ಹಾಗೂ ಬಿಡಿಸಿಸಿ ಮತ್ತು ಅಪೆಕ್ಸ್‌ ಬ್ಯಾಂಕ್‌ನ ಮ್ಯಾನೇಜರ್‌ಗಳು ಮತ್ತು ಅಡಿಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖೀಸಲಾಗಿದೆ. ‌

ಸಿಇಒ ವಂಚಿಸಿದ್ದು ಹೇಗೆ?

 ಬ್ಯಾಂಕ್‌ನಲ್ಲಿದ್ದ 111 ಪಿಕೆಟ್‌ ಡೆಪಾಸಿಟ್‌ ಖಾತೆಗಳಲ್ಲಿ 19.34 ಕೋಟಿ ರೂ. ನಕಲಿ ಠೇವಣಿ ಬಾಂಡ್‌ ಪತ್ತೆ

 ಠೇವಣಿಗಳನ್ನು ಸಿಇಒ ಅವರೇ ಬರೆದಿದ್ದಲ್ಲದೇ ಲೆಕ್ಕ ಪರಿಶೋಧಕರಿಗೂ ನಕಲಿ ಪ್ರಮಾಣಪತ್ರ ಸಲ್ಲಿಕೆ

 ಸ್ಥಿರ ಠೇವಣಿ ಹಣ ತನ್ನ ಪತಿ ಸೋಮಶೇಖರ್‌, ವಿಜಯ್‌ ಕಿರಣ್, ಮಂಜುನಾಥ್‌, ಸುಜಯ್‌ ಎಂಬುವರಿಗೆ ವರ್ಗ

 2017ರಿಂದ 2023ರವರೆಗೆ ಮೂಲ ಸ್ಥಿರ ಠೇವಣಿ ವರ್ಗಾಯಿಸುವಾಗ ಅಧ್ಯಕ್ಷರ ನಕಲಿ ಸಹಿ ಹಾಕಿ ದಾಖಲೆಗಳ ಸೃಷ್ಟಿ

Advertisement

Udayavani is now on Telegram. Click here to join our channel and stay updated with the latest news.

Next