ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ, ಬಾಗಲಕೋಟೆ ಹಾಗೂ ರಾಯ ಚೂರು ಜಿಲ್ಲೆಗಳಲ್ಲಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದ ಆತಂಕ ಮತ್ತಷ್ಟು ಹೆಚ್ಚಾಗಿದೆ. ನೂರಾರು ಗ್ರಾಮಗಳು “ಜಲಾಘಾತ’ದಿಂದ ತತ್ತರಿಸಿ ಹೋಗಿ ದ್ದು, ನದಿ ತೀರದ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸತ್ತಿದ್ದಾರೆ. ಹಲವೆಡೆ ಸೇತುವೆಗಳು ಮುಳುಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಶನಿವಾರವೂ ಕೂಡಾ ಕೃಷ್ಣಾ ನದಿ ಉಗಮಸ್ಥಾನ ಮಹಾ ಬಳೇಶ್ವರ, ವಾರಣಾ, ನವಜಾ, ರಾಧಾ ನಗರಿ ಮತ್ತು ಪಾಟಗಾಂವ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕೊಯ್ನಾ ಅಣೆ ಕಟ್ಟಿನಿಂದ 13,500 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಇದ ರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ವೇದಗಂಗಾ ಹಾಗೂ ದೂಧ್‌ಗಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.
ಇದರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ, (ಕೃಷ್ಣಾ ನದಿ) ಕಾರದಗಾ-ಭೋಜ (ವೇದಗಂಗಾ- ದೂಧ್‌ಗಂಗಾ ನದಿ), ಮಲಿಕವಾಡ-ದತ್ತವಾಡ (ದೂಧ ಗಂಗಾ), ಭೋಜವಾಡಿ-ಕುನ್ನೂರ (ವೇದಗಂಗಾ), ಸಿದ್ನಾಳ- ಅಕ್ಕೋಳ (ವೇದಗಂಗಾ), ಜತ್ರಾಟ-ಭೀವಶಿ (ವೇದಗಂಗಾ), ಸದಲಗಾ-ಬೋರಗಾಂವ (ವೇದಗಂಗಾ-ದೂಧ್‌ಗಂಗಾ), ಯಕ್ಸಂಬಾ-ದಾನವಾಡ (ದೂಧ್‌ಗಂಗಾ ನದಿ), ರಾಯಬಾಗ ತಾಲೂಕಿನ ಕುಡಚಿ ಸೇತುವೆ (ಕೃಷ್ಣಾ ನದಿ), ರಾಯಬಾಗ-ಚಿಂಚಲಿ (ಕೃಷ್ಣಾ ), ಅಥಣಿ ತಾಲೂಕಿನ ನದಿ ಇಂಗಳಗಾಂವ-ತೀರ್ಥ (ಕೃಷ್ಣಾ), ಸಪ್ತಸಾಗರ-ಬನದವಸತಿ (ಕೃಷ್ಣಾ ), ಕೊಕಟನೂರ-ಶಿರಹಟ್ಟಿ (ಕೃಷ್ಣಾ ), ಜುಂಜರವಾಡ-ತುಬಚಿ (ಕೃಷ್ಣಾ), ಖವಟಕೊಪ್ಪ-ಶೇಗುಣಸಿ (ಕೃಷ್ಣಾ), ಕಾಗವಾಡ ತಾಲೂಕಿನ ಉಗಾರ ಕೆ.ಎಚ್ – ಉಗಾರ ಬಿ.ಕೆ, ರಸ್ತೆ (ಕೃಷ್ಣಾ) ಸೇತುವೆಗಳು ಜಲಾವೃತವಾಗಿವೆ. ಮೂಡಿಗೆರೆ, ಶೃಂಗೇರಿ, ಆಲ್ದೂರು ಸೇರಿ ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನ ಆಲೆಖಾನ್ ಬಳಿ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಪ್ರವಾಹದಲ್ಲಿ ಸಿಲುಕಿದ ದಂಪತಿ ರಕ್ಷಣೆ: ಘಟಪ್ರಭಾ ಹಾಗೂ ಮಲಪ್ರಭಾ ನದಿಗಳೂ ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ಹಿಡಕಲ್ ಹಾಗೂ ಮಲಪ್ರಭಾ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ನಡುವೆ ಶುಕ್ರವಾರ ರಾಯಭಾಗ ತಾಲೂಕಿನ ಶಿರಗೂರ ಗ್ರಾಮದ ತೋಟದಲ್ಲಿ ನದಿ ಪ್ರವಾಹಕ್ಕೆ ಸಿಲುಕಿದ್ದ ದಂಪತಿಯನ್ನು ಎನ್‌ಡಿಆರ್‌ಎಫ್ ತಂಡ ರಕ್ಷಿಸಿದೆ. ಕುಡಚಿ ಸೇತುವೆ ಮೇಲೆ ಸುಮಾರು ಐದು ಅಡಿ ನೀರು ಹರಿಯುತ್ತಿದ್ದು, ಕರ್ನಾಟಕ-ಮಹಾರಾಷ್ಟ್ರದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಬೆಳಗಾವಿ ನಗರ ಸೇರಿದಂತೆ ಖಾನಾಪುರ, ಬೈಲಹೊಂಗಲ, ಚನ್ನಮ್ಮನ ಕಿತ್ತೂರು ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದ್ದು, ಅಂಕಲಗಿ ಗ್ರಾಮದಲ್ಲಿ ಎಳೆನೀರು ಮಾರಾಟ ಮಾಡುತ್ತಿದ್ದ ಶಿವಾನಂದ ಶಂಕರ ನಾಯಕ (25) ಎಂಬುವರು ನಾಲಾಕ್ಕೆ ಬಿದ್ದು ಕೊಚ್ಚಿ ಹೋಗಿದ್ದಾರೆ.
ಬಾಗಲಕೋಟೆಯಲ್ಲಿ 11 ಸೇತುವೆಗಳು ಜಲಾವೃತ: ಬಾಗಲಕೋಟೆ ಜಿಲ್ಲೆಯಲ್ಲೂ ನದಿಗಳು ತುಂಬಿ ಹರಿಯುತ್ತಿದ್ದು, ಹನ್ನೊಂದಕ್ಕೂ ಹೆಚ್ಚು ಸೇತುವೆಗಳು ಜಲಾವೃತವಾಗಿವೆ. ಜಮಖಂಡಿ ತಾಲೂಕಿನಲ್ಲಿ ಜಂಬಗಿ-ತುಬಚಿ ದೇವೇಗೌಡ ರಸ್ತೆ, ಕಂಕಣವಾಡಿ-ಗುಹೇಶ್ವರಗಡ್ಡಿ, ಮುತ್ತೂರ-ಕಂಕಣವಾಡಿ ರಸ್ತೆಗಳು-ಸೇತುವೆಗಳು ಜಲಾವೃತಗೊಂಡಿವೆ. ತುಬಚಿಯ ಮಾರುತಿ-ಗಣೇಶ ದೇವಸ್ಥಾನಗಳು ಜಲಾವೃತಗೊಂಡಿವೆ. ಮುಧೋಳ ತಾಲೂಕಿನಲ್ಲಿ ನಂದಗಾಂವ ಸೇತುವೆ ನೀರಿನಲ್ಲಿ ಮುಳುಗಿದೆ. ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ, ನಂದಗಾಂವ, ಮುಧೋಳ ತಾಲೂಕಿನ ಮಿರ್ಜಿ, ಚನ್ನಾಳ, ಜಾಲಿಬೇರಿ ಹಾಗೂ ಮುಧೋಳ ಕೆಳಭಾಗದಲ್ಲಿರುವ ಸೇತುವೆಗಳು ಜಲಾವೃತವಾಗಿವೆ.
ಕಡಲ್ಕೊರೆತ ತೀವ್ರ: ಸುರತ್ಕಲ್, ಬೈಕಂಪಾಡಿ ಸಹಿತ ಕರಾವಳಿಯುದ್ದಕ್ಕೂ ಇದುವರೆಗೆ ಕಡಲ್ಕೊರೆತ ಉಂಟಾಗದ ಸ್ಥಳದಲ್ಲಿಯೂ ಕೊರೆತ ಉಂಟಾಗಿದ್ದು, ನಿವಾಸಿಗಳಲ್ಲಿ ತೀವ್ರ ಆತಂಕ ಎದುರಾಗಿದೆ. ಚಿತ್ರಾಪುರದಲ್ಲಿ ಕಡಲಬ್ಬರಕ್ಕೆ ವಿದ್ಯುತ್ ಕಂಬಗಳು ನೀರು ಪಾಲಾಗಿವೆ.
ರಾಯಚೂರಲ್ಲಿ ಪ್ರವಾಹ ಭೀತಿ: ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕಷ್ಣಾ ನದಿಗೆ ಹರಿಬಿಡುತ್ತಿರುವ ಹಿನ್ನೆಲೆಯಲ್ಲಿ ರಾಯ ಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೆಲ ಸೇತುವೆಗಳಲ್ಲಿ ಸಂಚಾರ ಸ್ಥಗಿತಗೊಂಡು ಜನ ಪರದಾಡುವಂತಾಗಿದೆ. ದೇವದುರ್ಗ ತಾಲೂಕಿನ ಐತಿಹಾಸಿಕ ಕೊಪ್ಪರ ಗ್ರಾಮದ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನ, ಗೂಗಲ್ ಗ್ರಾಮದ ಅಲ್ಲಮಪ್ರಭು ದೇವಸ್ಥಾನ, ಹೂವಿನಹೆಡಗಿಯ ಗಡ್ಡೆಗೂಳಿ ಬಸವಣ್ಣ ದೇವಸ್ಥಾನ ಹಾಗೂ ಅಣ್ಣೆಮಲ್ಲೇಶ್ವರದ ಅಣ್ಣೆಲಿಂಗ ದೇವಸ್ಥಾನಗಳು ಜಲಾವೃತಗೊಂಡಿವೆ. ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳಗಡೆಯಾಗಿದೆ.
ದೇಗುಲ ಜಲಾವೃತ: ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯದ 20 ಕ್ರಸ್ಟ್‌ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ ನೀರು ಹರಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ಶ್ರೀ ಛಾಯಾ ಭಗವತಿ ಗರ್ಭಗುಡಿ ದ್ವಾರದವರೆಗೆ ಪ್ರವಾಹದ ನೀರು ಬಂದಿದ್ದು, ದೇಗುಲ ಜಲಾವೃತಗೊಂಡಿದೆ. ಕಾರಣ ದೇವಿ ಉತ್ಸವ ಮೂರ್ತಿಯನ್ನು ಮೆಟ್ಟಿಲುಗಳ ಮೇಲೆ ತಂದಿಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರಾ(ಕೆ) ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ಮಳೆಯಿಂದಾಗಿ ಮಣ್ಣಿನ ಮನೆ ಕುಸಿದು ವೆಂಕಟ್ ಲಕ್ಷ್ಮಣ ವಗ್ಗೆ (60) ಮೃತಪಟ್ಟಿದ್ದಾರೆ.