Advertisement

ನೂರು ಹಾಸಿಗೆಗಳ ಆಸ್ಪತ್ರೆಗೆ ನೂರೆಂಟು ಸಮಸ್ಯೆ

12:33 PM Jun 25, 2018 | |

„ಎಸ್‌. ರಾಜಶೇಖರ
ಮೊಳಕಾಲ್ಮೂರು: ಪಟ್ಟಣದಲ್ಲಿರುವ ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದುರಿಸುತ್ತದೆ.

Advertisement

ಹಲವು ದಶಕಗಳ ಹಿಂದೆ ಕೇವಲ 45 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಾಗಿತ್ತು. ಎನ್‌.ವೈ. ಗೋಪಾಲಕೃಷ್ಣ
ಶಾಸಕರಾಗಿದ್ದಾಗ ನೂರು ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು.  ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಹಾಗೂ ಪ್ರಸ್ತುತ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ. ಕರುಣಾಕರ ರೆಡ್ಡಿ ನೂರು ಹಾಸಿಗಳ ಆಸ್ಪತ್ರೆಯನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದ್ದರು. ಆಸ್ಪತ್ರೆಗೆ ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಶ್ರೀರಾಮುಲು ಭರವಸೆ ನೀಡಿದ್ದರು.

ಆಸ್ಪತ್ರೆಯ ಉದ್ಘಾಟನೆ ನೆರವೇರಿಸಿ ಹೋದ ಬಳಿಕ ಶ್ರೀರಾಮುಲು ಇತ್ತ ತಿರುಗಿಯೂ ನೋಡಿರಲಿಲ್ಲ.
ನಂತರ ಬಂದ ಕಾಂಗ್ರೆಸ್‌ ಸರ್ಕಾರ ಕೂಡ ಆಸ್ಪತ್ರೆಗೆ ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡುವಲ್ಲಿ
ನಿರ್ಲಕ್ಷ್ಯ ತಾಳಿತು.

ಹೆಸರಿಗೆ ಮಾತ್ರ ನೂರು ಹಾಸಿಗೆಗಳ ಆಸ್ಪತ್ರೆಯಾಗಿದ್ದು ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾತ್ರ ಆಗಿಯೇ
ಇಲ್ಲ. ಸತತ ಬರಗಾಲದ ಬೇಗೆಗೆ ಸಿಲುಕಿರುವ ತಾಲೂಕಿನ ಜನರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ. ಇಲ್ಲಿ ತಜ್ಞ ವೈದ್ಯರಿಲ್ಲದ ಕಾರಣ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು , ಮಣಿಪಾಲ ಸೇರಿದಂತೆ ದೂರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಿದೆ.

ಆಸ್ಪತ್ರೆಗೆ ಔಷಧ ಮತ್ತು ಪರಿಕರಗಳು ಸರ್ಕಾರದಿಂದ ಸರಬರಾಜಾಗುತ್ತಿವೆ. ಆದರೆ ಸಾರ್ವಜನಿಕರು ಈ
ಸೌಲಭ್ಯಗಳಿಂದ ವಂಚಿತವಾಗುವಂತಾಗಿದೆ. ಮಹಿಳಾ ಮತ್ತು ಮಕ್ಕಳ ತಜ್ಞೆ ಡಾ| ಶಾರದಾ ಒಂದು ವರ್ಷಕ್ಕೂ
ಹೆಚ್ಚು ಕಾಲ ರಜೆ ಮೇಲೆ ತೆರಳಿರುವುದರಿಂದ ಸಮಸ್ತೆ ಮತ್ತಷ್ಟು ಬಿಗಡಾಯಿಸಿದೆ. ಸರ್ಕಾರಿ ಆಸ್ಪತ್ರೆಗೆ 82
ವೈದ್ಯರು ಸಿಬ್ಬಂದಿ ಹುದ್ದೆ ಮಂಜೂರಾಗಿದೆ. ಪ್ರಸ್ತುತ 30 ಜನರಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. 52 ವೈದ್ಯರು
ಮತ್ತು ಸಿಬ್ಬಂದಿಗಳ ಹುದ್ದೆಗಳು ಖಾಲಿ ಉಳಿದಿವೆ.

Advertisement

ಈ ಆಸ್ಪತ್ರೆ ಹಲವು ಸಮಸ್ಯೆ ಎದುರಿಸುತ್ತಿದ್ದರೂ ಜಿಲ್ಲಾ ಆರೋಗ್ಯಾಧಿಕಾರಿ ಸಮಸ್ಯೆ ಬಗೆಹರಿಸಲು
ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ದಿನನಿತ್ಯ ಒಳ ಮತ್ತು ಹೊರ ರೋಗಿಗಳ ಸಂಖ್ಯೆ
ಹೆಚ್ಚುತ್ತಿದೆ. ಕಾಯಂ ವೈದ್ಯರಾದ ಡಾ| ಮಂಜುನಾಥ, ಡಾ| ಪದ್ಮಾ, ನಿಯೋಜನೆಗೊಂಡ ಡಾ| ಅಚ್ಯುತ
ನಾಯಕ ಹಾಗೂ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಲವು ವೈದ್ಯರನ್ನು ನಿಯೋಜಿಸಿ
ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಆದರೆ ರೋಗಿಗಳ ಸಂಖ್ಯೆಗೆ ತಕ್ಕಷ್ಟು ವೈದ್ಯರಿಲ್ಲದೇ ಇರುವುದರಿಂದ ಇರುವ ವೈದ್ಯರ ಕಾರ್ಯದೊತ್ತಡ ಹೆಚ್ಚುತ್ತಿದೆ. ಅಲ್ಲದೆ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಅಭಾವವಿದೆ. ರೋಗಿಗಳು ಮತ್ತು ಅವರ ಸಂಬಂಧಿಗಳು ಹೊರಗಿನಿಂದ ನೀರು ತರಬೇಕಾದ ಪರಿಸ್ಥಿತಿ ಇದೆ. ಅಂದು ಆರೋಗ್ಯ ಸಚಿವರಾಗಿದ್ದ ಬಿ. ಶ್ರೀರಾಮುಲು ಅವರೇ ಇಂದು ಮೊಳಕಾಲ್ಮೂರು ಕ್ಷೇತ್ರದ ಶಾಸಕರಾಗಿದ್ದಾರೆ. ಇನ್ನಾದರೂ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಮತ್ತು ಸಿಬ್ಬಂದಿ ನೇಮಕಕ್ಕೆ ಮುಂದಾಗಬೇಕಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡಲು ಕಾರಣಾಂತರದಿಂದ ಆಗಲಿಲ್ಲ. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಲಿಸುತ್ತೇನೆ. ವೈದ್ಯರು ಮತ್ತು ಸಿಬ್ಬಂದಿ ನೇಮಕಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಬಿ. ಶ್ರೀರಾಮುಲು, ಶಾಸಕರು.

ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರನ್ನು ನಿಯೋಜಿಸಿದರೂ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದರಿಂದ ವೈದ್ಯರ ಕೊರತೆ ಎದುರಾಗಿದೆ. ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಮತ್ತು ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು.

ಡಾ| ಬಿ.ವಿ. ನೀರಜ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next