Advertisement
ಕಾಂಗ್ರೆಸ್-ಜೆಡಿಎಸ್ ನಾಯಕರ ಗೊಂದಲದ ಹೇಳಿಕೆ, ವಿವಾದಗಳ ನಡುವೆಯೇ ಸಮ್ಮಿಶ್ರ ಸರ್ಕಾರ 100 ದಿನ ಪೂರ್ಣಗೊಳಿಸಿದೆ. ರೈತರ ಸಾಲ ಮನ್ನಾ, ಭತ್ತ ನಾಟಿ , ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಆಳವಡಿಕೆಗೆ ಕ್ರಮ, ಜನತಾದರ್ಶನ, ಆರೋಗ್ಯ ಕರ್ನಾಟಕ ಜಾರಿಯಂತಹ ಕ್ರಮಗಳ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗುವ ಪ್ರಯತ್ನ ಮಾಡಿದ್ದಾರೆ.
Related Articles
Advertisement
ಇನ್ನು, ಹಿಂದಿನ ಸರ್ಕಾರದ ಅನ್ನಭಾಗ್ಯ ಸೇರಿ ಹಲವು ಯೋಜನೆ ಮುಂದುವರಿಸಿರುವ ರಾಜ್ಯ ಸರ್ಕಾರ ಕಳೆದ ಸರ್ಕಾರದಲ್ಲಿ ರೂಪಿಸಿದ್ದ ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿದೆ.ರೈತರ ಸಾಲ ಮನ್ನಾ ವಿಚಾರದಲ್ಲಂತೂ ಗಟ್ಟಿ ನಿರ್ಧಾರ ಮಾಡಿ 40 ಸಾವಿರ ಕೋಟಿ ರೂ.ವರೆಗೆ ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಚಾಲ್ತಿ ಸಾಲ ಮನ್ನಾ ಘೊಷಣೆ ಮಾಡಿ ಆ ಕುರಿತು ಅಧಿಸೂಚನೆ ಹೊರಡಿಸಿದ್ದು ಪ್ರಮುಖ ಸಾಧನೆ ಎನ್ನಬಹುದು. ಜತೆಗೆ ಖಾಸಗಿ ಹಾಗೂ ಲೇವಾದೇವಿದಾರರ ಮೇಲೆ ನಿಯಂತ್ರಣಕ್ಕೆ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವುದು ಒಳ್ಳೆಯ ತಿರ್ಮಾನವೇ. ಆದರೆ, ಮುಂದಿನ ದಿನಗಳಲ್ಲಿ ಈ ತೀರ್ಮಾನ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಕಾದು ನೋಡಬೇಕಾಗಿದೆ. ಒಂದು ರೀತಿಯಲ್ಲಿ ಹೇಳಬೇಕಾದರೆ ಸಮ್ಮಿಶ್ರ ಸರ್ಕಾರಕ್ಕೆ ಈ ನೂರು ದಿನಗಳಲ್ಲಿ ದೊಡ್ಡ ಮಟ್ಟದ ಸವಾಲುಗಳೇನೂ ಎದುರಾಗಿಲ್ಲ. ಆದರೆ, ಸರ್ಕಾರ ಜಾಸ್ತಿ ದಿನ ಉಳಿಯಲ್ಲ ಎಂಬ ಮಾತು ಮೊದಲ ದಿನದಿಂದಲೇ ಕೇಳಿಬರುತ್ತಲೇ ಇರುವುದರಿಂದ ಆಡಳಿತ ಯಂತ್ರ ಕುಮಾರಸ್ವಾಮಿಯವರ ನಿರೀಕ್ಷೆಗೆ ತಕ್ಕಂತೆ ಚುರುಕುಗೊಳ್ಳಲಿಲ್ಲ. ಅಧಿಕಾರ ವಲಯದಲ್ಲೂ ಸರ್ಕಾರ ಎಷ್ಟು ದಿನವೋ ಎಂಬ ಮನಸ್ಥಿತಿಯಿದೆ. ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದ ಕಾಂಗ್ರೆಸ್-ಜೆಡಿಎಸ್ ಫಲಿತಾಂಶದ ನಂತರ ಬದಲಾದ ಪರಿಸ್ಥಿತಿಯಲ್ಲಿ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿತು. ಒಂದಷ್ಟು ಆಂತರಿಕ ಭಿನ್ನಾಭಿಪ್ರಾಯವೂ ಎರಡೂ ಪಕ್ಷಗಳಲ್ಲಿ ಇರುವುದರಿಂದ ಸಹಜವಾಗಿ ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನಗಳಿವೆ.
ಆದರೆ, ಮುಂದಿನ ದಿನಗಳಲ್ಲಿ ಗೊಂದಲ, ಅನುಮಾನಗಳಿಗೆ ಅವಕಾಶ ಇಲ್ಲದೆ, ಯಾವುದೇ ವಿವಾದಗಳಿಗೆ ಆಸ್ಪದ ನೀಡದೆ ಸರ್ಕಾರ ಮುನ್ನಡೆಸಬೇಕಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಿಂದ ವಿಧಾನಸೌಧದವರೆಗೆ ಆಡಳಿತ ಯಂತ್ರ ಚುರುಕುಗೊಳಿಸಬೇಕಿದೆ. ಕಾಡಿದ ವಿವಾದಗಳು
ಉತ್ತರ ಕರ್ನಾಟಕ ಪ್ರತ್ಯೇಕ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ ಹೇಳಿಕೆ ವಿವಾದದ ಸ್ವರೂಪ ಪಡೆಯಿತು. ವಿಧಾನಸೌಧ ಪ್ರವೇಶ ನಿರ್ಬಂಧ ಹೇರುವ ವಿಚಾರ ವಿವಾದಕ್ಕೆ ಕಾರಣವಾಯಿತು. ಮುಖ್ಯಮಂತ್ರಿಯಾಗಿ ಎಷ್ಟು ದಿನ ಇರ್ತೇನೋ ಗೊತ್ತಿಲ್ಲ, ಇದ್ದಷ್ಟು ದಿನ ಒಳ್ಳೆಯ ಕೆಲಸ ಮಾಡ್ತೇನೆ ಎಂದು ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಹಾಗೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂಬ ಬಗ್ಗೆ ಸಚಿವರು-ಶಾಸಕರ ಮಾತುಗಳು ಗೊಂದಲ ಮೂಡಿಸಿತು. ಕುಮಾರಸ್ವಾಮಿಯವರು ಮುಖ್ಯಮಂತ್ರಿ ದೇವಾಲಯಗಳ ಭೇಟಿ ಮಾಡುತ್ತಿದ್ದಾಗ ಮಡಿಕೇರಿಯಲ್ಲಿ ಮಳೆಯ ಪ್ರವಾಹಕ್ಕೆ ಸಂಕಷ್ಟಕ್ಕೊಳಗಾದ ಬಾಲಕ ಮುಖ್ಯಮಂತ್ರಿಯವರೇ ನಮ್ಮ ಸಮಸ್ಯೆ ಕೇಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದ್ದು ವೈರಲ್ ಆಗಿತ್ತು.