ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡ ನಂತರ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಜನರು ಗೊಂದಲ ಮತ್ತು ಭೀತಿಗೊಳಗಾಗಿದ್ದಾರೆ. ಏತನ್ಮಧ್ಯೆ ನ್ಯೂ ಕಾಬೂಲ್ ಬ್ಯಾಂಕ್ ನ ನೂರಾರು ಮಂದಿ ಸಿಬಂದಿಗಳು ಬ್ಯಾಂಕ್ ಹೊರಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಕಳೆದ ಐದಾರು ತಿಂಗಳ ವೇತನವನ್ನು ಕೊಡುವಂತೆ ಆಗ್ರಹಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಕಾಮುಕರನ್ನ ಬಂಧಿಸುವ ಕಾನೂನು ಮತ್ತಷ್ಟು ಗಟ್ಟಿಯಾಬೇಕು : ನಟಿ ಶ್ರುತಿ
ಮತ್ತೊಂದೆಡೆ ಎಟಿಎಂ ಮುಂದೆ ನೂರಾರು ಮಂದಿ ಕ್ಯೂ ನಿಂತಿದ್ದು, ಎಟಿಎಂನಲ್ಲಿ ಕ್ಯಾಶ್ ಇಲ್ಲದೇ ಜನರು ಕಂಗಾಲಾಗಿರುವುದಾಗಿ ವರದಿ ವಿವರಿಸಿದೆ. ಮೂರು ದಿನಗಳ ಹಿಂದಷ್ಟೇ ಬ್ಯಾಂಕ್ ವ್ಯಹಾರ ಆರಂಭಿಸಿದ್ದರು ಕೂಡಾ ಎಟಿಎಂನಿಂದ ಹಣ ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ಅಫ್ಘಾನ್ ಪ್ರಜೆಗಳು ದೂರಿದ್ದಾರೆ.
ಕೆಲವು ಕಡೆ ಎಟಿಎಂ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಕೇವಲ ದಿನಕ್ಕೆ 200 ಡಾಲರ್ ನಷ್ಟು ಮಾತ್ರ ಹಣ ತೆಗೆಯಲು ಸಾಧ್ಯವಾಗುತ್ತಿದೆ. ಇದರ ಪರಿಣಾಮ ಎಟಿಎಂ ಮುಂದೆ ಬೃಹತ್ ಕ್ಯೂ ಕಂಡುಬಂದಿರುವುದಾಗಿ ವರದಿ ತಿಳಿಸಿದೆ.
ಕಾಬೂಲ್ ನಲ್ಲಿ ಬೀಡುಬಿಟ್ಟಿರುವ ಅಮೆರಿಕ ಸೇನಾಪಡೆ ಆಗಸ್ಟ್ 31ರೊಳಗೆ ವಾಪಸ್ ತೆರಳಬೇಕು ಎಂದು ತಾಲಿಬಾನ್ ಅಂತಿಮ ಗಡುವು ನೀಡಿದೆ. ಅಷ್ಟರೊಳಗೆ ಅಮೆರಿಕ ತನ್ನ ಪ್ರಜೆಗಳನ್ನು ಏರ್ ಲಿಫ್ಟ್ ಮಾಡಬೇಕಾಗಿದೆ. ಅಲ್ಲದೇ ಅಮೆರಿಕ ಆ.31ರ ಒಳಗೆ ಸೇನೆಯನ್ನು ಸಂಪೂರ್ಣವಾಗಿ ವಾಪಸ್ ಕರೆಯಿಸಿಕೊಳ್ಳುತ್ತದೋ ಅಥವಾ ಮುಂದುವರಿಸುತ್ತದೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಾಬೂಲ್ ವಿಮಾನ ನಿಲ್ದಾಣ ಸ್ಫೋಟದಲ್ಲಿ ಇಬ್ಬರು ಪತ್ರಕರ್ತ ಸಹೋದರರು ಹಾಗೂ ವೈದ್ಯರೊಬ್ಬರು ಸಾವನ್ನಪ್ಪಿದ್ದರು ಎಂದು ಅಫ್ಘಾನ್ ಸ್ಥಳೀಯ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಕಾಬೂಲ್ ನಗರದಲ್ಲಿ ಭಾರೀ ಗುಂಡಿನ ದಾಳಿ ನಡೆರುವುದಾಗಿ ಭಾರತದ ವಾಯುಸೇನೆ ಕಮಾಂಡರ್ (ನಿವೃತ್ತ) ಅನುಮಾ ಆಚಾರ್ಯ ತಿಳಿಸಿದ್ದಾರೆ.