Advertisement

ಢವಳೇಶ್ವರ ಸೇತುವೆ ಸಂಚಾರಕ್ಕೆ ಮುಕ್ತ : ನೂರಾರು ಎಕರೆ ಕಬ್ಬು ನಾಶ

08:48 PM Aug 03, 2021 | Team Udayavani |

ಮಹಾಲಿಂಗಪುರ: ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟಗಳಲ್ಲಿನ ಮಹಾಮಳೆಯಿಂದಾಗಿ ಉಂಟಾದ ಪ್ರವಾಹದಿಂದಾಗಿ ಕಳೆದ 12 ದಿನಗಳಿಂದ ಘಟಪ್ರಭಾ ನದಿಯು ಉಕ್ಕಿ ಹರಿಯುತ್ತಿರುವ ಕಾರಣ ನದಿಪಾತ್ರದ ಗ್ರಾಮಗಳು ಜಲಾವೃತವಾಗಿ ಸಾಕಷ್ಟು ಆವಾಂತರಗಳನ್ನು ಸೃಷ್ಠಿಸಿದೆ.

Advertisement

ನೂರಾರು ಎಕರೆ ಕಬ್ಬಿನ ಬೆಳೆ ನಾಶ : ಘಟಪ್ರಭಾ ಪ್ರವಾಹದಿಂದಾಗಿ ಸುಮಾರು 8-10 ದಿನಗಳವರೆಗೆ ಮಾರಾಪೂರ, ಢವಳೇಶ್ವರ, ಮದಭಾಂವಿ, ನಂದಗಾಂವ, ನಾಗರಾಳ, ಮಿರ್ಜಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿನ ನೂರಾರು ಎಕರೆ ಕಬ್ಬಿನ ಬೆಳೆಯು ಸಂಪೂರ್ಣ ಜಲಾವೃತವಾಗಿತ್ತು. ಕಳೆದ 3-4 ದಿನಗಳಿಂದ ನದಿಯ ನೀರಿನ ಹರಿವು ಕಡಿಮೆಯಾಗುತ್ತಿದೆ. ಆದರೆ ಜಲಾವೃತವಾಗಿದ್ದ ಕಬ್ಬು ನಾಶವಾಗಿ ರೈತರು ಕಣ್ಣಿರು ಸುರಿಸುವಂತಾಗಿದೆ.

ಮೂರನೇ ವರ್ಷವು ಪ್ರವಾಹ ಸಂಕಟ : ನದಿ ಪಾತ್ರದಲ್ಲಿನ ಗ್ರಾಮಗಳು ಹಾಗೂ ರೈತರ ಬೆಳೆಗಳು ಪ್ರವಾಹ ಪರಿಣಾಮ ಎದುರಿಸುತ್ತಿರುವುದು ಇದು ಸತತ ಮೂರನೇ ವರ್ಷ. ಇದರಿಂದಾಗಿ ರೈತರು ಕಷ್ಟಪಟ್ಟ ಬೆಳೆಸಿದ ಬೆಳೆಗಳು ಜಲಾವೃತವಾಗಿ ಹಾನಿಯನ್ನು ಅನುಭವಿಸುವಂತಾಗಿದೆ. ಅದರಲ್ಲೂ ಎರಡು ವರ್ಷದಿಂದ ಕೋವಿಡ್ ಲಾಕಡೌನ್ ಹಾಗೂ ಮೂರು ವರ್ಷಗಳಿಂದ ಪ್ರವಾಹ ಪರಿಣಾಮದಿಂದಾಗಿ ರೈತರ ಪರಿಸ್ಥಿತಿಯು ಬಹಳ ಗಂಭೀರವಾಗಿದೆ ಎಂಬುವದು ನದಿಪಾತ್ರದ ಗ್ರಾಮಗಳ ರೈತರ ಅಳಲಾಗಿದೆ.

ಢವಳೇಶ್ವರ ಸೇತುವೆ ಸಂಚಾರಕ್ಕೆ ಮುಕ್ತ : ಮಂಗಳವಾರ ಮಧ್ಯಾಹ್ನವರೆಗೂ ಢವಳೇಶ್ವರ ಸೇತುವೆ ಮೇಲೆ ಎರಡು ಅಡಿಗಳಷ್ಟು ನದಿ ಇರುವ ಕಾರಣ ಸಂಚಾರವಿರಲಿಲ್ಲ. ಮಂಗಳವಾರ ಸಂಜೆ ೬ರ ನಂತರ ಸೇತುವೆಯ ಮೇಲೆ ಒಂದು ಅಡಿಯಷ್ಟು ನೀರಿದ್ದರು ಸಹ ಪ್ರಯಾಣಿಕರು ಮತ್ತು ವಾಹನಗಳ ಸಂಚಾರ ಪ್ರಾರಂಭವಾಗಿದೆ. ಈ ಮೂಲಕ ಜುಲೈ 22 ರಂದು ಜಲಾವೃತವಾಗಿದ್ದ ಢವಳೇಶ್ವರ ಸೇತುವೆಯು ಆಗಸ್ಟ್ ೪ ಬುಧವಾರ ಮುಂಜಾನೆಯಿಂದ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗಲಿದೆ. ಈ ಮೂಲಕ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಗಡಿಗ್ರಾಮಗಳ ಸಂಪರ್ಕ ಪುನಃ ಕಲ್ಪಿಸುವ ರಬಕವಿ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಮೊದಲಿನಂತೆ ಮುಂದುವರೆಯಲಿದೆ.

Advertisement

ಮಂಗಳವಾರದ ಮಧ್ಯಾಹ್ನದ ಮಾಹಿತಿಯಂತೆ ದುಪದಾಳ ಜಲಾಶಯಕ್ಕೆ ಹಿಡಕಲ್ ಜಲಾಶಯದಿಂದ ೯೩೦೦ ಕ್ಯೂಸೆಕ್, ಹಿರಣ್ಯಕೇಶಿ ನದಿಯಿಂದ ೪೨೭೩ ಕ್ಯೂಸೆಕ್ ಸೇರಿ ೧೩೫೭೩ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಅದರಲ್ಲಿ ೧೧೧೭೩ ಕ್ಯೂಸೆಕ್ ಘಟಪ್ರಭಾ ನದಿಗೆ, ೨೪೦೦ ಕ್ಯೂಸೆಕ್ ನೀರನ್ನು ಜಿಎಲ್‌ಬಿಸಿ ಕಾಲುವೆಗೆ ಹರಿಸಲಾಗುತ್ತಿದೆ. ೫೧ ಟಿಎಂಸಿ ನೀರಿನ ಸಂಗ್ರಹವುಳ್ಳ ಹಿಡಕಲ್ ಜಲಾಶಯದಲ್ಲಿ ಮಂಗಳವಾರ ಮುಂಜಾನೆವರೆಗೆ ೪೮.೯೬೯ ನೀರು ಸಂಗ್ರಹವಾಗಿದೆ. ೭೭೧೫ ಕ್ಯೂಸೆಕ್ ಒಳಹರಿವು ಇದ್ದು, ಜಿಆರ್‌ಬಿಸಿ ಕಾಲುವೆಗೆ ೧೫೦೦ ಹಾಗೂ ನದಿಗೆ ೧೦೦೩೯ ಸೇರಿ ಒಟ್ಟು ೧೧೬೬೦ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next