ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಒಂದನೇ ಗುತ್ತಿನ ಅಂಮ್ಚ ಮನೆತನದವರು ದಾನವಾಗಿ ನೀಡಿದ ಸ್ಥಳದಲ್ಲಿ 1912ರಲ್ಲಿ ಶಾಲೆ ಆರಂಭಗೊಂಡು ಯಶಸ್ವಿ ಶತಮಾನ ಕಂಡು ಮುನ್ನಡೆಯುತ್ತಿದೆ.
Advertisement
ಅಂಡಾರು ಹಾಗೂ ಪರಿಸರದ ಗ್ರಾಮಗಳಲ್ಲಿ ಶಾಲೆಗಳು ಇಲ್ಲದೆ ಇರುವುದನ್ನು ಮನಗಂಡ ಸ್ಥಳೀಯರು ಸುಮಾರು 69 ಸೆಂಟ್ಸ್ ಜಾಗದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಿದ್ದರು. ಸುಮಾರು 45 ವರ್ಷಗಳವರೆಗೆ ಕಿರಿಯ ಪ್ರಾಥಮಿಕ ಶಾಲೆಯಾಗಿಯೇ ಮುಂದುವರಿದು 1956-57ನೇ ಸಾಲಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತ್ತು. ಶಾಲೆಯ ಮೊದಲ ಮುಖ್ಯ ಶಿಕ್ಷಕರಾಗಿ ಅನಂತರಾಜ ಹೆಗ್ಡೆ ಸೇವೆ ಸಲ್ಲಿಸಿದ್ದರು. ಶಾಲೆ ಆರಂಭವಾದ ದಿನಗಳಲ್ಲಿ ಅಂಡಾರು, ಶಿರ್ಲಾಲು, ಕಾಡುಹೊಳೆ, ಮಂಗಳನಗರ, ಬೊಂಡುಕುಮೇರಿ ಭಾಗಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಾ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದರು.
Related Articles
Advertisement
ಪ್ರಸ್ತುತ ಶಾಲೆಯು ಸಾಕಷ್ಟು ತರಗತಿ ಕೊಠಡಿಯನ್ನು ಹೊಂದಿದ್ದು, ಶಾಲಾ ಆವರಣ ಗೋಡೆ, ಕುಡಿಯುವ ನೀರಿನ ಬಾವಿ, ಅಕ್ವಾಗಾರ್ಡ್, ಅಡುಗೆ ಕೋಣೆ, ಸುಸಜ್ಜಿತ ಸಭಾಂಗಣ, ಪ್ರೊಜೆಕ್ಟರ್ ಸಹಿತ ಎಜ್ಯುಸ್ಯಾಟ್, ರಂಗಮಂದಿರ, ಶೌಚಾಲಯ ಸೇರಿದಂತೆ ಮೂಲ ಅವಶ್ಯಕತೆಗಳನ್ನು ಶಾಲೆ ಒಳಗೊಂಡಿದೆ.
ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಭಾಗಿತ್ವದಲ್ಲಿ ತರಕಾರಿತೋಟ, ಹೂ ತೋಟ ನಿರ್ಮಿಸಲಾಗಿದ್ದು, ಸ್ವತ್ಛತೆ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಲಾಗುತ್ತಿದೆ. “ನಲಿದು ಕಲಿಯೋಣ ಬದುಕು ರೂಪಿಸೋಣ’ ಧ್ಯೇಯ ವಾಕ್ಯವನ್ನು ಶಾಲೆಯಲ್ಲಿ ಅಳವಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕಳೆದ 100 ವರ್ಷಗಳಿಂದಲೂ ಕಾಯ್ದುಕೊಂಡು ಬರಲಾಗಿದೆ.
2012ರಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿ ಶತಮಾನೋತ್ಸವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ಈ ಸಂದರ್ಭ ಶಾಲೆಗೆ ಅಗತ್ಯವಿರುವ ಸಭಾಭವನ, ರಂಗಮಂದಿರ ಸೇರಿದಂತೆ ಬಹುತೇಕ ಮೂಲ ಸೌಕರ್ಯಗಳನ್ನು ನಿರ್ಮಾಣ ಮಾಡಲಾಗಿದೆ. ಶಾಲೆಯ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಪ್ರತಿಭಾ ಕಾರಂಜಿಗಳಲ್ಲಿ ಪ್ರತೀ ವರ್ಷ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿ ಬಹುಮಾನ ಪಡೆಯುತ್ತಿದ್ದಾರೆ.
ಗುಣಮಟ್ಟದ ಶಿಕ್ಷಣ ಶಿಕ್ಷಣ ವಂಚಿತರಾಗುತ್ತಿದ್ದ ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆಯ ಸ್ಥಾಪನೆಯಾಗಿದ್ದು, ಗುಣ ಮಟ್ಟದ ಶಿಕ್ಷಣವನ್ನು ಶಿಕ್ಷಕರು ನೀಡುತ್ತಾ ಬಂದಿರುವ ಪ್ರತಿಫಲವಾಗಿ ಕಳೆದ 108 ವರ್ಷಗಳಿಂದ ಶಾಲೆಯಲ್ಲಿ ಮಕ್ಕಳ ಕಲರವ ಇರುವಂತಾಗಿದೆ. ಗ್ರಾಮಸ್ಥರ ಪರಿಪೂರ್ಣ ಸಹಕಾರದೊಂದಿಗೆ ಶಾಲೆ ಮೂಲ ಸೌಕರ್ಯ ಒಳಗೊಂಡಿದೆ.
-ಅಂಡಾರು ಮಹಾವೀರ ಹೆಗ್ಡೆ, ಹಳೆ ವಿದ್ಯಾರ್ಥಿ (ಖ್ಯಾತ ಉದ್ಯಮಿ) ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆಯ ನಡುವೆಯೂ ನಮ್ಮ ಶಾಲೆ ಸಾಕಷ್ಟು ವಿದ್ಯಾರ್ಥಿಗಳನ್ನು ಒಳಗೊಂಡಿದ್ದು, ಗ್ರಾಮಸ್ಥರ ಸಹಕಾರ ಹಾಗೂ ಕೊಡುಗೆಗಳಿಂದ ಶಾಲೆ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ.
– ಕೆ.ಎಂ. ಹರಿಣಿ ಶೆಟ್ಟಿ, ಮುಖ್ಯ ಶಿಕ್ಷಕರು - ಜಗದೀಶ ಅಜೆಕಾರು